
ಮಾರಾಕಾಸ್ತ್ರಗಳೊಂದಿಗೆ ದರೋಡೆಗೆ ಹೊಂಚು ಪ್ರಕರಣ; ಬಂಧಿತ 6 ಮಂದಿಗೆ ನ್ಯಾಯಾಂಗ ಬಂಧನ; ಬಂಧಿತರೆಲ್ಲರ ಹಿನ್ನೆಲೆಯನ್ನೊಮ್ಮೆ ನೋಡಿ....
ಉಡುಪಿ: ಮಾರಾಕಾಸ್ತ್ರಗಳೊಂದಿಗೆ ದರೋಡೆಗೆ ಹೊಂಚು ಹಾಕುತ್ತಿದ್ದ ವೇಳೆ ಶನಿವಾರ ರಾತ್ರಿ ಸಿನಿಮೀಯ ರೀತಿಯ ಕಾರ್ಯಾಚರಣೆಯಲ್ಲಿ ಕಾಪು ಸಮೀಪದ ಕೋತಲಕಟ್ಟೆ ಎಂಬಲ್ಲಿ ಕಾಪು ಪೊಲೀಸರಿಂದ ಬಂಧನಕ್ಕೀಡಾದ 6 ಮಂದಿ ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಬಂಧಿತ ಮುಲ್ಕಿಯ ಅಮಿತ್ ರಾಜ್ (38), ಕಾಟಿಪಳ್ಳದ ಪ್ರಕಾಶ್ (23), ವಾಮಂಜೂರು ನೀರುಮಾರ್ಗದ ವರುಣ್ ಕುಮಾರ್ (30), ಸುರತ್ಕಲ್‌ನ ಕಾರ್ತಿಕ್ ಶೆಟ್ಟಿ (28), ಕಾಟಿಪಳ್ಳದ ಅಭಿಷೇಕ್ (22), ಫರಂಗಿಪೇಟೆಯ ಶ್ರೀಕಾಂತ್ ಶ್ರೀಪತಿ (32) ಅವರನ್ನು ರವಿವಾರ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಆರೋಪಿಗಳನ್ನು ಒಂದು ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ, ಜೂ.3ರಂದು ಮತ್ತೆ ನ್ಯಾಯಾಲಯಕ್ಕೆ ಹಾಜರು ಪಡಿಸುವಂತೆ ನ್ಯಾಯಾಧೀಶರು ಆದೇಶ ನೀಡಿದ್ದಾರೆ.
ಬಂಧಿತರಲ್ಲಿ ಅಭಿಷೇಕ್ ಎಂಬಾತ ಎರಡು ವರ್ಷಗಳ ಹಿಂದೆ ಸುರತ್ಕಲ್‌ನಲ್ಲಿ ಕೊಲೆಯಾದ ಫಾಝಿಲ್ ಕೊಲೆ ಪ್ರಕರಣದ ಆರೋಪಿಯಾಗಿದ್ದು, ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದನು.
ಸರತ್ಕಲ್, ಕದ್ರಿ, ಮಂಗಳೂರು ನಗರ, ಬಂಟ್ವಾಳ, ಪಾಂಡೇಶ್ವರ, ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಬಂಧಿತರ ಮೇಲೆ ಕೊಲೆ, ಕೊಲೆ ಯುತ್ನ, ಹಲ್ಲೆ, ದೊಂಬಿ ಪ್ರಕರಣ ದಾಖಲಾಗಿದೆ.
ಕಾರ್ತಿಕ್, ವರುಣ್‌ಗೆ ಮಂಗಳೂರಿನಿಂದ ಬೆಂಗಳೂರಿಗೆ ಗಡಿಪಾರು, ಅಭಿಷೇಕ್‌ನಿಗೆ ಮಂಗಳೂರು ನಗರದಿಂದ ಹಿರಿಯಡ್ಕಕ್ಕೆ ಗಡಿಪಾರು ಆದೇಶ ಇದೆ. ಶ್ರೀಕಾಂತ್ ಶ್ರೀಪತಿಗೆ ಬಂಟ್ವಾಳದಲ್ಲಿ ವಾರಂಟ್ ಇದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಬಂಧನ ಆಗಿದ್ದು ಹೀಗೆ.....
ಉಡುಪಿಯಿಂದ ಕಾಪು ಕಡೆಗೆ ಬರುತ್ತಿದ್ದ ಕಾಪು ಸಿಐ ಜಯಶ್ರೀ ಮಾನೆ ಅವರು ಉದ್ಯಾವರ ಸೇತುವೆ ಮೇಲೆ ಅನುಮಾನಾಸ್ಪದ ರೀತಿಯಲ್ಲಿ ಸ್ಕಾರ್ಪಿಯೋ ಕಾರೊಂದು ನಿಂತಿರುವುದನ್ನು ಗಮನಿಸಿದ್ದರು. ಕೂಡಲೇ ಸ್ಕಾರ್ಪಿಯೋ ಬಳಿಗೆ ಬಂದು ನಿಲ್ಲಿಸಲು ಯತ್ನಿಸಿದಾಗ ಆರೋಪಿಗಳು ಕಾರನ್ನು ಪ್ರಾಣಕ್ಕೆ ಮಾರಕವಾಗುವ ರೀತಿಯಲ್ಲಿ ಚಲಾಯಿಸಿಕೊಂಡು ಕಾಪು ಕಡೆಗೆ ತೆರಳಿದ್ದರು.
ಅವರು ತಕ್ಷಣ ಈ ಬಗ್ಗೆ ಕಾಪು ಮತ್ತು ಪಡುಬಿದ್ರಿ ಪೊಲೀಸರಿಗೆ ಮಾಹಿತಿ ನೀಡಿದ್ದು, ಕಾಪು ಎಸ್ಸೈ ಅಬ್ದುಲ್ ಖಾದರ್ ನೇತೃತ್ವದ ತಂಡ ಕೋತಲಕಟ್ಟೆ ಬಳಿ ಸ್ಕಾರ್ಪಿಯೋ ಕಾರನ್ನು ತಡೆಯುವಲ್ಲಿ ಯಶಸ್ವಿಯಾಗಿದೆ.
ಈ ಸಂದರ್ಭ ತುರ್ತು ಕಾರ್ಯಾಚರಣೆ ನಡೆಸಿದ ಕಾಪು ಸಿಐ ಜಯಶ್ರೀ ಮಾನೆ ಮತ್ತು ಕಾಪು ಎಸ್ ಐ ಅಬ್ದುಲ್ ಖಾದರ್ ಹಾಗೂ ಸಿಬ್ಬಂದಿಗಳು ಸ್ಕಾರ್ಪಿಯೋದಲ್ಲಿ ಇದ್ದವರನ್ನು ವಶಕ್ಕೆ ಪಡೆದುಕೊಂಡು ಪರಿಶೀಲಿಸಿದಾಗ ದರೋಡೆಗೆ ಹೊಂಚು ಹಾಕುತ್ತಿರುವ ವಿಚಾರ ಬೆಳಕಿಗೆ ಬಂದಿದೆ.
ಸ್ಕಾರ್ಪಿಯೋ ಕಾರ್ ನಲ್ಲಿ ಡ್ರ್ಯಾಗನ್, ಚೂರಿ, ಕಬ್ಬಿಣದ ಪೈಪ್ ಮತ್ತು ಮರಳು ಮಿಶ್ರಿತ ಮೆಣಸಿನ ಪುಡಿಯನ್ನು ಪತ್ತೆಯಾಗಿತ್ತು.