
ಬಿಹಾರ, ಆಂಧ್ರಪ್ರದೇಶಕ್ಕೆ ಬಜೆಟ್‌ನಲ್ಲಿ ಭರ್ಜರಿ ಅನುದಾನ ಘೋಷಿಸಿದ ನಿರ್ಮಲಾ ಸೀತಾರಾಮನ್
ನವದೆಹಲಿ: 2024-25ನೇ ಸಾಲಿನ ಹಣಕಾಸು ವರ್ಷದ ಬಜೆಟ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ಮೈತ್ರಿ ಧರ್ಮ ಪಾಲಿಸಿದೆ. ಬಜೆಟ್‌ನಲ್ಲಿ ಬಿಹಾರ ಮತ್ತು ಆಂಧ್ರಪ್ರದೇಶಕ್ಕೆ ಭರ್ಜರಿ ಅನುದಾನ ನೀಡಿದೆ.
ಎನ್ ಚಂದ್ರಬಾಬು ನಾಯ್ಡು ಅವರ ಟಿಡಿಪಿ ಮತ್ತು ನಿತೀಶ್ ಕುಮಾರ್ ಅವರ ಜೆಡಿಯು ಬಿಜೆಪಿಯು ಮೂರನೇ ಬಾರಿಗೆ ಅಧಿಕಾರಕ್ಕೆ ಮರಳಲು ಬಹುಮತವನ್ನು ಗಳಿಸಲು ಸಹಾಯ ಮಾಡಿದ ಒಂದು ತಿಂಗಳ ನಂತರ, ಮೋದಿ 3.0 ರ ಬಜೆಟ್ 2024 ಅಗತ್ಯವಿರುವ ಎರಡು ರಾಜ್ಯಗಳಿಗೆ ಪ್ರಮುಖ ಯೋಜನೆಗಳನ್ನು ಮೀಸಲಿಟ್ಟಿದೆ.
ಆಂಧ್ರಪ್ರದೇಶದ ಆಡಳಿತ ಪಕ್ಷ ಟಿಡಿಪಿ ಬಿಜೆಪಿಯ ಮಿತ್ರ ಪಕ್ಷವಾಗಿದೆ. ಆಂಧ್ರದ ರಾಜಧಾನಿ ಅಭಿವೃದ್ಧಿಪಡಿಸಲು 15,000 ಕೋಟಿ ರೂ. ಅನುದಾನ ನೀಡುವುದಾಗಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಘೋಷಿಸಿದ್ದಾರೆ.
ಬಜೆಟ್ ಪೂರ್ವ ಸಭೆಯಲ್ಲಿ ಆಂಧ್ರಪ್ರದೇಶದ ಏಕೈಕ ರಾಜಧಾನಿಯಾಗಿ ಅಮರಾವತಿ ನಿರ್ಮಾಣ ಮತ್ತು ಅಭಿವೃದ್ಧಿಗೆ 15,000 ಕೋಟಿ ಅನುದಾನ ಕೋರಿತ್ತು. ರಾಜ್ಯ ಸರ್ಕಾರದ ಪ್ರಮುಖ ಬೇಡಿಕೆಯನ್ನು ಈ ಪ್ರಕಟಣೆಯು ಪೂರೈಸಿದೆ.
ಬಜೆಟ್ ಮಂಡಿಸಿದ ಸೀತಾರಾಮನ್, ಕೇಂದ್ರವು ಆಂಧ್ರಪ್ರದೇಶದ ರಾಜಧಾನಿಯ ಅಗತ್ಯವನ್ನು ಗುರುತಿಸುತ್ತದೆ. ಬಹು-ಪಕ್ಷೀಯ ಅಭಿವೃದ್ಧಿ ಏಜೆನ್ಸಿಗಳ ಮೂಲಕ ಬೆಂಬಲವನ್ನು ನೀಡುತ್ತದೆ. ಆಂಧ್ರಪ್ರದೇಶದ ರಾಜಧಾನಿ ಅಭಿವೃದ್ಧಿಗೆ ಸರ್ಕಾರವು ಈ ಹಣಕಾಸು ವರ್ಷ ಮತ್ತು ಮುಂದಿನ ವರ್ಷಗಳಲ್ಲಿ 15,000 ಕೋಟಿ ವ್ಯವಸ್ಥೆ ಮಾಡಲಿದೆ ಎಂದು ತಿಳಿಸಿದ್ದಾರೆ.
ಬಿಹಾರದಲ್ಲಿ ರಸ್ತೆ ಸಂಪರ್ಕವನ್ನು ಹೆಚ್ಚಿಸುವ ಗುರಿಯೊಂದಿಗೆ, ಪಾಟ್ನಾ ಮತ್ತು ಪೂರ್ಣಿಯಾ, ಬಕ್ಸರ್ ಮತ್ತು ಭಾಗಲ್ಪುರ್ ಹಾಗೂ ಬೋಧಗಯಾ, ರಾಜಗೀರ್, ವೈಶಾಲಿ ಮತ್ತು ದರ್ಬಂಗಾವನ್ನು ಸಂಪರ್ಕಿಸುವ ಎಕ್ಸ್‌ಪ್ರೆಸ್‌ವೇಗಳನ್ನು ಅಭಿವೃದ್ಧಿಪಡಿಸುವ ಯೋಜನೆಯನ್ನು ಸರ್ಕಾರ ಘೋಷಿಸಿದೆ. ಇದಕ್ಕಾಗಿ ಸರ್ಕಾರ 2,600 ಕೋಟಿ ರೂ. ಮೀಸಲಿಟ್ಟಿದೆ. ಹೆಚ್ಚುವರಿಯಾಗಿ, ರಾಜ್ಯವು ಬಕ್ಸಾರ್ ಜಿಲ್ಲೆಯಲ್ಲಿ ಗಂಗಾನದಿಯ ಮೇಲೆ ಎರಡು ಪಥದ ಸೇತುವೆಯನ್ನು ಪಡೆಯುತ್ತದೆ. ಭಾಗಲ್ಪುರದ ಪಿರ್ಪೈಂಟಿಯಲ್ಲಿ 2,400 ಮೆಗಾವ್ಯಾಟ್ ವಿದ್ಯುತ್ ಸ್ಥಾವರವನ್ನು ಹಣಕಾಸು ಸಚಿವರು ಘೋಷಿಸಿದ್ದಾರೆ.
ಪ್ರವಾಸೋದ್ಯಮವನ್ನು ಉತ್ತೇಜಿಸಲು ಬಿಹಾರದ ಗಯಾ ಮತ್ತು ರಾಜ್‌ಗೀರ್‌ನಲ್ಲಿ ದೇವಾಲಯದ ಕಾರಿಡಾರ್‌ಗಳನ್ನು ಅಭಿವೃದ್ಧಿಪಡಿಸುವ ಯೋಜನೆಗಳನ್ನು ಘೋಷಿಸಿದ್ದಾರೆ. ರಾಜ್ಯದಲ್ಲಿ ಪ್ರವಾಹ ನಿಯಂತ್ರಣಕ್ಕೆ 11,500 ಕೋಟಿ ರೂ. ಆರ್ಥಿಕ ಬೆಂಬಲದ ಭರವಸೆ ಬಜೆಟ್‌ನಲ್ಲಿ ನೀಡಲಾಗಿದೆ.