ಅಯೋಧ್ಯೆಯ ರಾಮಮಂದಿರದ ಅರ್ಚಕರಿಗೆ ಹೊಸ ಡ್ರೆಸ್ ಕೋಡ್ ಜಾರಿ! ಗರ್ಭಗುಡಿಯೊಳಗೆ ಮೊಬೈಲ್ ನಿಷೇಧ
ಲಖನೌ: ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಅಯೋಧ್ಯೆಯ ರಾಮಮಂದಿರದ ಅರ್ಚಕರಿಗೆ ಹೊಸ ಡ್ರೆಸ್ ಕೋಡ್ ಜಾರಿ ಮಾಡಿದೆ. ಗರ್ಭಗುಡಿಯಲ್ಲಿ ಭಗವಾನ್ ರಾಮನಿಗೆ ಸೇವೆ ಸಲ್ಲಿಸುತ್ತಿರುವ ಪುರೋಹಿತರು ಇನ್ನು ಮುಂದೆ ಕೇಸರಿ ಬದಲಿಗೆ ಸಾಂಪ್ರದಾಯಿಕ ಹಳದಿ(ಪೀತಾಂಬರಿ) ಬಟ್ಟೆಗಳನ್ನು ಧರಿಸುತ್ತಾರೆ.
ಗಮನಾರ್ಹವೆಂದರೆ, ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಅರ್ಚಕರಿಗೆ ಹೊಸ ಡ್ರೆಸ್ ಕೋಡ್ ಅನ್ನು ಬಿಡುಗಡೆ ಮಾಡಿದ್ದು, ಅದರ ಪ್ರಕಾರ ಅವರು ಈಗ ಧೋತಿ, ಚೌಬಂದಿ ಮತ್ತು ಪೇಟವನ್ನು ಧರಿಸುತ್ತಾರೆ. ಇವೆಲ್ಲವೂ ಹಳದಿ ಬಣ್ಣದ್ದಾಗಿದೆ.
ಈ ಮೊದಲು ಅರ್ಚಕರು ಕೇಸರಿ ಕುರ್ತಾ, ಪೇಟ, ಧೋತಿ ಧರಿಸುತ್ತಿದ್ದರು. ಪೇಟವನ್ನು ಅಚ್ಚುಕಟ್ಟಾಗಿ ಧರಿಸಲು ಅವರಿಗೆ ಸೂಕ್ತ ತರಬೇತಿ ನೀಡಲಾಗಿದೆ ಎಂದು ದೇವಸ್ಥಾನದ ಟ್ರಸ್ಟ್ ಮೂಲಗಳು ತಿಳಿಸಿವೆ.
ಇದುವರೆಗೆ ಕೆಲವು ಪುರೋಹಿತರು ಮಾತ್ರ ಹಳದಿ ವಸ್ತ್ರವನ್ನು ಧರಿಸುತ್ತಿದ್ದರು. ಆದರೆ ಈಗ ಇಡೀ ಪುರೋಹಿತರ ತಂಡ, ಪೀತಾಂಬರಿಯಲ್ಲಿ ದೇವರ ಸೇವೆಯನ್ನು ಕಡ್ಡಾಯಗೊಳಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಇದಲ್ಲದೆ, ಅರ್ಚಕರು ಗರ್ಭಗುಡಿಯೊಳಗೆ ಮೊಬೈಲ್ ಫೋನ್ ತೆಗೆದುಕೊಂಡು ಹೋಗುವುದನ್ನು ಸಹ ನಿಷೇಧಿಸಲಾಗಿದೆ.
ಅಯೋಧ್ಯೆಯ ರಾಮಮಂದಿರದಲ್ಲಿ ಪ್ರಸ್ತುತ 26 ಅರ್ಚಕರು ವಿವಿಧ ಪಾಳಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ರಚಿಸಿರುವ ಧಾರ್ಮಿಕ ಸಮಿತಿಯು ಹೊಸದಾಗಿ ತರಬೇತಿ ಪಡೆದ 21 ಅರ್ಚಕರನ್ನು ನೇಮಿಸಿಕೊಳ್ಳಲು ನಿರ್ಧರಿಸಿದೆ.