ನಟ ದರ್ಶನ್'ಗೆ ಜೈಲಿನಲ್ಲಿ ರಾಜಾತಿಥ್ಯ ನೀಡಿದ ಫೋಟೋ ವೈರಲ್; ಪರಪ್ಪನ ಅಗ್ರಹಾರದ 7 ಅಧಿಕಾರಿಗಳು ಅಮಾನತು

ನಟ ದರ್ಶನ್'ಗೆ ಜೈಲಿನಲ್ಲಿ ರಾಜಾತಿಥ್ಯ ನೀಡಿದ ಫೋಟೋ ವೈರಲ್; ಪರಪ್ಪನ ಅಗ್ರಹಾರದ 7 ಅಧಿಕಾರಿಗಳು ಅಮಾನತು

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್ ಅವರಿಗೆ ರಾಜಾತಿಥ್ಯ ನೀಡಲಾಗುತ್ತಿದ್ದು, ಈ ಕುರಿತ ಫೋಟೋಗಳು ವೈರಲ್ ಆದ ಬೆನ್ನಲ್ಲೇ ಪರಪ್ಪನ ಅಗ್ರಹಾರದ 7 ಅಧಿಕಾರಿಗಳನ್ನು ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ.

ಸುದ್ದಿಗಾರರೊಂದಿಗೆ ಮಾತನಾಡಿದ ಗೃಹ ಸಚಿವ ಪರಮೇಶ್ವರ್‌ ಅವರು, ರಾಜ್ಯದ ಎಲ್ಲಾ ಜೈಲುಗಳಲ್ಲಿ ಸಿಸಿಟಿವಿ, ಜಾಮರ್ ಅಳವಡಿಸಲಾಗಿದೆ. ಹೀಗಿದ್ದರೂ ಇಂತಹ ಘಟನೆಗಳು ನಡೆಯುತ್ತವೆ ಎಂದಾದರೆ ಅಧಿಕಾರಿಗಳು ಕಟ್ಟುನಿಟ್ಟಾಗಿ ಕೆಲಸ ಮಾಡಬೇಕಾಗಿದೆ. ಇಂತಹ ಘಟನೆಗಳಿಗೆ ಕಾರಣರಾದವರ ವಿರುದ್ಧ ಕ್ರಮ ಕೈಗೊಂಡು, ಇಂತಹ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ವಹಿಸಲಾಗುವುದು ಎಂದು ಹೇಳಿದರು.

ಪ್ರಸ್ತುತದ ಬೆಳವಣಿಗೆ ಸಂಬಂಧ 7 ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ. ಜೈಲರ್ ಶರಣಬಸವ ಅಮೀನಗಡ, ಪ್ರಭು ಎಸ್ ಕಂದೇವಾಲ್, ತಿಪ್ಪೇಸ್ವಾಮಿ, ಶ್ರೀಕಾಂತ್, ವೆಂಕಪ್ಪ ಕೊರ್ತಿ, ಸಂಪತ್ ಕುಮಾರ್ ಕಡಪಟ್ಟಿ, ಬಸಪ್ಪ ತೇಲಿ ಅವರನ್ನು ಅಮಾನತು ಮಾಡಿದ್ದೇವೆ.

ಘಟನೆ ಸಂಬಂಧ ವರದಿಯನ್ನು ಕೇಳಲಾಗಿದೆ. ಮೇಲಧಿಕಾರಿಗಳು ಈ ಪ್ರಕರಣದಲ್ಲಿ ನೇರವಾಗಿ ಭಾಗಿ ಆಗಿದ್ದರೆ ಅವರನ್ನೂ ಅಮಾನತು ಮಾಡಲಾಗುವುದು. ವರದಿ ಬಂದ ನಂತರ ಈ ಬಗ್ಗೆ ಕ್ರಮ ಕೈಗೊಳ್ಳುತ್ತೇವೆಂದು. ಇದರಲ್ಲಿ ಯಾವುದೇ ಮುಲಾಜು ಇಲ್ಲ. ಇದರಲ್ಲಿ ಸಿಬ್ಬಂದಿ ಹಾಗೂ ಅಧಿಕಾರಿ ಎಂದು ತಾರತಮ್ಯ ಮಾಡಲ್ಲ ಎಂದು ತಿಳಿಸಿದರು.

ಈ ಹಿಂದೆ ದರ್ಶನ್‌ಗೆ ಜೈಲಿನಲ್ಲಿ ಚಿಕನ್ ಬಿರಿಯಾನಿ ಕೊಡಲಾಗಿದೆ ಎಂಬ ಸುದ್ದಿ ಹರಡಿತ್ತು. ಆದರೆ, ಅದನ್ನು ಕೊಟ್ಟಿರಲ್ಲ, ಅಂತಹ ಘಟನೆ ನಡೆಯಲ್ಲ ಎಂದು ಹೇಳಿದ್ದೆ. ಆದರೆ ಇದೀಗ ರಾಜ್ಯಾತಿಥ್ಯ ನೀಡಿದ ಘಟನೆ ನಡೆದಿದೆ. ಇದನ್ನು ನಾನು ಸಮರ್ಥನೆ ಮಾಡಲ್ಲ. ಇಂತಹ ಘಟನೆ ಆಗಬಾರದು ಎಂದು ಹೇಳಿದರು.

