ಪೋಕ್ಸೋ ಪ್ರಕರಣ: ಯಡಿಯೂರಪ್ಪ ವಿರುದ್ಧ ಬಂಧನ ವಾರೆಂಟ್‌ ಜಾರಿ ಮಾಡಲು ಕೋರ್ಟ್‌ ಆದೇಶ

ಪೋಕ್ಸೋ ಪ್ರಕರಣ: ಯಡಿಯೂರಪ್ಪ ವಿರುದ್ಧ ಬಂಧನ ವಾರೆಂಟ್‌ ಜಾರಿ ಮಾಡಲು ಕೋರ್ಟ್‌ ಆದೇಶ

ಬೆಂಗಳೂರು: ಪೋಕ್ಸೋ ಪ್ರಕರಣದಲ್ಲಿ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪಗೆ ಬಂಧನ ಭೀತಿ ಎದುರಾಗಿದ್ದು, ಯಡಿಯೂರಪ್ಪಗೆ ಬೆಂಗಳೂರಿನ 1ನೇ ತ್ವರಿತಗತಿ ನ್ಯಾಯಾಲಯ ಜಾಮೀನು ರಹಿತ ವಾರಂಟ್ ಜಾರಿಗೊಳಿಸಿ ಆದೇಶಿಸಿದೆ. ವಿಚಾರಣೆಗೆ ಬಿಎಸ್​ ಯಡಿಯೂರಪ್ಪ ಹಾಜರಾಗದ ಹಿನ್ನೆಲೆ ವಾರಂಟ್ ಹೊರಡಿಸಲು ಪೊಲೀಸರು ನಿನ್ನೆ(ಜೂ.12) ತ್ವರಿತ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಇದೀಗ ನ್ಯಾಯಾಲಯ ವಾರಂಟ್​ ಜಾರಿ ಮಾಡಿದೆ.

ಪೋಕ್ಸೋ 1ನೇ ಫಾಸ್ಟ್ ಟ್ರ್ಯಾಕ್ ಕೋರ್ಟ್ ನ ನ್ಯಾಯಾಧೀಶರಾದ ರಮೇಶ್ ಅವರು ಬಿಎಸ್ ಯಡಿಯೂರಪ್ಪ ವಿರುದ್ಧ ಜಾಮೀನು ರಹಿತ ಬಂಧನ ವಾರೆಂಟ್ ಹೊರಡಿಸಿದ್ದಾರೆ. ಇದೀಗ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪನವರಿಗೆ ದೊಡ್ಡ ಸಂಕಷ್ಟ ಎದುರಾಗಿದೆ.

ಪ್ರಕರಣಕ್ಕೆ ಸಂಬಂಧಿಸಿ ಜೂನ್ 15ರೊಳಗೆ ಚಾರ್ಜ್​ಶೀಟ್ ಸಲ್ಲಿಸಬೇಕಿದೆ. ಹೀಗಾಗಿ ಯಡಿಯೂರಪ್ಪನವರಿಗೆ ವಿಚಾರಣೆಗೆ ಬರುವಂತೆ ನಿನ್ನೆ ಸಿಐಡಿ ಪೊಲೀಸರು ನೊಟೀಸ್ ನೀಡಿದ್ದರು. ಆದರೆ ಇದಕ್ಕೆ ಬಿಎಸ್ ಯಡಿಯೂರಪ್ಪ ಜೂನ್ 17ರಂದು ವಿಚಾರಣೆಗೆ ಹಾಜರಾಗುವುದಾಗಿ ಪತ್ರ ಬರೆದಿದ್ದರು. ವಿಚಾರಣೆಗೆ ಬಿಎಸ್​ ಯಡಿಯೂರಪ್ಪ ಹಾಜರಾಗದ ಹಿನ್ನೆಲೆ ನಿನ್ನೆ ಪೊಲೀಸರು ಬೆಂಗಳೂರಿನ 42ನೇ ಎಸಿಎಂಎಂ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದು ಯಡಿಯೂರಪ್ಪ ವಿರುದ್ಧ ಜಾಮೀನು ರಹಿತ ​ವಾರಂಟ್ ಹೊರಡಿಸುವಂತೆ ಮನವಿ ಮಾಡಿದ್ದರು.

