ಫ್ರಿಡ್ಜ್ ನಲ್ಲಿ ಗೋಮಾಂಸ ಪತ್ತೆ! 11 ಮನೆಗಳನ್ನು ಧ್ವಂಸಗೊಳಿಸಿದ ಅಧಿಕಾರಿಗಳು

ಫ್ರಿಡ್ಜ್ ನಲ್ಲಿ ಗೋಮಾಂಸ ಪತ್ತೆ! 11 ಮನೆಗಳನ್ನು ಧ್ವಂಸಗೊಳಿಸಿದ ಅಧಿಕಾರಿಗಳು

ಮಧ್ಯಪ್ರದೇಶ: ಫ್ರಿಡ್ಜ್ ನಲ್ಲಿ ಗೋಮಾಂಸ ಪತ್ತೆಯಾದ ಹಿನ್ನೆಲೆಯಲ್ಲಿ 11 ಮನೆಗಳನ್ನು ಧ್ವಂಸಗೊಳಿಸಿರುವ ಘಟನೆ ಮಧ್ಯಪ್ರದೇಶದ ಮಾಂಡ್ಲಾ ಪ್ರದೇಶದಲ್ಲಿ ನಡೆದಿದೆ.

ರಾಜ್ಯದಲ್ಲಿ ಅಕ್ರಮ ಗೋಮಾಂಸದ ವಿರುದ್ಧದ ಕಾರ್ಯಾಚರಣೆಯ ಅಂಗವಾಗಿ ಆದಿವಾಸಿಗಳೇ ಅಧಿಕ ಸಂಖ್ಯೆಯಲ್ಲಿರುವ ಮಾಂಡ್ಲಾ ಪ್ರದೇಶದಲ್ಲಿ ಸರ್ಕಾರಿ ಜಾಗದಲ್ಲಿ ನಿರ್ಮಿಸಿಕೊಂಡಿದ್ದ 11 ಮಂದಿಯ ಮನೆಗಳನ್ನು ಧ್ವಂಸಗೊಳಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ನಿಯಾನ್ ಪುರದ ಭೈನ್ವಾಹಿ ಪ್ರದೇಶದಲ್ಲಿ ಕಸಾಯಿಗಾಗಿ ದೊಡ್ಡಸಂಖ್ಯೆಯ ಗೋವುಗಳನ್ನು ಹಿಡಿದಿಡಲಾಗಿದೆ ಎಂಬ ಮಾಹಿತಿಯ ಆಧಾರದಲ್ಲಿ ಕ್ರಮ ಕೈಗೊಂಡ ಅಧಿಕಾರಿಗಳು ಈ ಕ್ರಮ ಕೈಗೊಂಡಿದ್ದಾರೆ ಎಂದು ಮಾಂಡ್ಲ ಎಸ್ಪಿ ರಜತ್ ಸಕ್ಲೇಚಾ ಹೇಳಿದ್ದಾರೆ.

"ಅಧಿಕಾರಿಗಳ ತಂಡ ಆ ಪ್ರದೇಶಕ್ಕೆ ಧಾವಿಸಿದಾಗ 150 ಹಸುಗಳನ್ನು ಆರೋಪಿಗಳ ಮನೆಯ ಹಿಂದೆ ಕಟ್ಟಿಹಾಕಿಕೊಂಡಿರುವುದು ಕಂಡುಬಂತು. ಎಲ್ಲ 11 ಆರೋಪಿಗಳ ಮನೆಗಳ ಫ್ರಿಡ್ಜ್ ಗಳಲ್ಲಿ ಗೋಮಾಂಸ ಸಂಗ್ರಹಿಸಿದ್ದುದನ್ನು ವಶಪಡಿಸಿಕೊಳ್ಳಲಾಗಿದೆ. ಪ್ರಾಣಿಯ ಕೊಬ್ಬು, ಜಾನುವಾರುಗಳ ಚರ್ಮ ಮತ್ತು ಎಲುಬು ಕೂಡಾ ಕೊಠಡಿಯೊಂದರಲ್ಲಿ ಪತ್ತೆಯಾಗಿದೆ" ಎಂದು ವಿವರಿಸಿದ್ದಾರೆ.

ವಶಪಡಿಸಿಕೊಂಡ ಮಾಂಸ ಗೋಮಾಂಸ ಎನ್ನುವುದನ್ನು ಸ್ಥಳೀಯ ಸಂಸ್ಥೆಯ ಪಶುತಜ್ಞರು ದೃಢಪಡಿಸಿದ್ದಾರೆ. ಇದರ ಪೂರಕ ಡಿಎನ್ಎ ವಿಶ್ಲೇಷಣೆಗೆ ಮಾದರಿಯನ್ನು ಹೈದರಾಬಾದ್ ಗೆ ಕಳುಹಿಸಲಾಗಿದೆ. ಎಲ್ಲ 11 ಆರೋಪಿಗಳು ಸರ್ಕಾರಿ ಜಮೀನಿನಲ್ಲಿ ಮನೆ ಕಟ್ಟಿಕೊಂಡು ಇದ್ದುದು ಕಂಡುಬಂದ ಹಿನ್ನೆಲೆಯಲ್ಲಿ ಅವುಗಳನ್ನು ಧ್ವಂಸಗೊಳಿಸಲಾಗಿದೆ ಎಂದು ಹೇಳಿದ್ದಾರೆ.

ಮಾಂಸ ವಶಪಡಿಸಿಕೊಂಡ ಬಳಿಕ ಶುಕ್ರವಾರ ರಾತ್ರಿ ಎಫ್ಐಆರ್ ದಾಖಲಾಗಿದ್ದು, ಒಬ್ಬ ಆರೋಪಿಯನ್ನು ಬಂಧಿಸಲಾಗಿದೆ. ಇತರ 10 ಮಂದಿಯ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ತಿಳಿಸಿದ್ದಾರೆ. 150 ಹಸುಗಳನ್ನು ಗೋಶಾಲೆಗಳಿಗೆ ಕಳುಹಿಸಲಾಗಿದೆ. ಇತ್ತೀಚಿನ ದಿನಗಳಲ್ಲಿ ಭೈನ್ಸವಾಹಿ ಪ್ರದೇಶ ಗೋವಧೆಯ ಕೇಂದ್ರವಾಗುತ್ತಿದೆ. ಮಧ್ಯಪ್ರದೇಶದಲ್ಲಿ ಗೋವಧೆಗಾಗಿ ಏಳು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗುತ್ತದೆ ಎಂದು ಸಕ್ಲೇಚಾ ವಿವರ ನೀಡಿದ್ದಾರೆ.

Ads on article

Advertise in articles 1

advertising articles 2

Advertise under the article