ಜೈಲಿನಲ್ಲಿ ಈಗಾಗಲೇ ಜಾಮರ್ ಅಳವಡಿಸಲಾಗಿದೆ. ಆದರೆ, ಇದರ ಪ್ರೀಕ್ವೆನ್ಸಿ ಜಾಸ್ತಿ ಇದ್ದರೆ ಅಕ್ಕಪಕ್ಕದವರಿಗೆ ತೊಂದರೆ ಆಗುತ್ತದೆ. ಅದಕ್ಕೆ ಪ್ರೀಕ್ವೆನ್ಸಿ ಕಡಿಮೆ ಮಾಡಿದ್ದೇವೆ. ಇವಾಗ ದರ್ಶನ್‌ ಟೀ ಕುಡಿಯುವ ಹಾಗೂ ಸಿಗರೇಟು ಸೇದುವ ಫೋಟೋ ಯಾರು ತೆಗೆದರು? ಮೊಬೈಲ್ ಜೈಲಿನ ಒಳಗಡೆ ಹೇಗೆ ಹೋಯಿತು? ಯಾವ ಮೊಬೈಲ್‌ನಲ್ಲಿ ಫೋಟೋ ತೆಗೆದಿದ್ದಾರೆ ಎಂಬ ಬಗ್ಗೆ ತನಿಖೆ ನಡೆಸುತ್ತೇವೆ ಎಂದು ತಿಳಿಸಿದರು.

ದರ್ಶನ್‌ ನೋಡಲು ಜೈಲಿಗೆ ಎಲ್ಲರಿಗೂ ಒಳಗಡೆ ಹೋಗಲು ಅವಕಾಶ ಇಲ್ಲ. ಜೈಲಾಧಿಕಾರಿ ಅವಕಾಶ ಕೊಟ್ಟರೆ ಮಾತ್ರ ಅನುಮತಿ ನೀಡಲಾಗುತ್ತಿದೆ. ತನಿಖೆಯಲ್ಲಿ ಎಲ್ಲವೂ ಹೊರ ಬರಲಿದೆ. ಫೋನ್ ಬಳಸಲು ಹೇಗೆ ಅವಕಾಶ ಕೊಟ್ಟವರು ಯಾರು? ಸಿಗರೇಟು ಹೇಗೆ ಸಿಕ್ಕಿತು? ಇದೆಲ್ಲದರ ಬಗ್ಗೆ ತನಿಖೆ ನಡೆಸಲಾಗುತ್ತದೆ ಎಂದರು.

ಕಾರಾಗೃಹದಲ್ಲಿ 24/7 ಸಿಟಿ ಟಿವಿ ಇರುತ್ತದೆ. ಯಾವ ಯಾವ ಬ್ಯಾರಕ್‌ನಲ್ಲಿ ಏನು ನಡೆಯುತ್ತದೆ ಎಂಬುವುದು ಸಿಸಿಟಿವಿಯಲ್ಲಿ ಕಾಣುತ್ತದೆ. ಹೀಗಿದ್ದರೂ ಕ್ರಮ ಕೈಗೊಳ್ಳದೆ ಇದ್ದರೆ ಅಂತವರ ವಿರುದ್ಧ ಕಾನೂನು ಕ್ರಮವನ್ನು ಕೈಗೊಳ್ಳುತ್ತೇವೆ ಎಂದು ತಿಳಿಸಿದರು.

ಯಾರ ಒತ್ತಡನೂ ನನ್ನ ಮೇಲಿಲ್ಲ. ನನ್ನ ಲೆವೆಲ್'ವರೆಗೆ ಯಾರು ಮುಟ್ಟಲು ಆಗಲ್ಲ. ದರ್ಶನ್ ಹಾಗೂ ಗ್ಯಾಂಗ್ ಸದಸ್ಯರನ್ನು ಬೇರೆ ಜೈಲಿಗೆ ವರ್ಗಾವಣೆ ಮಾಡುವ ನಿಟ್ಟಿನಲ್ಲಿ ಚಿಂತನೆ ನಡೆಯುತ್ತಿದೆ ಎಂದೂ ಇದೇ ಸಂದರ್ಭದಲ್ಲಿ ತಿಳಿಸಿದರು.

Ads on article

Advertise in articles 1

advertising articles 2

Advertise under the article