ಏತನ್ಮಧ್ಯೆ, ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ಕೋರಿ ಕರ್ನಾಟಕ ಹೈಕೋರ್ಟ್‌ಗೆ ಗುರುವಾರ ಯಡಿಯೂರಪ್ಪ ಅರ್ಜಿ ಸಲ್ಲಿಸಿದ್ದು ಅರ್ಜಿಯನ್ನು ನ್ಯಾಯಾಲಯ ಇನ್ನಷ್ಟೇ ಕೈಗೆತ್ತಿಕೊಳ್ಳಬೇಕಿದೆ.

ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪಕ್ಕೆ ಸಂಬಂಧಿಸಿ ಯಡಿಯೂರಪ್ಪ ವಿರುದ್ಧ ಬೆಂಗಳೂರಿನ ಸದಾಶಿವನಗರ ಠಾಣೆಯಲ್ಲಿ ಪೋಕ್ಸೋ ಪ್ರಕರಣ ದಾಖಲಾಗಿತ್ತು. ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ವಿಚಾರಣೆಗೆ ಹಾಜರಾಗುವಂತೆ ಬಿ ಎಸ್ ಯಡಿಯೂರಪ್ಪಗೆ ಸಿಐಡಿ ನೋಟಿಸ್ ನೀಡಿತ್ತು. ಮಹಿಳೆಯೊಬ್ಬರು ತಮ್ಮ ಅಪ್ರಾಪ್ತ ಪುತ್ರಿಯೊಂದಿಗೆ ಬಿಎಸ್‌ವೈ ಅಸಭ್ಯವಾಗಿ ವರ್ತಿಸಿದ್ದಾರೆಂದು ಆರೋಪಿಸಿ ಕಳೆದ ಮಾರ್ಚ್ ತಿಂಗಳಲ್ಲೇ ದೂರು ನೀಡಿದ್ದರು. ಆದರೆ ಕಳೆದ ತಿಂಗಳು ಆ ಮಹಿಳೆ ಅನಾರೋಗ್ಯದಿಂದ ಮೃತಪಟ್ಟಿದ್ದರು.

ಈ ಮಧ್ಯೆ  ಪ್ರಕರಣದಲ್ಲಿ ಯಡಿಯೂರಪ್ಪ ಅವರನ್ನು ಬಂಧಿಸುವಂತೆ ಕೋರಿ ಕರ್ನಾಟಕ ಹೈಕೋರ್ಟ್‌ಗೆ ಬುಧವಾರ ರಿಟ್ ಅರ್ಜಿ ಸಲ್ಲಿಕೆಯಾಗಿದೆ. ಹಿರಿಯ ನಾಯಕನ ವಿರುದ್ಧ ದೂರು ದಾಖಲಾಗಿ ತಿಂಗಳು ಕಳೆದರೂ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿ ಸಂತ್ರಸ್ತೆಯ ಸಹೋದರ ರಿಟ್ ಅರ್ಜಿ ಸಲ್ಲಿಸಿದ್ದಾರೆ.

ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಸರ್ಕಾರ ಪ್ರಾಸಿಕ್ಯೂಷನ್ ಪರವಾಗಿ ವಕಾಲತ್ತು ವಹಿಸಲು ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ (ಎಸ್‌ಪಿಪಿ) ಅಶೋಕ್ ಎನ್.ನಾಯಕ್ ಅವರನ್ನು ನೇಮಿಸಿದೆ. ಮೂಲಗಳ ಪ್ರಕಾರ ಕಾಂಗ್ರೆಸ್ ಸರ್ಕಾರ ಯಡಿಯೂರಪ್ಪ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ನಿರ್ಧರಿಸಿದೆ.

Ads on article

Advertise in articles 1

advertising articles 2

Advertise under the article