ಸಾಮಾಜಿಕ ಜಾಲತಾಣದಲ್ಲಿ ಇಸ್ಲಾಂ-ಮುಸ್ಲಿಂರ ವಿರುದ್ಧ ಅವಹೇಳನಕಾರಿ, ಪ್ರಚೋದನಕಾರಿ ಕಮೆಂಟ್; ವೈದ್ಯ ಡಾ. ಕೀರ್ತನ್ ಉಪಾಧ್ಯ ವಿರುದ್ಧ ಪ್ರಕರಣ ದಾಖಲು; ಪೋಸ್ಟ್ ಭಾರೀ ವೈರಲ್ ಆಗುತ್ತಿದ್ದಂತೆಯೇ ಡಿಲೀಟ್!

ಸಾಮಾಜಿಕ ಜಾಲತಾಣದಲ್ಲಿ ಇಸ್ಲಾಂ-ಮುಸ್ಲಿಂರ ವಿರುದ್ಧ ಅವಹೇಳನಕಾರಿ, ಪ್ರಚೋದನಕಾರಿ ಕಮೆಂಟ್; ವೈದ್ಯ ಡಾ. ಕೀರ್ತನ್ ಉಪಾಧ್ಯ ವಿರುದ್ಧ ಪ್ರಕರಣ ದಾಖಲು; ಪೋಸ್ಟ್ ಭಾರೀ ವೈರಲ್ ಆಗುತ್ತಿದ್ದಂತೆಯೇ ಡಿಲೀಟ್!

ಉಡುಪಿ: ಸಾಮಾಜಿಕ ಜಾಲತಾಣದಲ್ಲಿ ಇಸ್ಲಾಂ ಧರ್ಮ ಹಾಗೂ ಮುಸ್ಲಿಂರ ವಿರುದ್ಧ ಅವಹೇಳನಕಾರಿ ಮತ್ತು ಪ್ರಚೋದನಕಾರಿ ಕಮೆಂಟ್ ಹಾಕಿ ಕೋಮು ಸೌಹಾರ್ದತೆಗೆ ಧಕ್ಕೆ ಉಂಟು ಮಾಡಲು ಯತ್ನಿಸಿದ ಆರೋಪದಡಿ ಬ್ರಹ್ಮಾವರ ಖಾಸಗಿ ಆಸ್ಪತ್ರೆಯ ವೈದ್ಯ ಡಾ. ಕೀರ್ತನ್ ಉಪಾಧ್ಯ ವಿರುದ್ಧ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಸ್ವಯಂ ಪ್ರೇರಿತ ಪ್ರಕರಣ ದಾಖಲಾಗಿದೆ.

ಲ್ಯಾಪ್ರೋಸ್ಕೋಪಿ ಶಸ್ತ್ರ ಚಿಕಿತ್ಸಾ ತಜ್ಞ ಡಾ. ಉಪಾಧ್ಯ ಲೋನ್ಲಿ ಸ್ಟ್ರೇಂಜರ್ ಎಂಬ ಹ್ಯಾಂಡಲ್‌ನ ಎಕ್ಸ್ ಖಾತೆಯನ್ನು ಹೊಂದಿದ್ದು, ಈ ಖಾತೆಯಲ್ಲಿ ಕೋಮುಭಾವನೆ ಕೆರಳಿಸುವ ಸಂದೇಶ ಹಾಕಿದ್ದರು. ಈ ಬಗ್ಗೆ ವ್ಯಾಪಕ ಟೀಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಪೊಲೀಸರು ಸ್ವಯಂ ಪ್ರೇರಿತ ಕೇಸ್ ದಾಖಲಿಸಿಕೊಂಡಿದ್ದಾರೆ.

ವಿವಾದಕ್ಕೆ ಗುರಿಯಾದ ಆ ಕಮೆಂಟ್‌ ಯಾವುದು?

ಜು. 13 ರಂದು ಎಕ್ಸ್ನಲ್ಲಿ ಅಭಿ ಆಂಡ್ ನೀಯು ಖಾತೆಯಿಂದ ಈ ಜಗತ್ತಿನಿಂದ ನೀವು ಏನಾದರೂ ಒಂದನ್ನು ಇಲ್ಲವಾಗಿಸಲು ಬಯಸುವುದಾದರೆ ಅದು ಯಾವುದು? ಎಂಬ ಪ್ರಶ್ನೆಗೆ ಡಾ. ಕೀರ್ತನ್ ಉಪಾಧ್ಯ ಪ್ರತಿಕ್ರಿಯಿಸಿದ್ದಾರೆ. ತಮ್ಮ ಲೋನ್ಲಿ ಸ್ಟ್ರೇಂಜರ್ ಖಾತೆಯಿಂದ "ಮುಸ್ಲಿಂ ಕಮ್ಯುನಿಟಿ" ಎಂಬುದಾಗಿ ಜು.13, ಮಧ್ಯಾಹ್ನ 2.13 ಕ್ಕೆ ಕಾಮೆಂಟ್ ಹಾಕಿದ್ದರು.

