ವಾಲ್ಮೀಕಿ ನಿಗಮ ಹಗರಣ ಪ್ರಕರಣ:  ಮಾಜಿ ಸಚಿವ ನಾಗೇಂದ್ರ ಜು.18ರವರೆಗೆ ED ಕಸ್ಟಡಿಗೆ

ವಾಲ್ಮೀಕಿ ನಿಗಮ ಹಗರಣ ಪ್ರಕರಣ: ಮಾಜಿ ಸಚಿವ ನಾಗೇಂದ್ರ ಜು.18ರವರೆಗೆ ED ಕಸ್ಟಡಿಗೆ

ಬೆಂಗಳೂರು: ಮಹರ್ಷಿ ವಾಲ್ಮೀಕಿ ನಿಗಮ ಹಗರಣದಲ್ಲಿ ಜಾರಿ ನಿರ್ದೇಶನಾಲಯದ(ED) ವಶಕ್ಕೆ ಸಿಲುಕಿರುವ ಮಾಜಿ ಸಚಿವ ಕಾಂಗ್ರೆಸ್ ಶಾಸಕ ಎಲ್ ನಾಗೇಂದ್ರ ಅವರನ್ನು ಜುಲೈ 18ರವರೆಗೆ ಜಾರಿ ನಿರ್ದೇಶನಾಲಯ ವಶಕ್ಕೆ ಪಡೆದಿದೆ.

ನಿನ್ನೆ ಜಾರಿ ನಿರ್ದೇಶನಾಲಯ ಅಧಿಕಾರಿಗಳು ಬೆಂಗಳೂರಿನ ಶಾಂತಿನಗರದಲ್ಲಿರುವ ಇಡಿ ಕಚೇರಿಯಲ್ಲಿ 10 ಗಂಟೆಗೂ ಹೆಚ್ಚು ಕಾಲ ವಿಚಾರಣೆ ನಡೆಸಿ ಬಳಿಕ ಬಂಧಿಸಿದ್ದಾರೆ. ನಿನ್ನೆ ತಡರಾತ್ರಿ ಬೌರಿಂಗ್ ಆಸ್ಪತ್ರೆಯಲ್ಲಿ ಮೆಡಿಕಲ್ ಟೆಸ್ಟ್ ಮಾಡಲಾಗಿದ್ದು, ಇಂದು ಬೆಳಗ್ಗೆ ಯಲಹಂಕದಲ್ಲಿರುವ ಜಡ್ಜ್ ನಿವಾಸದಲ್ಲಿ ಜಡ್ಜ್ ಮುಂದೆ ಹಾಜರುಪಡಿಸಿದ್ದಾರೆ. ವಿಚಾರಣೆ ಬಳಿಕ ಜುಲೈ 18ರವರೆಗೆ ಇಡಿ ಕಸ್ಟಡಿಗೆ ನಾಗೇಂದ್ರರನ್ನು ನೀಡಲಾಗಿದೆ.

ನಿನ್ನೆ ವಿಚಾರಣೆ ವೇಳೆ ವಾಲ್ಮೀಕಿ ಬೋರ್ಡ್‌ನ 94 ಕೋಟಿಗೂ ಅಧಿಕ ಹಣದ ಅವ್ಯವಹಾರದ ಬಗ್ಗೆ ಪ್ರಶ್ನೆಗಳ ಸುರಿಮಳೆಗರೆದಿದ್ದಾರೆ ಎನ್ನಲಾಗಿದೆ. ವಿವಿಧ ಬ್ಯಾಂಕ್ ಖಾತೆಗಳನ್ನು ಮುಂದಿಟ್ಟು ಇ.ಡಿ ವಿಚಾರಣೆ ಮಾಡಿದೆ. ಹೈದರಾಬಾದ್ ನಲ್ಲಿ ಬೇನಾಮಿ ಖಾತೆಗಳೂ ಇವೆ ಎನ್ನಲಾಗಿದೆ.

ಯೂನಿಯನ್ ಬ್ಯಾಂಕ್ ಖಾತೆ ಎಂಜಿ ರೋಡ್‌ಗೆ ವರ್ಗಾಯಿಸಿದ್ದು ಯಾಕೆ? ವಿವಿಧ ಬ್ಯಾಂಕ್ ಖಾತೆಗಳಿಗೆ ಹಣ ವರ್ಗಾವಣೆ ಆಗಿದ್ದು ಹೇಗೆ ಎಂದು ಪ್ರಶ್ನೆ ಮಾಡಲಾಗಿದೆ. ಅಕ್ರಮದಲ್ಲಿ ನಾಗೇಂದ್ರ ಕೈವಾಡ, ಕುಮ್ಮಕ್ಕು ಇದೆ ಎನ್ನಲಾಗಿದ್ದು, ಇದಕ್ಕೆ ಇ.ಡಿ ಅಧಿಕಾರಿಗಳಿಗೆ ಸಾಕ್ಷ್ಯಾಧಾರ ಸಿಕ್ಕಿದ್ದು, ಇದೇ ಆಧಾರದಲ್ಲೇ ಅವರ ಬಂಧನವಾಗಿದೆ ಎನ್ನಲಾಗುತ್ತಿದೆ.

ನನ್ನ ಪಾತ್ರವೇನೂ ಇಲ್ಲ: ಜಾರಿ ನಿರ್ದೇಶನಾಲಯ ಕಸ್ಟಡಿಗೆ ಕೊಟ್ಟ ಬಳಿಕ ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯೆ ನೀಡಿರುವ ನಾಗೇಂದ್ರ ಅವರು, ಪ್ರಕರಣದಲ್ಲಿ ನನ್ನ ಪಾತ್ರ ಇಲ್ಲವೇ ಇಲ್ಲ, ನನ್ನ ಬಂಧನ ಏಕೆ ಆಗಿದೆ ಎಂದು ಗೊತ್ತಿಲ್ಲ ಎಂದರು. ನಿಮ್ಮ ಅಧಿಕಾರಿಗಳು ನಿಮಗೆ ಅರಿವಿಲ್ಲದೇ ಏನಾದ್ರು ಮಾಡಿದ್ರಾ ಎಂಬ ಪ್ರಶ್ನೆಗೆ ಯಾವುದೇ ಉತ್ತರ ನೀಡದೇ ತೆರಳಿದರು.

ಶಾಸಕ ದದ್ದಲ್ ಗೂ ಬಂಧನ ಭೀತಿ: ವಾಲ್ಮೀಕಿ ನಿಗಮದ ಅಧ್ಯಕ್ಷ ಬಸನಗೌಡ ದದ್ದಲ್​ಗೂ ಬಂಧನ ಭೀತಿ ಉಂಟಾಗಿದೆ. ಶಾಸಕ ದದ್ದಲ್​ರನ್ನೂ ಸಹ ಇಡಿ ಅಧಿಕಾರಿಗಳು ವಿಚಾರಣೆಗೊಳಪಡಿಸುವ ಸಾಧ್ಯತೆ ಇದೆ. ಈ ಮಧ್ಯೆ ನಿನ್ನೆ ಎಸ್​ಐಟಿ ಕಚೇರಿಗೆ ತೆರಳಿದ್ದ ಶಾಸಕ ಬಸನಗೌಡ ದದ್ದಲ್, ವಿಚಾರಣೆ ಬಿಸಿ ಎದುರಿಸಿದರು.

Ads on article

Advertise in articles 1

advertising articles 2

Advertise under the article