ಚುನಾವಣೆಯ ಸೋಲನ್ನು ಒಪ್ಪಿಕೊಂಡು ಪ್ರಧಾನಿ ಹುದ್ದೆಗೆ ರಾಜೀನಾಮೆ ಸಲ್ಲಿಸಿದ ರಿಷಿ ಸುನಕ್!

ಚುನಾವಣೆಯ ಸೋಲನ್ನು ಒಪ್ಪಿಕೊಂಡು ಪ್ರಧಾನಿ ಹುದ್ದೆಗೆ ರಾಜೀನಾಮೆ ಸಲ್ಲಿಸಿದ ರಿಷಿ ಸುನಕ್!

ಲಂಡನ್: ಬ್ರಿಟಿಷ್ ಪ್ರಧಾನಿ ರಿಷಿ ಸುನಕ್ ಅವರು ಸಾರ್ವತ್ರಿಕ ಚುನಾವಣೆಯ ಸೋಲನ್ನು ಒಪ್ಪಿಕೊಂಡು ಶುಕ್ರವಾರ ಪ್ರಧಾನಿ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದಾರೆ. ಅವರ ಕನ್ಸರ್ವೇಟಿವ್ ಪಕ್ಷವು 14 ವರ್ಷಗಳ ನಂತರ ಹೀನಾಯ ಸೋಲು ಕಂಡಿದೆ. ಕೀರ್ ಸ್ಟಾರ್ಮರ್ ನೇತೃತ್ವದ ಲೇಬರ್ ಪಕ್ಷವು ಐತಿಹಾಸಿಕ ಯುಕೆ ಚುನಾವಣೆಯಲ್ಲಿ ಪ್ರಚಂಡ ವಿಜಯ ಸಾಧಿಸಿದೆ.

UK ಸಂಸತ್ತಿನಲ್ಲಿ ಬಹುಮತವನ್ನು ಹೊಂದಲು ಲೇಬರ್ ಪಕ್ಷವು ಸಾಕಷ್ಟು ಸ್ಥಾನಗಳನ್ನು ಗೆದ್ದಿದ್ದು ಸರ್ಕಾರವನ್ನು ರಚಿಸಲು ಮುಂದಿನ ಹಾದಿ ಸುಲಭವಾಗಿದೆ. ಸಂಸತ್ತಿನ ಕೆಳಮನೆ ಹೌಸ್ ಆಫ್ ಕಾಮನ್ಸ್‌ನಲ್ಲಿ ಲೇಬರ್ ಪಕ್ಷವು ಸುಮಾರು 160 ಸ್ಥಾನಗಳ ಬಹುಮತವನ್ನು ಹೊಂದಿದೆ ಎಂದು ಅಂದಾಜಿಸಲಾಗಿದೆ.

ಭಾರತೀಯ ಕಾಲಮಾನ ಇಂದು ಬೆಳಗ್ಗೆ 5 ಗಂಟೆ ವೇಳೆಗೆ ಮತ ಎಣಿಕೆ ಆರಂಭವಾಗಿದ್ದು, 650 ಸ್ಥಾನಗಳ ಪೈಕಿ 326 ಸ್ಥಾನಗಳನ್ನು ಲೇಬರ್ ಪಕ್ಷ ಗೆದ್ದುಕೊಂಡಿದೆ.

ದೇಶದ ಮೊದಲ ಬ್ರಿಟಿಷ್ ಭಾರತೀಯ ಮೂಲದ ಪ್ರಧಾನ ಮಂತ್ರಿ ರಿಷಿ ಸುನಕ್ ಉತ್ತರ ಇಂಗ್ಲೆಂಡ್‌ನಲ್ಲಿ 23,059 ಮತಗಳನ್ನು ಗಳಿಸಿ ತಮ್ಮದೇ ಆದ ರಿಚ್‌ಮಂಡ್ ಮತ್ತು ನಾರ್ತಲರ್ಟನ್ ಸ್ಥಾನವನ್ನು ಗೆದ್ದುಕೊಂಡಿದ್ದಾರೆ. ಆದರೆ 14 ವರ್ಷಗಳ ಸರ್ಕಾರದ ನಂತರ ರಾಷ್ಟ್ರೀಯ ಮಟ್ಟದಲ್ಲಿ ತಮ್ಮ ಪಕ್ಷವನ್ನು ಅಧಿಕಾರಕ್ಕೆ ಮರಳಿಸುವಲ್ಲಿ ರಿಷಿ ಸುನಕ್ ವಿಫಲರಾದರು.