ಜಗತ್ತಿನಿಂದ ಮುಸ್ಲಿಂ ಸಮುದಾಯವನ್ನು ಇಲ್ಲವಾಗಿಸಲು ಬಯಸುತ್ತೇನೆ ಎಂಬ ಅರ್ಥ ಕೊಡುವ ಡಾ. ಕೀರ್ತನ್ ಉಪಾಧ್ಯರ ಈ ಕಮೆಂಟ್ ಮುಸ್ಲಿಂ ಧರ್ಮದ ವಿರುದ್ಧ ಅವಹೇಳನಕಾರಿ ಮತ್ತು ಪ್ರಚೋದನಾಕಾರಿಯಾಗಿ ಕಾಮೆಂಟ್ ಮಾಡಿ ಧರ್ಮ-ಧರ್ಮಗಳ ನಡುವೆ ದ್ವೇಷವನ್ನುಂಟು ಮಾಡುವುದಾಗಿದೆ. ಈ ಬಗ್ಗೆ ವ್ಯಾಪಕ ಟೀಕೆ, ಆಕ್ರೋಶಗಳು ಸೋಶಿಯಲ್ ಮೀಡಿಯಾದಲ್ಲಿ ವ್ಯಕ್ತವಾಗಿವೆ. ಈ ಬಗ್ಗೆ ಸ್ಕ್ರೀನ್‌ಶಾಟ್ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದ್ದು, ವಿವಾದಕ್ಕೆ ಕಾರಣವಾಗಿದೆ. ಈ ವೈದ್ಯನ ವಿರುದ್ಧ ಕ್ರಮಕ್ಕೆ ಕರ್ನಾಟಕ ಡಿಜಿಪಿಯನ್ನು ಟ್ಯಾಗ್ ಮಾಡಿ ಅನೇಕರು ಟ್ವೀಟ್ ಮಾಡಿದ್ದಾರೆ. ಅಲ್ಲದೆ ಈ ವೈದ್ಯ ಮೇಲೆ ಹೇಗೆ ವಿಶ್ವಾಸ ಇಟ್ಟು ಚಿಕಿತ್ಸೆ ಪಡೆಯುವುದು ಎಂದು ಜನ ಮಾತನಾಡಿದ್ದಾರೆ.

ಉಡುಪಿ ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ಸೋಶಿಯಲ್ ಮೀಡಿಯಾ ಮಾನಿಟರಿಂಗ್ ಸೆಲ್‌ನ ಉಸ್ತುವಾರಿ ಪೊಲೀಸ್ ಉಪನಿರೀಕ್ಷಕ (ನಿಸ್ತಂತು) ಅಜ್ಮಲ್ ಇಬ್ರಾಹಿಂ ಇ.ಎ. ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದೆ. ಜು. 14, ಸಂಜೆ 4.30 ರ ಸುಮಾರಿಗೆ ಈ ಬಗ್ಗೆ ಗಮನಕ್ಕೆ ಬಂದಿದ್ದು, ಮುಸ್ಲಿಂ ಧರ್ಮದ ವಿರುದ್ಧ ಅವಹೇಳನಾಕಾರಿ ಮತ್ತು ಪ್ರಚೋದನಕಾರಿಯಾಗಿ ಕಮೆಂಟ್ ಮಾಡುವ ಮೂಲಕ ಧರ್ಮ-ಧರ್ಮಗಳ ನಡುವೆ ದ್ವೇಷವನ್ನುಂಟು ಮಾಡಿ, ಕೋಮು ಸೌಹಾರ್ದತೆಗೆ ಧಕ್ಕೆ ತರುವ ಬಗ್ಗೆ ಡಾ. ಕೀರ್ತನ್ ಉಪಾಧ್ಯ ವಿರುದ್ಧ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳುವಂತೆ ದೂರಿನಲ್ಲಿ ತಿಳಿಸಲಾಗಿದೆ.

ಪ್ರಕರಣ ದಾಖಲು; ತನಿಖೆ 

ಅದರಂತೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಡಾ. ಕೀರ್ತನ್ ಉಪಾಧ್ಯ ವಿರುದ್ಧ ಭಾರತೀಯ ನ್ಯಾಯ ಸಂಹಿತೆ ಕಲಂ 196, 353 ಅಡಿ ಪ್ರಕರಣ ದಾಖಲಿಸಿಕೊಂಡು, ತನಿಖೆ ಮುಂದುವರಿಸಲಾಗಿದೆ.

ಟ್ವೀಟ್ ವೈರಲ್ ಆಗುತ್ತಿದ್ದಂತೆ ಪೋಸ್ಟ್ ಡಿಲೀಟ್

ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಟ್ವೀಟ್ ವೈರಲ್ ಆಗುತ್ತಿದ್ದಂತೆ ಡಾ. ಉಪಾಧ್ಯ ಅವರು ಪೋಸ್ಟನ್ನು ಡಿಲೀಟ್ ಮಾಡಿದ್ದು, ಮತ್ತೊಂದು ಟ್ವೀಟ್‌ನಲ್ಲಿ ಯಾರೋ ತನ್ನ ಖಾತೆಯನ್ನು ಹ್ಯಾಕ್ ಮಾಡಿದ್ದಾರೆ ಎಂದು ತಿಳಿಸಿದ್ದಾರೆ. ಈ ಬಗ್ಗೆ ಯಾವುದೇ ಠಾಣೆಯಲ್ಲೂ ದೂರು ದಾಖಲಿಸಿಲ್ಲ ಎಂದು ಪೊಲೀಸ್ ಮೂಲಗಳು ಖಚಿತ ಪಡಿಸಿವೆ.


Ads on article

Advertise in articles 1

advertising articles 2

Advertise under the article