ಸಿದ್ದರಾಮಯ್ಯರನ್ನು ಮಟ್ಟಹಾಕಲು ಡಝನ್ ಘಟ್ಟಲೇ ನಾಯಕರ ಒಳಸಂಚಿದೆ: ಕೆಪಿಸಿಸಿ ಸಂಯೋಜಕ ಅನ್ಸಾಫ್ ಆರೋಪ
ಮಂಗಳೂರು: ನಮ್ಮೆ ನೆಚ್ಚಿನ ನಾಯಕರೂ, ರಾಜ್ಯ ಕಂಡ ಶ್ರೇಷ್ಠ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಮಟ್ಟ ಹಾಕಲು ಡಝನ್ ಘಟ್ಟಲೇ ನಾಯಕರುಗಳ ಒಳಸಂಚಿದೆ, ಇದು ನಗ್ನ ಸತ್ಯವೂ ಹೌದು ಎಂದು ಕೆಪಿಸಿಸಿಯ ಯುವ ಮುಂದಾಳು ಅನ್ಸಾಫ್ ಆರೋಪಿಸಿದ್ದಾರೆ.
ಕೋವಿಡ್, ಬಿಟ್ ಕಾಯಿನ್, 40%, ಪಿಎಸ್ ಐ ಇತ್ಯಾದಿ ಇತ್ಯಾದಿ ಹಗರಣಗಳಲ್ಲೆಲ್ಲಾ ಶಾಮಿಲಾಗಿರುವ ಭ್ರಷ್ಟರಿಗೆ ಸಿದ್ದು ನೇತೃತ್ವದ ಸರಕಾರ ಕಬ್ಬಿಣದ ಕಡೆಲೆಯಾಗಿ ಪರಿಣಮಿಸಿದ್ದು ಕೇಂದ್ರ ಮುಖಂಡರ ಸಹಕಾರ ಪಡೆದು ಆ ಮೂಲಕ ರಾಜ್ಯಪಾಲರನ್ನು ಮುಂದಕ್ಕಿಟ್ಟುಕೊಂಡು ಸಿದ್ದರಾಮಯ್ಯ ಅವರನ್ನು ಮಟ್ಟಹಾಕಿ ಅತ್ಯಂತ ಜನಪ್ರಿಯ ಹಾಗೂ ಜನಪರ ಸರಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನ ನಡೆಸಲಾಗುತ್ತಿದೆ ಎಂದು ಆರೋಪಿಸಿದರು.
ನಮಗೆ ನ್ಯಾಯದ ಮೇಲೆ ಭರವಸೆ ಇದ್ದು ಸಿದ್ದರಾಮಯ್ಯರವರು ಈ ಎಲ್ಲಾ ಆರೋಪಗಳಿಂದ ಹೊರಬರುತ್ತಾರೆ ಎಂಬ ಆಶಾಭಾವನೆಯನ್ನು ಯುವ ಸಂಘಟಕ ಅನ್ಸಾಫ್ ರವರು ವ್ಯಕ್ತಪಡಿಸಿದ್ದಾರೆ.
ಸಿದ್ದರಾಮಯ್ಯ ಪ್ರಾಸಿಕ್ಯೂಷನ್ ವಿಚಾರದಲ್ಲಿ ಡಿಕೆ ಶಿವಕುಮಾರ್ ಪಾತ್ರ ಇದೆ ಎಂಬ ಆರೋಪವನ್ನು ಅಲ್ಲಗಳೆದಿರುವ ಅನ್ಸಾಫ್, ಡಿಕೆ ಶಿವಕುಮಾರ್ ರಾಜ್ಯದ ಉಪ ಮುಖ್ಯಮಂತ್ರಿಗಳಾಗಿದ್ದು, ನಮ್ಮ ಕರ್ನಾಟಕ ರಾಜ್ಯ ಮಾತ್ರವಲ್ಲದೇ ರಾಷ್ಟ್ರೀಯ ಕಾಂಗ್ರೆಸಿನ ಒರ್ವ ಬಲಿಷ್ಠ ನಾಯಕರೂ ಆಗಿದ್ದಾರೆ. ದೇಶದ ಯಾವುದೇ ರಾಜ್ಯದಲ್ಲೂ ಕಾಂಗ್ರೆಸ್ ಪಕ್ಷಕ್ಕೆ ಹಾಗೂ ಸರಕಾರಕ್ಕೆ ಸಮಸ್ಯೆ ಆದಾಗ ಮುಂದೆ ನಿಂತು ಪಕ್ಷವನ್ನು , ಸರಕಾರವನ್ನು ರಕ್ಷಿಸಿದ ಒರ್ವ ಆಪತ್ಬಾಂಧವ ನಾಯಕರಾಗಿದ್ದಾರೆ. ಅವರ ಪಕ್ಷ ನಿಷ್ಠೆ ನಮ್ಮಂತಹ ಕೊಟ್ಯಾಂತರ ಯುವಕರಿಗೆ ಅನುಕರಣ ಯೋಗ್ಯವಾಗಿದೆ.
