ದುಬೈಯಲ್ಲಿ ಶ್ರೀ ವರಮಹಾಲಕ್ಷ್ಮೀ ಪೂಜೆ; ಪುನೀತರಾದ ಭಕ್ತವೃಂದ
ಫೋಟೋ: Ashok Belman
ದುಬೈ: ಶ್ರೀ ವರಮಹಾಲಕ್ಷ್ಮೀ ಪೂಜಾ ಸಮಿತಿ ಯು.ಎ.ಇ. ಆಶ್ರಯದಲ್ಲಿ 17ನೇ ವರ್ಷದ ಶ್ರೀ ವರಮಹಾಲಕ್ಷ್ಮೀ ಪೂಜೆ ಶನಿವಾರ ದುಬಾಯಿಯ ಸ್ಪಿಂಗ್ ಡೆಲ್ ಸ್ಕೂಲ್ ನಲ್ಲಿ ಸಂಜೆ 4.30ರಿಂದ ರಾತ್ರಿ 9.00 ಗಂಟೆಯವರೆಗೆ ನಡೆಯಿತು.
ಶ್ರೀ ವರಮಹಾಲಕ್ಷ್ಮೀ ಪೂಜಾ ಸಮಿತಿಯ ಸದಸ್ಯರಾಗಿರುವ ಸುಮಂಗಲೆಯರು ದೀಪ ಪ್ರಜ್ವಲಿಸಿ ಪೂಜಾ ಕಾರ್ಯಕ್ಕೆ ಚಾಲನೆ ನೀಡಿದರು. ಶ್ರೀ ಲಲಿತಾ ಸಹಸ್ರನಾಮ ಮತ್ತು ಶ್ರೀ ರಾಜ ರಾಜೇಶ್ವರಿ ಭಜನಾ ತಂಡದ ಭಜನೆ ಶ್ರೀ ರಘಾ ಭಟ್ ರವರ ಪೌರೋಹಿತ್ಯದಲ್ಲಿ ಪೂಜಾ ಸಂಕಲ್ಪದೊಂದಿಗೆ ಗುರು ಗಣಪತಿ ಪೂಜೆ, ಕಲ್ಲೊಕ್ತ ಪೂಜೆ ಮತ್ತು ಸುಮಂಗಲೆಯರಿಂದ ಶ್ರೀ ಮಹಾಲಕ್ಷ್ಮೀ ಅಷ್ಟಕ, ಕುಂಕುಮಾರ್ಚನೆ ಸೇವೆ ನಡೆಯಿತು.
ಪೂಜೆಯಲ್ಲಿ ದಿನೇಶ್ ಕೊಟ್ಟಂಜ ಮತ್ತು ಆರತಿ ದಿನೇಶ್ ಶೆಟ್ಟಿ ಹಾಗೂ ಮಹೇಶ್ ಶೆಟ್ಟಿ ಮತ್ತು ಹೇಮಾ ಶೆಟ್ಟಿ ದಂಪತಿಗಳು ಸರ್ವ ಭಕ್ತಾಧಿಗಳ ಪರವಾಗಿ ಪೂಜೆಯಲ್ಲಿ ಕುಳಿತು ಪೂಜಾ ಕೈಂಕರ್ಯದಲ್ಲಿ ಭಾಗಿಗಳಾಗಿದ್ದರು.
ಮಕ್ಕಳು ಮತ್ತು ಸುಮಂಗಲೆಯರ ನೃತ್ಯ ಭಜನಾ ಸೇವೆ ನಂತರ ಮಂಗಳೂರಿನಿಂದ ಆಗಮಿಸಿದ ವಿಶೇಷ ಅತಿಥಿ ಅರುಣ್ ಉಳ್ಳಾಲ್ ರವರಿಂದ ಧಾರ್ಮಿಕ ಉಪನ್ಯಾಸ ನಡೆಯಿತು. ಅರುಣ್ ಉಳ್ಳಾಲ್ ದಂಪತಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.
ಮಹಾ ಮಂಗಳಾರತಿಯ ನಂತರ ಸುಮಂಗಲಿ ಆಸಾಧನೆ, ಕನ್ನಿಕ ಆರಾಧನೆ, ಬ್ರಾಹ್ಮಣ ಆರಾಧನೆ ನಡೆಯಿತು.
ಶ್ರೀ ವರಮಹಾ ಲಕ್ಷ್ಮೀ ಪೂಜೆಯ ಅಂಗವಾಗಿ ವಿವಿಧ ವಯೋಮಿತಿಯ ಮಕ್ಕಳಿಗಾಗಿ ಪುರಾಣ ಪ್ರಸಿದ್ದ ಪಾತ್ರಗಳ ಛದ್ಮವೇಶ ಸ್ಪರ್ಧೆ, ಭಕ್ತಿಗೀತೆ, ಭಜನಾ ಸ್ಪರ್ಧೆ, ಹನುಮಾನ್ ಚಾಲಿಸಾ ಪಠಣ, ಆಯೋಧ್ಯ ಶ್ರೀ ರಾಮ ಚಿತ್ರಕಲಾ ಸ್ಪರ್ಧೆ ಏರ್ಪಡಿಸಲಾಗಿದ್ದು ಬಹುಮಾನ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಎಲ್ಲಾ ವಿಭಾಗದ ತೀರ್ಪುಗಾರರಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಅತ್ಯಂತ ಆಕರ್ಷಕ ಪೂಜಾ ಮಂಟಪ ರಾಜೇಶ್ ಕುತ್ತಾರ್ ತಂಡದವರು ವಿನ್ಯಾಸ ಗೊಳಿಸಿದ್ದರು. ಸುವರ್ಣ ಸತೀಶ್ ಪೂಜಾರಿಯವರ ಸಾರಥ್ಯದಲ್ಲಿ ಸುಮಂಗಲೆಯರು ಶಿಸ್ತು ಬದ್ಧವಾಗಿ ಭಕ್ತಿಭಾವದಿಂದ ಆಚರಿಸಿದ್ದ ಪೂಜೆಯಲ್ಲಿ ಮಕ್ಕಳು ಸ್ವಯಂ ಸೇವಕರಾಗಿ ಪಾನಕ ಕುಡಿಯುವ ನೀರು ವಿತರಿಸಿ ಸರ್ವರ ಗಮನ ಸೆಳೆದರು. ಸಭಾಂಗಣದಲ್ಲಿ ಪೂರ್ತಿಯಾಗಿ ತುಂಬಿದ್ದ ಭಕ್ತಾಧಿಗಳು ತೀರ್ಥ ಪ್ರಸಾದ ಸ್ವೀಕರಿಸಿ ಕೊನೆಯಲ್ಲಿ ಮಹಾಪ್ರಸಾದ ಸ್ವೀಕರಿಸಿ ಕೃತರ್ಥಾರಾದರು.

















