ಇನ್ನು ಆರು ತಿಂಗಳಲ್ಲಿ ಬಿಜೆಪಿಯ ಅರ್ಧದಷ್ಟು ನಾಯಕರು ಜೈಲಿನಲ್ಲಿರುತ್ತಾರೆ: ಪ್ರಿಯಾಂಕ್ ಖರ್ಗೆ
ಬೆಂಗಳೂರು: ಇನ್ನು ಆರು ತಿಂಗಳಲ್ಲಿ ಬಿಜೆಪಿಯ ಅರ್ಧದಷ್ಟು ನಾಯಕರು ಜೈಲಿನಲ್ಲಿರುತ್ತಾರೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್ ಗೆ ರಾಜ್ಯಪಾಲರು ಅನುಮತಿ ನೀಡಿರುವ ಕುರಿತು ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ ಸರ್ಕಾರ ಹಿಂದಿನ ಬಿಜೆಪಿ ಸರ್ಕಾರದ ಭ್ರಷ್ಟಾಚಾರ ಕುರಿತು ತನಿಖೆ ನಡೆಸಲಿದ್ದು, ಮುಂದಿನ ಆರು ತಿಂಗಳಲ್ಲಿ ರಾಜ್ಯದ ಅರ್ಧದಷ್ಟು ಬಿಜೆಪಿ ನಾಯಕರು ಜೈಲಿನಲ್ಲಿರುತ್ತಾರೆ ಅಥವಾ ಜಾಮೀನಿಗಾಗಿ ಓಡುತ್ತಾರೆ ಎಂದರು.
ಬಿಜೆಪಿ ನಾಯಕರ ಮೇಲೆ 35ಕ್ಕೂ ಹೆಚ್ಚು ಪ್ರಕರಣಗಳಿದ್ದು, ಮೂರ್ನಾಲ್ಕು ಪ್ರಕರಣಗಳಲ್ಲಿ ಮಧ್ಯಂತರ ವರದಿ ಸಲ್ಲಿಸಲಾಗಿದೆ. ರಾಜ್ಯ ಸರ್ಕಾರ ಅಪರಾಧ ತನಿಖಾ ಇಲಾಖೆಯ ವಿಶೇಷ ತನಿಖಾ ತಂಡವನ್ನು ರಚಿಸಿದೆ. ಈ ಪ್ರಕರಣಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ. ಆ ಪ್ರಕರಣಗಳ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಇದಕ್ಕೆ ಸ್ವಲ್ಪ ಸಮಯ ಬೇಕಾಗುತ್ತದೆ. ಹಿಂದಿನ ಸರ್ಕಾರದಲ್ಲಿ ತೀವ್ರ ಭ್ರಷ್ಟಾಚಾರ ಇತ್ತು. ಅದರ ಮೇಲೆ ಕೆಲಸ ಮಾಡುತ್ತಿದ್ದು, ಮುಂದಿನ ಆರು ತಿಂಗಳಲ್ಲಿ ಅರ್ಧದಷ್ಟು ಬಿಜೆಪಿ ನಾಯಕರು ಜಾಮೀನಿಗಾಗಿ ಓಡುತ್ತಾರೆ ಅಥವಾ ಜೈಲಿನಲ್ಲಿರುತ್ತಾರೆ ಎಂದು ಅವರು ಹೇಳಿದರು.
ರಾಜ್ಯಪಾಲರ ಪಾತ್ರದ ಕುರಿತು ಚರ್ಚೆಯಾಗಿರುವ ಹತ್ತಾರು ಪ್ರಕರಣಗಳಿದ್ದು, ಅವುಗಳನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಲಾಗುವುದು ಎಂದು ತಿಳಿಸಿದ ಸಚಿವರು, ಬಿಜೆಪಿ ನಾಯಕರ ಬಳಿ ಯಾವುದೇ ಸಾಕ್ಷ್ಯಾಧಾರಗಳಿಲ್ಲದ ಕಾರಣ ಸಿದ್ದರಾಮಯ್ಯ ವಿರುದ್ಧದ ಪ್ರಕರಣವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಲು ಸಾಧ್ಯವೇ ಇಲ್ಲ ಹೀಗಾಗಿ ಸಿಬಿಐ, ಐಟಿ, ಇಡಿ ಮತ್ತು ಸ್ವತಃ ರಾಜ್ಯಪಾಲರನ್ನು ಬಳಸಿಕೊಂಡು ಪ್ರಕರಣವನ್ನು ಜೀವಂತವಾಗಿಡುವ ಕೆಲಸ ಮಾಡುತ್ತಿದ್ದಾರೆ ಎಂದು ಟೀಕಿಸಿದರು.
ರಾಜ್ಯದಲ್ಲಿ ಉಂಟಾಗಿರುವ ರಾಜಕೀಯ ಅವ್ಯವಸ್ಥೆಗೆ ಗೆಹ್ಲೋಟ್ ಕಾರಣ ಎಂದು ಆರೋಪಿಸಿದ ಖರ್ಗೆ, ರಾಜ್ಯಪಾಲರು ಕೈಗೊಂಬೆಯೇ ಹೊರತು ಕರ್ನಾಟಕದ ಸಾಂವಿಧಾನಿಕ ಮುಖ್ಯಸ್ಥರಾಗಿಲ್ಲ. ದುರದೃಷ್ಟವಶಾತ್ (ರಾಜ್ಯಪಾಲರ) ಸ್ಥಾನಕ್ಕೆ ಧಕ್ಕೆ ಉಂಟಾಗಿದ್ದು, ಅವರು ಬಿಜೆಪಿ ಕಾರ್ಯಕರ್ತರಂತೆ ವರ್ತಿಸುತ್ತಿದ್ದಾರೆ ಎಂದು ಪ್ರಿಯಾಂಕ್ ಖರ್ಗೆ ಟೀಕಿಸಿದರು.