ಶೀಘ್ರವೇ ಭಾರತ ಬಗ್ಗೆ ದೊಡ್ಡ ಸುದ್ದಿ ಪ್ರಕಟಿಸುವುದಾಗಿ ಘೋಷಿಸಿದ ಹಿಂಡನ್‌ಬರ್ಗ್!
ನವದೆಹಲಿ: ಅದಾನಿ ಸಮೂಹ ಕಂಪನಿಗಳ ವಿರುದ್ಧ ವರದಿ ಪ್ರಕಟಿಸಿ ಷೇರು ಮೌಲ್ಯ ಕುಸಿತ ಮಾಡಿದ್ದ ಹಿಂಡನ್‌ಬರ್ಗ್ ಶೀಘ್ರವೇ ಭಾರತ ಬಗ್ಗೆ ದೊಡ್ಡ ಸುದ್ದಿ ಪ್ರಕಟಿಸುವುದಾಗಿ ತಿಳಿಸಿದೆ.
ಅದಾನಿ ಕಂಪನಿಯ ಬಗ್ಗೆಯೋ ಅಥವಾ ಬೇರೆ ಯಾವುದೋ ಕಂಪನಿಯೋ ಅಥವಾ ಯಾವುದೋ ಕ್ಷೇತ್ರಗಳ ಕಂಪನಿಗಳ ಬಗ್ಗೆ ವರದಿ ಬಿಡುಗಡೆ ಮಾಡುತ್ತದೋ ಎನ್ನುವುದರ ಬಗ್ಗೆ ಯಾವುದೇ ವಿವರವನ್ನು ಹಿಂಡನ್‌ಬರ್ಗ್ ನೀಡಿಲ್ಲ.
2023ರ ಜನವರಿಯಲ್ಲಿ ಅಮೆರಿಕದ ಶಾರ್ಟ್ ಸೆಲ್ಲಿಂಗ್ (Short Selling) ಕಂಪನಿ ಹಿಂಡನ್‌ಬರ್ಗ್ ಅದಾನಿ ಕಂಪನಿ ವಿರುದ್ಧ ಸಂಶೋಧನಾ ವರದಿ ಪ್ರಕಟಿಸಿತ್ತು. ಈ ವರದಿ ಪ್ರಕಟವಾದ ಬಳಿಕ ಅದಾನಿ ಕಂಪನಿಯ ಷೇರುಗಳ ಮೌಲ್ಯ ಭಾರೀ ಇಳಿಕೆಯಾಗಿತ್ತು. ನಂತರ ಪ್ರಕರಣ ಸುಪ್ರೀಂ ಕೋರ್ಟ್ (Supreme Court) ಮೆಟ್ಟಿಲೇರಿತ್ತು. ಜಾರಿ ನಿರ್ದೇಶನಾಲಯ (ED) ಇಡಿ ನಡೆಸಿದ ತನಿಖೆಯಲ್ಲಿ 16 ಕಂಪನಿಗಳು ಭಾರೀ ಲಾಭ ಮಾಡಿಕೊಂಡ ವಿಚಾರ ದೃಢಪಟ್ಟಿತ್ತು.
ಸುಪ್ರೀಂ ಕೋರ್ಟ್ ನೇಮಿಸಿದ್ದ ಸಮಿತಿಯೂ ಅದಾನಿ ಕಂಪನಿಗೆ ಕ್ಲೀನ್ ಚಿಟ್ ನೀಡಿತ್ತು. ತನಿಖಾ ವರದಿಗಳು ಪ್ರಕಟವಾಗುತ್ತಿದ್ದಂತೆ ನಿಧಾನವಾಗಿ ಅದಾನಿ ಕಂಪನಿಗಳ ಷೇರುಗಳ ಮೌಲ್ಯ ಏರಿಕೆಯಾಗಿತ್ತು. ಹಿಂಡನ್‌ಬರ್ಗ್ ವರದಿಯಿಂದ ವಿಶ್ವದ ಮೂರನೇ ಶ್ರೀಮಂತರ ವ್ಯಕ್ತಿಯಾಗಿದ್ದ ಗೌತಮ್ ಅದಾನಿ ಸಂಪತ್ತು ಕರಗಿ 30ನೇ ಸ್ಥಾನಕ್ಕೆ ಕುಸಿದಿದ್ದರು. ನಂತರ ಚೇತರಿಕೆ ಕಂಡು 12ನೇ ಸ್ಥಾನಕ್ಕೆ ಏರಿದ್ದಾರೆ.
ಏನಿದು ಶಾರ್ಟ್ ಸೆಲ್ಲಿಂಗ್?
ಶಾರ್ಟ್ ಸೆಲ್ಲಿಂಗ್ ಎನ್ನುವುದು ಹೂಡಿಕೆಯ ತಂತ್ರವಾಗಿದ್ದು, ಮುಂದಿನ ದಿನಗಳಲ್ಲಿ ಕಂಪನಿಯ ಷೇರು ಮೌಲ್ಯ ಕುಸಿಯಬಹುದು ಎಂಬುದನ್ನು ಮೊದಲೇ ಊಹಿಸಿ ನಿಗದಿತ ಬೆಲೆಗಿಂತ ಕಡಿಮೆ ಬೆಲೆಗೆ ಮಾರಾಟ ಮಾಡಿ ನಂತರ ಆ ಕಂಪನಿಯ ಷೇರು ಮೌಲ್ಯ ಕುಸಿತಗೊಂಡಾಗ ಅವುಗಳನ್ನು ಕಡಿಮೆ ಬೆಲೆಗೆ ಮರು ಖರೀದಿಸಿ ಲಾಭ ಮಾಡುವುದಕ್ಕೆ ಶಾರ್ಟ್ ಸೆಲ್ಲಿಂಗ್ ಎಂದು ಕರೆಯಲಾಗುತ್ತದೆ.