
ಕನ್ವರ್ ಯಾತ್ರೆ; ಎಲ್ಲ ಆಹಾರ ಮಳಿಗೆಗಳು ತಮ್ಮ ಮಾಲೀಕರ ಹೆಸರು ಬಹಿರಂಗಪಡಿಸಬೇಕು ಎಂಬ ಉತ್ತರ ಪ್ರದೇಶ ಸರ್ಕಾರದ ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆ: 3 ರಾಜ್ಯಗಳಿಗೆ ನೋಟಿಸ್
ನವದೆಹಲಿ: ಕನ್ವರ್ ಯಾತ್ರೆ ಸಾಗುವ ಮಾರ್ಗದಲ್ಲಿನ ಎಲ್ಲ ಆಹಾರ ಮಳಿಗೆಗಳು ತಮ್ಮ ಮಾಲೀಕರ ಹೆಸರು ಬಹಿರಂಗಪಡಿಸಬೇಕು ಎಂಬ ಉತ್ತರ ಪ್ರದೇಶ ಸರ್ಕಾರದ ಆದೇಶಕ್ಕೆ ಸೋಮವಾರ ಸುಪ್ರೀಂ ಕೋರ್ಟ್ ತಡೆ ನೀಡಿದ್ದು ಮಾತ್ರವಲ್ಲದೇ ಉತ್ತರ ಪ್ರದೇಶ ಸೇರಿ 3 ರಾಜ್ಯಗಳಿಗೆ ನೋಟಿಸ್ ನೀಡಿದೆ.
ಯಾತ್ರೆಯ ಸಂದರ್ಭದಲ್ಲಿ ಅಂಗಡಿ ಮಾಲೀಕರು ತಮ್ಮ ಹೆಸರು ಮತ್ತು ವಿವರಗಳನ್ನು ಅಂಗಡಿಗಳ ಹೊರಗೆ ಪ್ರದರ್ಶಿಸುವಂತೆ ಉತ್ತರ ಪ್ರದೇಶ ಸರ್ಕಾರ ನೀಡಿದ್ದ ನಿರ್ದೇಶನ ಪ್ರಶ್ನಿಸಿ ಸರ್ಕಾರೇತರ ಸಂಸ್ಥೆ ಅಸೋಸಿಯೇಷನ್ ಆಫ್ ಪ್ರೊಟೆಕ್ಷನ್ ಆಫ್ ಸಿವಿಲ್ ರೈಟ್ಸ್ (ಎಪಿಸಿಆರ್) ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು. ನ್ಯಾಯಮೂರ್ತಿಗಳಾದ ಹೃಷಿಕೇಶ್ ರಾಯ್ ಮತ್ತು ಎಸ್ ವಿ ಎನ್ ಭಟ್ಟಿ ಅವರಿರುವ ಪೀಠ ಸೋಮವಾರ, ಜುಲೈ 22,2024ರಂದು ಪ್ರಕರಣದ ವಿಚಾರಣೆ ನಡೆಸಿತ್ತು.
"ಶುಕ್ರವಾರದವರೆಗೂ ಈ ಮೇಲಿನ ನಿರ್ದೇಶನಗಳ ಜಾರಿಯನ್ನು ನಿರ್ಬಂಧಿಸಿ ಮಧ್ಯಂತರ ಆದೇಶ ಹೊರಡಿಸುವುದು ಸೂಕ್ತ ಎಂದು ನಾವು ಪರಿಗಣಿಸಿದ್ದೇವೆ. ಇನ್ನೊಂದು ಅರ್ಥದಲ್ಲಿ, ಆಹಾರ ಮಾರಾಟಗಾರರನ್ನು ಮಾಲೀಕರು, ಸಿಬ್ಬಂದಿಯ ಹೆಸರು ಪ್ರಕಟಿಸುವಂತೆ ಒತ್ತಾಯಿಸಬಾರದು" ಎಂದು ನ್ಯಾಯಾಲಯ ಸೂಚನೆ ನೀಡಿದೆ. ಅಲ್ಲದೆ ಈ ಅರ್ಜಿಯ ಕುರಿತು ಉತ್ತರ ಪ್ರದೇಶ, ಉತ್ತರಾಖಂಡ ಹಾಗೂ ಮಧ್ಯಪ್ರದೇಶ ಸರ್ಕಾರಗಳಿಗೆ ನೋಟಿಸ್ ಜಾರಿ ಮಾಡಲಾಗುವುದು. ಇದಕ್ಕೆ ಶುಕ್ರವಾರ ಪ್ರತಿಕ್ರಿಯೆ ನೀಡಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ರೆಸ್ಟೋರೆಂಟ್‌ಗಳಲ್ಲಿನ ಆಹಾರ, ಅಡುಗೆ ಮಾಡುವವರು ಹಾಗೂ ಬಡಿಸುವವರ ಕುರಿತಾಗಿ ಸುಪ್ರೀಂ ಕೋರ್ಟ್‌ನಲ್ಲಿ ಸಾಕಷ್ಟು ಚರ್ಚೆ ನಡೆಯಿತು.
