ಚಿಕ್ಕಬಳ್ಳಾಪುರ ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ಮನೆ ಮೇಲೆ ಕಲ್ಲು ತೂರಾಟ

ಚಿಕ್ಕಬಳ್ಳಾಪುರ ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ಮನೆ ಮೇಲೆ ಕಲ್ಲು ತೂರಾಟ

ಚಿಕ್ಕಬಳ್ಳಾಪುರ: ಲೋಕಸಭೆ ಚುನಾವಣೆ ಫಲಿತಾಂಶ ಹೊರಬಿದ್ದ ಬೆನ್ನಲ್ಲೇ ಮಂಗಳವಾರ ರಾತ್ರಿ ಚಿಕ್ಕಬಳ್ಳಾಪುರ ಕ್ಷೇತ್ರದ ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ ಮನೆ ಮೇಲೆ ಕಲ್ಲು ತೂರಾಟ ನಡೆದಿದೆ.

ಚಿಕ್ಕಬಳ್ಳಾಪುರ ನಗರದ ಕಂದವಾರದಲ್ಲಿರುವ ಶಾಸಕ ಪ್ರದೀಪ್ ಮನೆಯ ಮೇಲೆ ಕಿಡಿಗೇಡಿಗಳು ನಡೆಸಿದ ಕಲ್ಲುತೂರಾಟದಲ್ಲಿ ಕಿಟಕಿ ಗಾಜು ಒಡೆದಿದೆ. ಸ್ಥಳಕ್ಕೆ ಚಿಕ್ಕಬಳ್ಳಾಪುರ ಪೊಲೀಸ್ ಉಪಾಧೀಕ್ಷಕ ಎಸ್. ಶಿವಕುಮಾರ್, ಪೊಲೀಸ್ ಇನ್ಸ್ಪೆಕ್ಟರ್ ಎಂ.ಮಂಜುನಾಥ ಹಾಗೂ ಸಿಬ್ಬಂದಿ ಶಾಸಕರ ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮನೆಯ ಸಿಸಿಟಿವಿ ಪರಿಶೀಲನೆ ನಡೆಸಲಾಗಿದ್ದು ಮನೆಯಲ್ಲಿದ್ದ ಸಿಬ್ಬಂದಿಗಳಿಂದ ಮಾಹಿತಿ ಪಡೆದುಕೊಂಡಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಡಾ.ಕೆ.ಸುಧಾಕರ್ ಗೆಲುವು ಹಿನ್ನಲೆ ಕಲ್ಲು ತೂರಾಟ ನಡೆದಿದೆ ಎಂಬ ಶಂಕೆ ವ್ಯಕ್ತವಾಗಿದೆ.

ಘಟನೆ ಸಂಬಂಧ ಪ್ರತಿಕ್ರಿಯಿಸಿರುವ ಶಾಸಕ ಪ್ರದೀಪ್ ಈಶ್ವರ್ ಅವರ ತಮ್ಮ ಚೇತನ್, ಲೋಕಸಭಾ ಚುನಾವಣೆಯಲ್ಲಿ ಡಾ.ಕೆ.ಸುಧಾಕರ್ ಗೆದ್ದ ಕಾರಣ ಅವರ ಬೆಂಬಲಿಗರೆ ಕೃತ್ಯ ಎಸಗಿದ್ದಾಗಿ ಶಂಕೆ ವ್ಯಕ್ತಪಡಿಸಿದ್ದಾರೆ.

ಶಾಸಕರಾದ ಪ್ರದೀಪ್ ಈಶ್ವರ್ ಮನೆಯ ಮೇಲೆ ಕಲ್ಲು ತೂರಾಟ ಪ್ರಕರಣ ಸಂಬಂಧ ಮನೆಯ ಸಿಬ್ಬಂದಿ ಮುನಿಕೃಷ್ಣ ಮಾಹಿತಿ ನೀಡಿ, ರಾತ್ರಿ 10.15 ಸಮಯದಲ್ಲಿ ನಾಲ್ಕು ಜನ ಹುಡುಗರು ಕಲ್ಲು ತೂರಾಟ ನಡೆಸಿದ್ದಾರೆ. ಸಿಸಿಟಿವಿ ಕ್ಯಾಮೆರಾ ಸೆನ್ಸರ್ ಆನ್ ಆಗ್ತಿದ್ದಂತೆ ಹುಡುಗರು ಓಡಿ ಹೋದರು. ನಾಲ್ಕೈದು ಕಲ್ಲುಗಳನ್ನು ಎಸೆದಿದ್ದಾರೆ. ಮನೆಯ ಕಿಟಕಿ ಪುಡಿ ಪುಡಿ ಆಗಿದೆ. ಕಲ್ಲಿನ ಶಬ್ದ ಕೇಳಿ ಆಚೆ ಬಂದೆವು ಭಯ ಆಯಿತು. ಅಭಿ, ತಾರಕ್ ನಾನು ರೂಮ್ ನಲ್ಲಿ ಇದ್ದೆವು. ಮನೆ ಮಾಡಿ ಒಂದು ವರ್ಷ ಆಗಿದೆ. ಇದೇ ಮೊದಲ ಬಾರಿಗೆ ಈ ರೀತಿಯ ಘಟನೆ ನಡೆದಿದೆ ಎಂದರು.

ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಮಾಜಿ ಸಚಿವ ಡಾ ಕೆ.ಸುಧಾಕರ್‌ ಅವರು ಕಾಂಗ್ರೆಸ್ ನ ರಕ್ಷಾ ರಾಮಯ್ಯ ಅವರನ್ನು 1,12,866 ಮತಗಳ ಅಂತರದಿಂದ ಸೋಲಿಸಿ ಲೋಕಸಭೆ ಪ್ರವೇಶಿಸುತ್ತಿದ್ದಾರೆ.

ಅವರ ಗೆಲುವಿನ ಬೆನ್ನಲ್ಲೇ ಸೋಷಿಯಲ್ ಮೀಡಿಯಾಗಳಲ್ಲಿ ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಸಾಕಷ್ಟು ಟ್ರೋಲ್ ಆದರು. ಅದಕ್ಕೆ ಕಾರಣ ಪ್ರದೀಪ್ ಈಶ್ವರ್ ಆಡಿದ್ದ ಮಾತು. ಕೆಲ ದಿನಗಳ ಹಿಂದೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ಪ್ರದೀಪ್ ಈಶ್ವರ್, ಡಾ ಕೆ ಸುಧಾಕರ್ ಅವರು ರಕ್ಷಾ ರಾಮಯ್ಯ ಅವರಿಗಿಂತ ಒಂದು ಮತ ಹೆಚ್ಚು ಪಡೆದರೆ ನಾನು ಫಲಿತಾಂಶ ಬಂದ ಕೂಡಲೇ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದು ಸವಾಲು ಹಾಕಿದ್ದರು.

ಅವರ ಹೇಳಿಕೆಯ ಕ್ಲಿಪ್ ಗಳನ್ನಿಟ್ಟುಕೊಂಡು ಬಿಜೆಪಿ ನಾಯಕರು ಸೇರಿದಂತೆ ಸೋಷಿಯಲ್ ಮೀಡಿಯಾಗಳಲ್ಲಿ ಸಾಕಷ್ಟು ಮಂದಿ ಪ್ರದೀಪ್ ಈಶ್ವರ್ ಯಾವಾಗ ರಾಜೀನಾಮೆ ನೀಡುತ್ತಾರೆ ಎಂದು ಕೇಳುತ್ತಿದ್ದಾರೆ.

Ads on article

Advertise in articles 1

advertising articles 2

Advertise under the article