ಸರಕಾರಿ ಅಧಿಕಾರಿಗಳು ಇನ್ನು ನಿಕ್ಕರ್‌ಗಳಲ್ಲಿ ಬರಬಹುದು! ಸರ್ಕಾರಿ ನೌಕರರು RSS ನಲ್ಲಿ ತೊಡಗಿಕೊಳ್ಳುವುದಕ್ಕೆ ಇದ್ದ ನಿಷೇಧ ವಾಪಸ್ ಪಡೆದದ್ದಕ್ಕೆ ಕಾಂಗ್ರೆಸ್ ಟೀಕೆ

ಸರಕಾರಿ ಅಧಿಕಾರಿಗಳು ಇನ್ನು ನಿಕ್ಕರ್‌ಗಳಲ್ಲಿ ಬರಬಹುದು! ಸರ್ಕಾರಿ ನೌಕರರು RSS ನಲ್ಲಿ ತೊಡಗಿಕೊಳ್ಳುವುದಕ್ಕೆ ಇದ್ದ ನಿಷೇಧ ವಾಪಸ್ ಪಡೆದದ್ದಕ್ಕೆ ಕಾಂಗ್ರೆಸ್ ಟೀಕೆ

ನವದೆಹಲಿ: ಸರ್ಕಾರಿ ನೌಕರರು RSS ನಲ್ಲಿ ತೊಡಗಿಕೊಳ್ಳುವುದಕ್ಕೆ ದಶಕಗಳ ಹಿಂದೆ ಜಾರಿಗೊಳಿಸಲಾಗಿದ್ದ ನಿಷೇಧವನ್ನು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ವಾಪಸ್ ಪಡೆದಿದೆ.

1966 ರಲ್ಲಿ ಸರ್ಕಾರಿ ನೌಕರರು ಆರ್ ಎಸ್ಎಸ್ ನಲ್ಲಿ ತೊಡಗಿಸಿಕೊಳ್ಳುವುದಕ್ಕೆ ನಿಷೇಧ ವಿಧಿಸಲಾಗಿತ್ತು. ಜು.09 ರಂದು ಸಿಬ್ಬಂದಿ ಮತ್ತು ತರಬೇತಿ ಇಲಾಖೆ ಈ ನಿಷೇಧವನ್ನು ಹಿಂಪಡೆದಿದ್ದು, ಇನ್ನು ಮುಂದಿನ ದಿನಗಳಲ್ಲಿ ಸರ್ಕಾರಿ ನೌಕರರು ಆರ್ ಎಸ್ಎಸ್ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಬಹುದಾಗಿದೆ.

ಈ ಬಗ್ಗೆ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಟ್ವೀಟ್ ಮಾಡಿದ್ದು, 1948 ರಲ್ಲಿ ಗಾಂಧಿ ಅವರ ಹತ್ಯೆಯಾದ ಬಳಿಕ ಸರ್ದಾರ್ ಪಟೇಲರು ಆರ್ ಎಸ್ಎಸ್ ನ್ನು ಫೆಬ್ರವರಿಯಲ್ಲಿ ನಿಷೇಧಿಸಿದ್ದರು. ನಂತರದಲ್ಲಿ ಆರ್ ಎಸ್ಎಸ್ ಒಳ್ಳೆಯ ನಡತೆಯನ್ನು ಖಚಿತಪಡಿಸಿದ್ದ ಕಾರಣ ನಿಷೇಧವನ್ನು ಹಿಂಪಡೆಯಲಾಗಿತ್ತು. ಇಷ್ಟೆಲ್ಲಾ ಘಟನೆಗಳಾದ ಬಳಿಕವೂ ಆರ್ ಎಸ್ಎಸ್ ನಾಗ್ಪುರದ ತನ್ನ ಕಚೇರಿಯಲ್ಲಿ ತಿರಂಗಾ ಹಾರಿಸಿರಲಿಲ್ಲ. 1966 ರಲ್ಲಿ ಮತ್ತೆ ನಿಷೇಧ ವಿಧಿಸಲಾಗಿತ್ತು.

