'ಗೃಹಲಕ್ಷ್ಮಿ' ಹಣ ಇನ್ನೂ ಬಾರದಿರುವುದಕ್ಕೆ ಕಾರಣ ನೀಡಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್!
ಬೆಂಗಳೂರು: ಗೃಹಲಕ್ಷ್ಮಿ ಯೋಜನೆಯ ಹಣ ಮಹಿಳೆಯರ ಖಾತೆಗಳಿಗೆ ವರ್ಗಾವಣೆಯಾಗದೇ ಇರುವುದು, ಎರಡ್ಮೂರು ತಿಂಗಳುಗಳಿಂದ ಬಾಕಿ ಇರುವ ಬಗ್ಗೆ ವ್ಯಾಪಕ ಆಕ್ಷೇಪ ವ್ಯಕ್ತವಾಗುತ್ತಿದೆ. ಈ ಸಂದರ್ಭದಲ್ಲಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸ್ಪಷ್ಟನೆ ನೀಡಿದ್ದಾರೆ. ಹಣ ವರ್ಗಾವಣೆ ಯಾಕೆ ವಿಳಂಬವಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.
ಈ ಬಗ್ಗೆ ಮಾತನಾಡಿರುವ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಗೃಹಲಕ್ಷ್ಮಿ ಯೋಜನೆಗೆ ಪ್ರತಿ ತಿಂಗಳಿಗೆ 2,400 ಕೋಟಿ ರೂ. ಖರ್ಚಾಗುತ್ತಿದೆ. ಮಂಡ್ಯದಲ್ಲಿ ಡಿಪಿಟಿಗೆ ಪುಷ್ ಮಾಡಿ ಮೂರು ದಿನಗಳಾದವು. ಇನ್ನೂ ನಾಲ್ಕೈದು ಜಿಲ್ಲೆಗಳಿಗೆ ಯೋಜನೆಯ ಹಣ ದೊರೆಯಬೇಕಿದೆ. ಬ್ಯಾಂಕ್ಗಳಿಗೆ ಹಣ ಕಳುಹಿಸಿರುತ್ತೇವೆ. ಸ್ಥಳೀಯ ಮಟ್ಟವಾಗಿ ಯಜಮಾನಿಯರ ಖಾತೆಗೆ ವರ್ಗಾವಣೆಯಾಗಬೇಕು. ದೊಡ್ಡ ಮೊತ್ತದ ಹಣ ಆಗಿರುವ ಕಾರಣ ವಿಳಂಬ ಆಗುತ್ತಿರುತ್ತದೆ ಎಂದರು.
ಜೂನ್ ತಿಂಗಳ ಹಣ ವರ್ಗಾವಣೆಯಾಗಿದೆ. ಜುಲೈ ತಿಂಗಳ ಹಣ ಇನ್ನೆರಡು ದಿನಗಳಲ್ಲಿ ಖಾತೆಗಳಿಗೆ ವರ್ಗಾವಣೆಯಾಗಲಿದೆ. ಆಗಸ್ಟ್ ತಿಂಗಳ ಹಣ ಕೂಡ ಯಜಮಾನಿಯರ ಖಾತೆಗೆ ವರ್ಗಾವಣೆ ಮಾಡುತ್ತೇವೆ. ವಿಳಂಬ ಆಗಬಾರದು ಎಂಬುದು ನಮ್ಮ ಚಿಂತನೆ. ಒಂದು ದಿನಕ್ಕೆ ನನಗೆ 500 ಕರೆಗಳು ಬರುತ್ತವೆ. ಮಂತ್ರಿಯಾಗಿ ಎಲ್ಲ ಕರೆಗಳಿಗೂ ನಾನು ಉತ್ತರ ನೀಡುತ್ತಿದ್ದೇನೆ. ಹಣ ವರ್ಗಾವಣೆಯಾಗುತ್ತದೆ ಎಂದು ಸಮಾಧಾನ ಮಾಡುತ್ತಾ ಇರುತ್ತೇನೆ ಎಂದು ಅವರು ತಿಳಿಸಿದರು.
ವಿಳಂಬ ಆಗದೇ ಇರುವಂತೆ ನೋಡಿಕೊಳ್ಳಲು ನಮ್ಮ ತಂಡ ಹಗಲು ರಾತ್ರಿ ಕೆಲಸ ಮಾಡುತ್ತಿದೆ. ಈಗ ಹಣ ವರ್ಗಾವಣೆ ಪ್ರಕ್ರಿಯೆ ಶುರು ಮಾಡಿದರೂ 10 ರಿಂದ 12 ದಿನ ಬೇಕಾಗುತ್ತದೆ. ಯಜಮಾನಿಯರ ಹಣ ಎಲ್ಲಾ ಜಿಲ್ಲೆಗಳಿಗೂ ತಲುಪಬೇಕು ಎಂದು ಶ್ರಮಿಸುತ್ತಿದ್ದೇವೆ ಎಂದು ಲಕ್ಷ್ಮೀ ಹೆಬ್ಬಾಳ್ಕರ್ ತಿಳಿಸಿದರು.
ಕೆಲವು ದಿನಗಳ ಹಿಂದೆ ಮಂಡ್ಯದಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಭಾಷಣ ಮಾಡುತ್ತಿದ್ದ ವೇಳೆ ಗೃಹಲಕ್ಷ್ಮಿ ಯೋಜನೆಯ ಹಣ ವರ್ಗಾವಣೆಯಾಗಿಲ್ಲ ಎಂದು ಮಹಿಳೆಯರು ಕೂಗಾಡಿದ್ದರು. ಇದೆ ವೇಳೆ, ಕೆಲವೇ ದಿನಗಳಲ್ಲಿ ನಿಮ್ಮ ಖಾತೆಗಳಿಗೆ ಹಣ ವರ್ಗಾವಣೆ ಆಗಲಿದೆ ಎಂದು ಉಪಮುಖ್ಯಮಂತ್ರಿ ಭರವಸೆ ನೀಡಿದ್ದರು.