ಕಾಮಾಲೆ ಕಣ್ಣಿಗೆ ಕಾಣೋದೆಲ್ಲಾ ಹಳದಿ ಎಂಬಂತೆ ಬಿಜೆಪಿಗರಿಗೆ ತಮ್ಮ ತಮ್ಮೊಳಗೆ ಕಾಲು ಎಳೆಯುವ ರಾಜಕಾರಣ ಮಾಡಿ ಅಭ್ಯಾಸ ಇದೆ, ಇಷ್ಟೆಲ್ಲಾ ಮಾತಾಡುವ ಬಿಜೆಪಿಗರು ಯಡಿಯೂರಪ್ಪ ಮುಖ್ಯಮಂತ್ರಿ ಇದ್ದಾಗಲೇ ವಯಸ್ಸಾಯಿತು ಎಂದು ಕುಂಟು ನೆಪ ಹೇಳಿ ಅವರನ್ನು ಪದವಿಯಿಂದ ಕಿತ್ತು ಎಸೆಯಲಿಲ್ಲವೇ ? ಯಡಿಯೂರಪ್ಪರು ಕಣ್ಣಿರು ಹಾಕವಂತೆ ಮಾಡಲಿಲ್ಲವೆ ?
ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಮಧ್ಯೆ ಒಡಕು ತರಲು ಬಿಜೆಪಿ ಹಾಗೂ ಜೆಡಿಎಸ್ ಮುಖಂಡರು ಸಾಕಷ್ಟು ಕಸರತ್ತುಗಳನ್ನು ನಡೆಸುತ್ತಿದ್ದಾರೆ. ಅಂತಹ ಯಾವುದೇ ಗೊಂದಲದ ವಿಚಾರ ನಮ್ಮ ಪಕ್ಷದೊಳಗಡೆ ಇಲ್ಲಾ. ಇದೆಲ್ಲವೂ ಸತ್ಯಕ್ಕೆ ದೂರವಾದ ಸುದ್ದಿಗಳಾಗಿದ್ದು ಬಿಜೆಪಿಗರ ಒಡೆದು ಆಳುವ ನೀತಿ ಜನತೆಗೆ ಈಗಾಗಲೇ ಅರ್ಥವಾಗಿದ್ದು ಅದಕ್ಕಾಗಿಯೇ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪಕ್ಷ ಹೀನಾಯ ಸೋಲು ಅನುಭವಿಸಬೇಕಾಯಿತು ಎಂದು ಹೇಳಿದ್ದಾರೆ.
ನಮ್ಮದು ಶಿಸ್ತಿನ ಪಕ್ಷ ಎಲ್ಲೆಂದರಲ್ಲಿ ನಿಂತು ಮಾಧ್ಯಮಗಳಿಗೆ ಹೇಳಿಕೆ ಕೊಟ್ಟು ಗೊಂದಲ ಉಂಟು ಮಾಡಲು ತಾನು ತಯಾರಿಲ್ಲಾ, ಭಾಗ್ಯಗಳ ಮುಂದುವರಿಕೆ ವಿಚಾರದಲ್ಲಿ ಪ್ರಶ್ನಿಸಿದಾಗ ಈ ಬಗ್ಗೆ ಮಾತಾಡಲು ನಾನು ಸೂಕ್ತನಲ್ಲಾ ಎಂದ ಅನ್ಸಾಫ್ ರವರು ಭಾಗ್ಯಗಳ ಅನುಷ್ಠಾನ ಸಮಿತಿಯನ್ನು ನಮ್ಮ ಸರಕಾರ ಆಯಾ ಜಿಲ್ಲಾ ಮಟ್ಟಗಳಲ್ಲಿ ರಚನೆ ಮಾಡಿದೆ ಎಂದರು.
ಸಿಎಮ್ ಇಬ್ರಾಹಿಮ್ ಕಾಂಗ್ರೆಸ್ ಸೇರುವ ಬಗೆ ಮಾಹಿತಿ ಇದೆಯಾ ಎಂದು ಪ್ರಶ್ನಿಸಿದಾಗ ಕೆಪಿಸಿಸಿ ಸಂಘಟಕರೂ, ಅರಣ್ಯ ಪರಿಸರ ಖಾತೆಯ ಸಚಿವ ಈಶ್ವರ್ ಖಂಡ್ರೆ ಆಪ್ತವಲಯದಲ್ಲಿ ಕಾಣಿಸಿಕೊಳ್ಳುವ ಅನ್ಸಾಫ್ ರವರು ಇದೆಲ್ಲವೂ ಹಿರಿಯ ನಾಯಕರೂ ಹಾಗೂ ಹೈಕಮಾಂಡಿಗೆ ಬಿಟ್ಟ ವಿಚಾರ ಎನ್ನುತ್ತಾ ಸೋಮವಾರದ ಪ್ರತಿಭಟನೆಯಲ್ಲಿ ಹೆಚ್ಚಿನ ಜನ ಸೇರಿ ವಿರೋಧ ಪಕ್ಷದವರ ಷಡ್ಯಂತರಕ್ಕೆ ಸೆಡ್ಡು ಹೊಡೆಯಲು ಕರೆ ನೀಡಿದರು.