ಭ್ರಷ್ಟಾಚಾರದಿಂದ ಕಲ್ಯಾಣ ಮಂಡಳಿ ಮುಕ್ತಗೊಳಿಸಿ; ಬಡ ಕಾರ್ಮಿಕರ ಬದುಕು ರಕ್ಷಿಸಲು ಆಗ್ರಹಿಸಿ ಆಗಸ್ಟ್ 5ರಂದು ಕಟ್ಟಡ ನಿರ್ಮಾಣ ಕಾರ್ಮಿಕರಿಂದ 'ಮುಖ್ಯಮಂತ್ರಿ ಮನೆ ಚಲೋ' ಹೋರಾಟ
ಉಡುಪಿ: ಹೈಕೋರ್ಟ್ ಆದೇಶದಂತೆ ಶೈಕ್ಷಣಿಕ ಧನಸಹಾಯ ಪಾವತಿಸಬೇಕು. ಖರೀದಿಗಳ ಮೂಲಕ ನಡೆಸಲಾಗುವ ವ್ಯಾಪಕ ಭ್ರಷ್ಟಾಚಾರದಿಂದ ಕಲ್ಯಾಣ ಮಂಡಳಿಯನ್ನು ಮುಕ್ತಗೊಳಿಸಬೇಕು. ಆ ಮೂಲಕ ಮಂಡಳಿ ನಿಧಿ ಉಳಿಸಿ, ಬಡ ಕಾರ್ಮಿಕರ ಬದುಕು ರಕ್ಷಿಸಲು ಆಗ್ರಹಿಸಿ ಆಗಸ್ಟ್ 5ರಂದು ರಾಜ್ಯದ ಸಾವಿರಾರು ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರು ಬೆಂಗಳೂರಿನಲ್ಲಿ ಬೃಹತ್ ಮುಖ್ಯಮಂತ್ರಿ ಮನೆ ಚಲೋ ಹೋರಾಟ ನಡೆಸಲಿದ್ದಾರೆ ಎಂದು ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಷನ್ ನ ಪ್ರಧಾನ ಕಾರ್ಯದರ್ಶಿ ಕೆ. ಮಹಾಂತೇಶ್ ಹೇಳಿದರು.
ಉಡುಪಿಯಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಟ್ಟಡ ಕಾರ್ಮಿಕ ಸಂಘಗಳ ಒಕ್ಕೂಟವಾದ ಕರ್ನಾಟಕ ರಾಜ್ಯ ಕಟ್ಟಡ ಕಾರ್ಮಿಕ ಸಂಘಗಳ ಸಮನ್ವಯ ಸಮಿತಿ ನೇತೃತ್ವದಲ್ಲಿ ಈ ಹೋರಾಟವನ್ನು ಹಮ್ಮಿಕೊಳ್ಳಲಾಗಿದೆ. ಈ ಹೋರಾಟದಲ್ಲಿ ರಾಜ್ಯಾದ್ಯಾಂತ ಹತ್ತು ಸಾವಿರಕ್ಕೂ ಅಧಿಕ ಕಟ್ಟಡ ನಿರ್ಮಾಣ ಕಾರ್ಮಿಕರು ಭಾಗವಹಿಸಲಿದ್ದಾರೆ ಎಂದರು.
ಶೈಕ್ಷಣಿಕ ಸಹಾಯಧನ ಕಡಿತ ಮಾಡಿರುವ ಆದೇಶ ವಾಪಸ್ ಪಡೆಯಬೇಕು. ಹೈಕೋರ್ಟ ಆದೇಶದಂತೆ 2021 ರ ಅಧಿಸೂಚನೆ ಅನ್ವಹಿಸಿ, ಶೈಕ್ಷಣಿಕ ಧನ ಸಹಾಯ ಬಿಡುಗಡೆ ಮಾಡಬೇಕು. 2022-23-24 ಸಾಲಿನ ಬಾಕಿ ಅರ್ಜಿಗಳಿಗೂ ಧನ ಸಹಾಯ ಪಾವತಿಸಬೇಕು. ನೈಜ ಕಾರ್ಮಿಕರ ನೋಂದಣಿ ಮತ್ತು ಮರು ನೋಂದಣಿ ಅರ್ಜಿಗಳನ್ನು ಸಕಾರಣವಿಲ್ಲದೇ ತಿರಸ್ಕರಿಸುವುದು ನಿಲ್ಲಬೇಕು ಹಾಗೂ ವಿಳಂಬ ಮಾಡದೇ ಕಾರ್ಡ್ ವಿತರಿಸಬೇಕು ಎಂದು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಫೆಡರೇಷನ್ ನ ಬಾಲಕೃಷ್ಣ ಶೆಟ್ಟಿ, ಶೇಖರ್ ಬಂಗೇರಾ, ಸುರೇಶ್ ಕಲ್ಲಾಗಾರ, ರೋನಾಲ್ಡ್ ರಾಜೇಶ್ ಇದ್ದರು.