
ಡಾ.ಹಾಜಿ ಯು.ಕೆ.ಮೋನು ಕಣಚೂರು ಅವರ ಸಾಧನೆಯನ್ನು ಕೊಂಡಾಡಿದ ಯು.ಟಿ.ಖಾದರ್; ಅದ್ದೂರಿಯಾಗಿ ನಡೆದ ಕಣಚೂರು ಸಮೂಹ ಸಂಸ್ಥೆಗಳ ಸಂಸ್ಥಾಪನಾ ದಿನಾಚರಣೆ
ಮಂಗಳೂರು: ಕಣಚೂರು ಸಮೂಹ ಸಂಸ್ಥೆಯ ಅಧ್ಯಕ್ಷ ಡಾ.ಹಾಜಿ ಯು.ಕೆ.ಮೋನು ಕಣಚೂರು ಅವರ ಸಾರಥ್ಯದಲ್ಲಿ ಸಾಗುತ್ತಿರುವ ಕಣಚೂರ್ ಇಸ್ಲಾಮಿಕ್ ಎಜುಕೇಶನ್ ಟ್ರಸ್ಟ್ ನ ಅಧೀನದಲ್ಲಿರುವ ಕಣಚೂರು ಸಮೂಹ ಸಂಸ್ಥೆಗಳ ಸಂಸ್ಥಾಪಣಾ ದಿನಾಚರಣೆಯು ಕಣಚೂರು ಪಬ್ಲಿಕ್ ಸ್ಕೂಲ್‌ನ ಸಭಾಂಗಣದಲ್ಲಿ ಶನಿವಾರ ಅದ್ದೂರಿಯಾಗಿ ನಡೆಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ವಿಧಾನಸಭಾ ಅಧ್ಯಕ್ಷರಾದ ಯು.ಟಿ.ಖಾದರ್, ಶಿಕ್ಷಣ ಪ್ರತಿಯೊಬ್ಬರ ಜೀವನಕ್ಕೂ ಅತಿ ಮುಖ್ಯ. ವಿಧ್ಯಾರ್ಥಿಗಳು ಶಿಕ್ಷಣದೊಂದಿಗೆ ಮಾನವೀಯತೆ, ಉತ್ತಮ ನಾಯಕತ್ವವನ್ನು ಬೆಳೆಸಿಕೊಂಡು ಭವಿಷ್ಯದಲ್ಲಿ ಯಶಸ್ವೀ ಜೀವನವನ್ನು ಕಂಡುಕೊಳ್ಳಬೇಕು ಎಂದರು.
ಕಣಚೂರು ಮೋನು ಅವರ ಸಾಧನೆ ಮತ್ತು ಪರಿಶ್ರಮದ ಫಲವಾಗಿ ಕಣಚೂರು ಸಮೂಹ ಸಂಸ್ಥೆಯು ಗ್ರಾಮೀಣ ಪ್ರದೇಶವಾದ ನಾಟೆಕಲ್ ನಲ್ಲಿ ನಿರ್ಮಾಣಗೊಂಡು ಈ ಭಾಗದ ಚಿತ್ರಣವನ್ನೇ ಬದಲಾಯಿಸಿದೆ. ಶಿಕ್ಷಣ ಕ್ಷೇತ್ರದಲ್ಲಿ ಕಣಚೂರು ಮೋನು ಅವರು ಮಾಡಿರುವ ಸಾಧನೆ ಜನ ಮೆಚ್ಚುವಂತದ್ದು ಎಂದರು.
ಕಣ್ಣೂರು ಮತ್ತು ಕ್ಯಾಲಿಕಟ್ ವಿಶ್ವವಿದ್ಯಾನಿಲಯಗಳ ವಿಶ್ರಾಂತ ಕುಲಪತಿ ಪ್ರೊ. ಪ್ರೊ. ಡಾ. ಎಂ. ಅಬ್ದುಲ್ ರಹಿಮಾನ್ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ, ಕಣಚೂರು ಶಿಕ್ಷಣ ಸಂಸ್ಥೆಯು ಇಂದು ಶಿಕ್ಷಣ ಕ್ಷೇತ್ರದಲ್ಲಿ ಅಪಾರ ಸಾಧನೆಮಾಡಿದೆ. ಅಸಂಖ್ಯಾತ ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸುವಲ್ಲಿ ಅಧ್ಯಾಪಕರು ಮತ್ತು ಆಡಳಿತ ಮಂಡಳಿಯ ಪ್ರಯತ್ನ ಶ್ಲಾಘನೀಯ ಎಂದರು.
ಕಣಚೂರು ಸಮೂಹ ಸಂಸ್ಥೆಯ ಅಧ್ಯಕ್ಷರಾದ ಡಾ. ಹಾಜಿ ಯು.ಕೆ.ಮೋನು ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು. ಕಣಚೂರು ಇಸ್ಲಾಮಿಕ್ ಎಜುಕೇಶನ್ ಟ್ರಸ್ಟ್ ನ ಟ್ರಸ್ಟಿ ಜೊಹರಾ ಮೋನು, ಕಣಚೂರು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ನಿರ್ದೇಶಕರಾದ ಅಬ್ದುಲ್ ರಹಿಮಾನ್,ಕಣಚೂರು ಆರೋಗ್ಯ ವಿಜ್ಞಾನಗಳ ಸಲಹಾ ಮಂಡಳಿಯ ಅಧ್ಯಕ್ಷರಾದ ಡಾ. ಮಹಮ್ಮದ್ ಇಸ್ಮಾಯಿಲ್ ಹೆಜಮಾಡಿ, ಮುಖ್ಯ ಆಡಳಿತಾಧಿಕಾರಿ ಡಾ.ರೋಹನ್ ಮೋನಿಸ್,ಕಣಚೂರು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಯ ಡೀನ್ ಡಾ.ಶಹನವಾಜ್ ಮಾಣಿಪ್ಪಾಡಿ ಮೊದಲಾದವರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ವಿಧಾನಸಭಾ ಅಧ್ಯಕ್ಷರಾದ ಯು.ಟಿ.ಖಾದರ್, ಡಾ.ಮೊಹಮ್ಮದ್ ಇಸ್ಮಾಯಿಲ್ ಹೆಜಮಾಡಿ, ಡಾ.ಹಾಜಿ ಯು.ಕೆ.ಮೋನು ಹಾಗು ಅವರ ಧರ್ಮ ಪತ್ನಿಯನ್ನು ಅಭಿನಂದಿಸಲಾಯಿತು. ಡಾ ಶಹನವಾಝ್ ಸ್ವಾಗತಿಸಿ, ಲಿನೆಟ್ ವಂದಿಸಿದರು.