6 ವಿಧಾನಪರಿಷತ್ ಸ್ಥಾನಗಳಿಗೆ ಚುನಾವಣೆ; ಬಿರುಸಿನ ಮತದಾನ

6 ವಿಧಾನಪರಿಷತ್ ಸ್ಥಾನಗಳಿಗೆ ಚುನಾವಣೆ; ಬಿರುಸಿನ ಮತದಾನ

ಬೆಂಗಳೂರು: ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರದಿಂದ ರಾಜ್ಯದ ಆರು ವಿಧಾನಪರಿಷತ್ ಸ್ಥಾನಗಳಿಗೆ ಮತದಾನ ಪ್ರಗತಿಯಲ್ಲಿದೆ. ಇಂದು ಬೆಳಗ್ಗೆ 8 ಗಂಟೆಗೆ ಆರಂಭವಾದ ಮತದಾನ ಸಂಜೆ 4 ಗಂಟೆಯವರೆಗೂ ಮುಂದುವರೆಯಲಿದೆ.

ಕಾಂಗ್ರೆಸ್ ಎಲ್ಲಾ ಆರು ಸ್ಥಾನಗಳಲ್ಲಿ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಆದರೆ ಬಿಜೆಪಿ 4, ಜೆಡಿಎಸ್ 2 ಸ್ಥಾನಗಳಲ್ಲಿ ಸ್ಪರ್ಧಿಸಿದ್ದು, ಬಿಜೆಪಿ- ಜೆಡಿಎಸ್ ಒಟ್ಟಾಗಿ ಚುನಾವಣೆ ಎದುರಿಸುತ್ತಿವೆ.

ಆರು ಕ್ಷೇತ್ರಗಳಲ್ಲಿ ಒಟ್ಟು 78 ಸ್ಪರ್ಧಿಗಳು ಕಣದಲ್ಲಿದ್ದು, ಮೇಲ್ಮನೆ ಎಂದೇ ಕರೆಯಲ್ಪಡುವ ವಿಧಾನ ಪರಿಷತ್ತಿನಲ್ಲಿ ಬಹುಮತ ಪಡೆಯಲು ಕಾಂಗ್ರೆಸ್ ಎಲ್ಲಾ ಆರು ಸ್ಥಾನಗಳನ್ನು ಗೆಲ್ಲಲು ಸರ್ವಪ್ರಯತ್ನ ನಡೆಸುತ್ತಿದೆ.

ಕರ್ನಾಟಕ ಈಶಾನ್ಯ ಪದವೀಧರ ಕ್ಷೇತ್ರದಿಂದ ಡಾ.ಚಂದ್ರಶೇಖರ ಪಾಟೀಲ್ ಕಾಂಗ್ರೆಸ್ ಪ್ರತಿನಿಧಿಸುತ್ತಿದ್ದರೆ, ಅಮರನಾಥ ಪಾಟೀಲ್ ಬಿಜೆಪಿ ಅಭ್ಯರ್ಥಿಯಾಗಿದ್ದಾರೆ. ಕರ್ನಾಟಕ ನೈರುತ್ಯ ಪದವೀಧರರ ಕ್ಷೇತ್ರದಲ್ಲಿ ಆಯನೂರು ಮಂಜುನಾಥ್‌ ಅವರು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿದ್ದಾರೆ. ಇವರ ವಿರುದ್ಧ ಬಿಜೆಪಿಯಿಂದ ಡಾ.ಧನಂಜಯ ಸರ್ಜಿ ಸ್ಪರ್ಧಿಸಿದ್ದಾರೆ.

ಬೆಂಗಳೂರು ಪದವೀಧರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಾಮೋಜಿಗೌಡರಾಗಿದ್ದು, ಬಿಜೆಪಿಯಿಂದ ಎ.ದೇವೇಗೌಡರನ್ನು ಕಣಕ್ಕಿಳಿಸಲಾಗಿದೆ. ಅಗ್ನೇಯ ಶಿಕ್ಷಕರ ಕ್ಷೇತ್ರದಲ್ಲಿ ವೈ.ಎ ನಾರಾಯಣಸ್ವಾಮಿ ಬಿಜೆಪಿ ಅಭ್ಯರ್ಥಿಯಾಗಿದ್ದು, ಡಿ.ಟಿ.ಶ್ರೀನಿವಾಸ್ ಕಾಂಗ್ರೆಸ್ ಪ್ರತಿನಿಧಿಸುತ್ತಿದ್ದಾರೆ. ಕರ್ನಾಟಕ ನೈರುತ್ಯ ಶಿಕ್ಷಕರ ಕ್ಷೇತ್ರದಲ್ಲಿ ಎಸ್.ಎಲ್. ಭೋಜೇಗೌಡ ಜೆಡಿಎಸ್ ಅಭ್ಯರ್ಥಿಯಾಗಿದ್ದು, ಕೆ.ಕೆ. ಮಂಜುನಾಥ್ ಕಾಂಗ್ರೆಸ್ ಅಭ್ಯರ್ಥಿ ಸ್ಪರ್ಧಾ ಕಣದಲ್ಲಿದ್ದಾರೆ. ದಕ್ಷಿಣ ಶಿಕ್ಷಕರ ಕ್ಷೇತ್ರದಲ್ಲಿ ಮರಿತಿಬ್ಬೇಗೌಡ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದು, ಜೆಡಿಎಸ್ ಅಭ್ಯರ್ಥಿಯಾಗಿ ಕೆ.ವಿವೇಕಾನಂದ ಸ್ಪರ್ಧಿಸಿದ್ದಾರೆ.

ಜೂನ್ 6 ರಂದು ಮತಗಳ ಎಣಿಕೆ ನಡೆಯಲಿದೆ. ಆರು ಹಾಲಿ ಸದಸ್ಯರ ನಿವೃತ್ತಿಯ ನಂತರ ಈ ಸ್ಥಾನಗಳು ತೆರವಾಗಿದ್ದವು. ಮೂರು ಪದವೀಧರ ಕ್ಷೇತ್ರಗಳಲ್ಲಿ ಒಟ್ಟು 3.63 ಲಕ್ಷ ಮತದಾರರಿದ್ದು, ಉಳಿದ ಮೂರು ಶಿಕ್ಷಕರ ಕ್ಷೇತ್ರಗಳಲ್ಲಿ 70,260 ಮತದಾರರಿದ್ದಾರೆ. ಪದವೀಧರ ಕ್ಷೇತ್ರಗಳ 461 ಮತಗಟ್ಟೆಗಳಲ್ಲಿ ಹಾಗೂ ಶಿಕ್ಷಕರ ಕ್ಷೇತ್ರದ 170 ಮತಗಟ್ಟೆಗಳಲ್ಲಿ ಮತದಾನ ನಡೆಯುತ್ತಿದೆ.

Ads on article

Advertise in articles 1

advertising articles 2

Advertise under the article