"ಸರ್ಕಾರಿ ನೌಕರರು ರಾಷ್ಟ್ರೀಯ ಸ್ವಯಂ ಸೇವಕ ಸಂಘ ಮತ್ತು ಜಮಾತೆ ಇಸ್ಲಾಮಿಯ ಸದಸ್ಯತ್ವ ಮತ್ತು ಚಟುವಟಿಕೆಗಳಲ್ಲಿ ಭಾಗವಹಿಸುವಿಕೆಗೆ ಸಂಬಂಧಿಸಿದಂತೆ ಸರ್ಕಾರದ ನೀತಿಯ ಬಗ್ಗೆ ಕೆಲವು ಅನುಮಾನಗಳನ್ನು ಹುಟ್ಟುಹಾಕಲಾಗಿದೆ ಎಂದು ಸ್ಪಷ್ಟಪಡಿಸಲಾಗಿದೆ. ಈ ಎರಡು ಸಂಸ್ಥೆಗಳು ಅಂತಹ ಸ್ವಭಾವವನ್ನು ಹೊಂದಿದ್ದು, ಸರ್ಕಾರಿ ನೌಕರರು ಅವುಗಳಲ್ಲಿ ಭಾಗವಹಿಸುವುದು ಕೇಂದ್ರ ನಾಗರಿಕ ಸೇವೆಗಳ ನೀತಿ ನಿಯಮಗಳಿಗೆ ಒಳಪಡುತ್ತದೆ ಎಂದು 1966 ರ ಆದೇಶವನ್ನು ಕಾಂಗ್ರೆಸ್ ಉಲ್ಲೇಖಿಸಿದೆ.

ರಮೇಶ್ ಅವರು ನಿಷೇಧವನ್ನು ಹಿಂತೆಗೆದುಕೊಳ್ಳುವುದನ್ನು ಖಂಡಿಸಿದ್ದಾರೆ ಮತ್ತು "ಜೂನ್ 4, 2024 ರ ನಂತರ, ಜೈವಿಕವಾಗಿ ಜನಿಸದ ವ್ಯಕ್ತಿ ಎಂದು ಸ್ವಯಂ ಘೋಷಿಸಿಕೊಂಡಿರುವ ಪ್ರಧಾನಮಂತ್ರಿ ಮತ್ತು ಆರ್ ಎಸ್ಎಸ್ ನಡುವಿನ ಸಂಬಂಧಗಳು ಹದಗೆಟ್ಟಿದ್ದು, ಈ ಸಮಯದಲ್ಲೇ 58 ವರ್ಷಗಳ ನಿಷೇಧದ ಕ್ರಮ ಹಿಂಪಡೆದಿರುವ ನಿರ್ಧಾರವನ್ನು ರಮೇಶ್ ಪ್ರಶ್ನಿಸಿದ್ದಾರೆ. ಮಾಜಿ ಪ್ರಧಾನಿ ಅಟಲ್ ಬಿಹಾರಿ ಅವರ ಅವಧಿಯಲ್ಲೂ ಸರ್ಕಾರಿ ನೌಕರರು ಆರ್ ಎಸ್ಎಸ್ ನ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದಕ್ಕೆ ನಿರ್ಬಂಧ ಚಾಲ್ತಿಯಲ್ಲಿದ್ದುದ್ದನ್ನು ರಮೇಶ್ ಉಲ್ಲೇಖಿಸಿದ್ದಾರೆ.

"ಅಧಿಕಾರಿಗಳು ಈಗ ನಿಕ್ಕರ್‌ಗಳಲ್ಲಿ ಬರಬಹುದು ಎಂದು ನಾನು ಭಾವಿಸುತ್ತೇನೆ" ಎಂದು ಜೈರಾಮ್ ರಮೇಶ್ ಟೀಕಾ ಪ್ರಹಾರ ನಡೆಸಿದ್ದಾರೆ.

Ads on article

Advertise in articles 1

advertising articles 2

Advertise under the article