ಅರ್ಜಿದಾರರ ಪರ ಅಭಿಷೇಕ್ ಮನು ಸಿಂಘ್ವಿ ವಾದ
"ನೀವು ಮೆನು ಹೇಗಿರಬಹುದು ಎಂದುಕೊಂಡು ರೆಸ್ಟೋರೆಂಟ್‌ಗೆ ಹೋಗುತ್ತೀರೇ ವಿನಾ ಯಾರು ಬಡಿಸುತ್ತಾರೆ ಎಂಬುದನ್ನು ನೋಡಿಕೊಂಡು ಅಲ್ಲ. ಈ ಆದೇಶವು ಹೆಸರಿನ ಗುರುತಿನಿಂದ ಕೆಲವರನ್ನು ಹೊರಗಿಡುವ ಉದ್ದೇಶದ್ದಾಗಿದೆ. ಸಂವಿಧಾನದಲ್ಲಿ ನಾವು ಕಲ್ಪಿಸಿರುವ ಗಣರಾಜ್ಯ ಇದಲ್ಲ" ಎಂದು ಅರ್ಜಿದಾರರ ಪರ ಹಾಜರಾದ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ವಾದಿಸಿದರು.
ನಾಮಫಲಕ ಪ್ರದರ್ಶನ: ಮಾಲೀಕರ ಇಚ್ಛೆಗೆ ಬಿಟ್ಟ ಉತ್ತರ ಪ್ರದೇಶ ಸರ್ಕಾರ
ಇನ್ನು ಸಿಎಂ ಯೋಗಿ ಆದಿತ್ಯಾನಾಥ್ ಸರ್ಕಾರದ ನಾಮಫಲಕ ಪ್ರದರ್ಶನ ಕ್ರಮಕ್ಕೆ ವ್ಯಾಪಕ ವಿರೋಧ ವ್ಯಕ್ತವಾದ ಹಿನ್ನಲೆಯಲ್ಲಿ ಸರ್ಕಾರ ತನ್ನ ಆದೇಶ ಪುನರ್ ಪರಿಶೀಲಿಸಿದ್ದು, ಆದೇಶ ಪಾಲನೆಯನ್ನು ಅಂಗಡಿ ಮಾಲೀಕರ ಸ್ವಇಚ್ಛೆಗೆ ಬಿಡಲಾಗಿದೆ ಎಂದು ಮೂಲಗಳು ತಿಳಿಸಿವೆ. ಅಂಗಡಿ ಮಾಲೀಕರು ನಾಮಫಲಕ ಪ್ರದರ್ಶನ ಮಾಡುವುದು ಅಥವಾ ಬಿಡುವುದು ಅವರ ವಿವೇಚನಗೆ ಬಿಟ್ಟಿದ್ದು ಎಂದು ಅಧಿಕಾರಿಗಳು ಸೋಮವಾರ ಮಾಹಿತಿ ನೀಡಿದ್ದಾರೆ.
ಕನ್ವಾರ್ ಮಾರ್ಗದ ಉದ್ದಕ್ಕೂ ಇರುವ ಹೊಟೆಲ್ ಗಳಲ್ಲಿ ನಾಮಫಲಕಗಳನ್ನು ಪ್ರದರ್ಶಿಸುವ ಮಾರ್ಗಸೂಚಿಗಳು ಯಾತ್ರೆಯನ್ನು ಸುಗಮವಾಗಿ ನಡೆಸಲು ಮತ್ತು ಯಾತ್ರಿಕರ ನಂಬಿಕೆಯ ಪಾವಿತ್ರ್ಯತೆಯನ್ನು ಕಾಪಾಡಿಕೊಳ್ಳುವುದಾಗಿದೆ ಎಂದು ಯುಪಿ ಸರ್ಕಾರ ಶುಕ್ರವಾರ ಸ್ಪಷ್ಟಪಡಿಸಿದೆ. ಅಂತೆಯೇ ಹಲಾಲ್ ಪ್ರಮಾಣೀಕೃತ ಉತ್ಪನ್ನಗಳನ್ನು ಮಾರಾಟ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದೂ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಪವಿತ್ರ ಕನ್ವರ್ ಯಾತ್ರೆಯು ಜುಲೈ 22 ರಂದು ಹಿಂದೂ ತಿಂಗಳ ಶ್ರಾವಣದ ಪ್ರಾರಂಭದೊಂದಿಗೆ ಪ್ರಾರಂಭವಾಗುತ್ತದೆ ಮತ್ತು ಆಗಸ್ಟ್ 2 ರಂದು ಮುಕ್ತಾಯಗೊಳ್ಳುತ್ತದೆ.