ಕ್ರೆಸೆಂಟ್ ಇಂಟರ್ನ್ಯಾಷನಲ್ ವಿದ್ಯಾಸಂಸ್ಥೆಯಲ್ಲಿ ಕಾರ್ಗಿಲ್ ವಿಜಯ ದಿನಾಚರಣೆ
Sunday, July 28, 2024
ಕಾಪು: ಎಲ್ಲಾ ಭಾರತೀಯರನ್ನು ಭಾವಾವೇಶಕ್ಕೆ ಒಳಪಡಿಸಿದ ಕಾರ್ಗಿಲ್ ಯುದ್ಧ ನಡೆದು 25 ವರ್ಷಗಳು ಸಂದ ಹಿನ್ನೆಲೆಯಲ್ಲಿ ಕಾರ್ಗಿಲ್ ವಿಜಯ ದಿನದ ಸ್ಮರಣಾರ್ಥ ವೀರ ಯೋಧರಿಗೆ ನಮನಗಳನ್ನು ಸಲ್ಲಿಸುವ ಸಲುವಾಗಿ ವಿಶೇಷ ಕಾರ್ಯಕ್ರಮವೊಂದನ್ನು ಕಾಪು ಚಂದ್ರನಗರದ ಕ್ರೆಸೆಂಟ್ ಇಂಟರ್ನ್ಯಾಷನಲ್ ವಿದ್ಯಾಸಂಸ್ಥೆಯಲ್ಲಿ ಹಮ್ಮಿಕೊಳ್ಳಲಾಯಿತು.
ಭಾರತೀಯ ಸೇನೆಯಲ್ಲಿ ಸತತ 20 ವರ್ಷಗಳ ಕಾಲ ಸೇವೆಯನ್ನು ಸಲ್ಲಿಸಿರುವ ನಿವೃತ್ತ ಯೋಧ ಸ್ಥಳೀಯ ಬಂಟಕಲ್ ಸಮೀಪದ ರಾಜೇಂದ್ರ ಪಾಟ್ಕರ್ ಅವರು ಮುಖ್ಯ ಅತಿಥಿಯಾಗಿ ಆಗಮಿಸಿ ಸೇನೆಯಲ್ಲಿನ ಸುದೀರ್ಘ ಅವಧಿಯ ತನ್ನ ಅನುಭವಗಳನ್ನು ವಿದ್ಯಾರ್ಥಿಗಳೊಂದಿಗೆ ಹಂಚಿಕೊಂಡರು.
ನಮಗೆ ನೆಲೆಯೂರಲು ಅವಕಾಶವನ್ನು ಕೊಟ್ಟ ಭಾರತ ಮಾತೆಯನ್ನು ರಕ್ಷಿಸಲು ಸದಾ ನಾವು ಕಟಿಬದ್ಧರಾಗಿರಬೇಕು ಎಂಬುದಾಗಿ ವಿದ್ಯಾರ್ಥಿಗಳಿಗೆ ಕಿವಿ ಮಾತನ್ನು ಹೇಳಿದರಷ್ಟೇ ಅಲ್ಲದೆ ಸೇನೆಯನ್ನು ಸೇರಲು ಬೇಕಾದ ಅರ್ಹತೆ ಹಾಗೂ ಅಲ್ಲಿ ಸಿಗುವ ಸೌಲಭ್ಯ ಗೌರವ-ಮಾನ್ಯತೆ ಇತ್ಯಾದಿಗಳ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿ ಹೇಳಿದರು.
ಇದೇ ಸಂದರ್ಭದಲ್ಲಿ ಶಾಲಾ ಶೈಕ್ಷಣಿಕ ಆಡಳಿತ ನಿರ್ದೇಶಕರಾದ ನವಾಬ್ ಹಸನ್ ಗುತ್ತೇದಾರ್ ಮಾತನಾಡಿ, ನಮ್ಮ ದೇಶದ ಯುವ ಜನತೆಯನ್ನು ಹಾಳುಗೆಡವುವಲ್ಲಿ ಅನೇಕ ರಾಷ್ಟ್ರಗಳ ಹುನ್ನಾರ ನಡೆಯುತ್ತಿರುವ ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ಎಲ್ಲಿಯೂ ಕೂಡ ಧೃತಿಗೆಡಬಾರದೆಂಬ ಕಿವಿ ಮಾತಿನೊಂದಿಗೆ ಹೆಚ್ಚಿನ ಪ್ರಮಾಣದಲ್ಲಿ ದೇಶಪ್ರೇಮವನ್ನು ಬೆಳೆಸಿಕೊಳ್ಳುವಂತೆ ಹೇಳಿದರು.
ಈ ಸಂದರ್ಭದಲ್ಲಿ ಆಂತರಿಕ ರಕ್ಷಕ ವಿಭಾಗದ ಅಧಿಕಾರಿ ಅಬ್ದುಲ್ ರಜಾಕ್ ಹಾಗೂ ಶಾಲಾ ಉಪಪ್ರಾಂಶುಪಾಲರಾದ ಗುರುದತ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕನ್ನಡ ಭಾಷಾ ಶಿಕ್ಷಕಿ ಲಕ್ಷ್ಮೀದೇವಿ .ಪಿ .ಶೆಟ್ಟಿ ಪ್ರಾಸ್ತಾವಿಕ ಮಾತುಗಳನ್ನಾಡುವುದರೊಂದಿಗೆ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ವಿಜ್ಞಾನ ಶಿಕ್ಷಕಿ ಆಸಿಮ್ ಬಾನು ವಂದನಾರ್ಪಣೆಗೆದರು.