ತಮ್ಮ ಪಕ್ಷ ಸೋಲುತ್ತಿದ್ದಂತೆ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿ ವಿದಾಯ ಭಾಷಣದಲ್ಲಿ ರಿಷಿ ಸುನಕ್, ಲೇಬರ್ ಪಾರ್ಟಿ ಈ ಸಾರ್ವತ್ರಿಕ ಚುನಾವಣೆಯಲ್ಲಿ ಗೆದ್ದಿದೆ, ಕೀರ್ ಸ್ಟಾರ್ಮರ್ ಅವರಿಗೆ ಕರೆ ಮಾಡಿ ಅಭಿನಂದನೆ ಸಲ್ಲಿಸಿದ್ದೇನೆ. ಇಂದು ಅಧಿಕಾರ ಲೇಬರ್ ಪಕ್ಷಕ್ಕೆ ಹಸ್ತಾಂತರವಾಗುತ್ತಿದೆ.

ಇಂದು ಅಧಿಕಾರವು ಶಾಂತಿಯುತವಾಗಿ ಮತ್ತು ಕ್ರಮಬದ್ಧವಾಗಿ ಬದಲಾಗುತ್ತಿದೆ. ನಮ್ಮ ದೇಶದ ಸ್ಥಿರತೆ ಮತ್ತು ಭವಿಷ್ಯದ ಬಗ್ಗೆ ಎಲ್ಲರಿಗೂ ವಿಶ್ವಾಸವಿದೆ. ಮುಂದಿನ ದಿನಗಳಲ್ಲಿ ಕಲಿಯಲು ಮತ್ತು ಸೋಲಿನ ಆತ್ಮಾವಲೋಕನ ಮಾಡಿಕೊಳ್ಳಲು ಸಾಕಷ್ಟು ಇದೆ. ಈ ಸೋಲಿನ ಹೊಣೆಯನ್ನು ನಾನೇ ಹೊರುತ್ತೇನೆ. ನನ್ನನ್ನು ಕ್ಷಮಿಸಿ ಎಂದು ಹೇಳಿದರು.

ಕನ್ಸರ್ವೇಟಿವ್ ಪಕ್ಷದ ಕೆಲವು ಪ್ರಮುಖ ಮಂತ್ರಿಗಳು ಮತ್ತು ಸಂಸದರಾದ ಗ್ರಾಂಟ್ ಶಾಪ್ಸ್ ಮತ್ತು ಪೆನ್ನಿ ಮೊರ್ಡಾಂಟ್ ಅವರು ಚುನಾವಣೆಯಲ್ಲಿ ಸೋತಿರುವುದರಿಂದ, ಫಲಿತಾಂಶಗಳನ್ನು ಕನ್ಸರ್ವೇಟಿವ್‌ ಪಕ್ಷಕ್ಕೆ ರಕ್ತಪಾತ ಎಂದು ವ್ಯಾಖ್ಯಾನಿಸಲಾಗುತ್ತಿದೆ.

ಇದಕ್ಕೆ ವ್ಯತಿರಿಕ್ತವಾಗಿ, ಲೇಬರ್‌ನ ಸ್ಟಾರ್ಮರ್ ಬ್ರಿಟನ್‌ನ ಹೊಸ ಪ್ರಧಾನ ಮಂತ್ರಿಯಾಗಿ 10 ಡೌನಿಂಗ್ ಸ್ಟ್ರೀಟ್‌ನಲ್ಲಿ ಅಧಿಕಾರ ವಹಿಸಿಕೊಳ್ಳಲು ಸಿದ್ಧರಾಗಿದ್ದಾರೆ, ಅವರು ಲಂಡನ್‌ನಲ್ಲಿ ಹಾಲ್ಬೋರ್ನ್ ಮತ್ತು ಸೇಂಟ್ ಪ್ಯಾನ್‌ಕ್ರಾಸ್‌ನ ಸುಲಭವಾಗಿ ಗೆದ್ದಿದ್ದಾರೆ.

Ads on article

Advertise in articles 1

advertising articles 2

Advertise under the article