ಉದ್ಯಮಿಯನ್ನು ಬೆದರಿಸಿ, ಹಣ ಸುಲಿಗೆ ಮಾಡಿದ್ದ ಆರೋಪ; ಇಬ್ಬರು ಚಿನ್ನದ ವ್ಯಾಪಾರಿಗಳ ಬಂಧನ
ಬೆಂಗಳೂರು: ಉದ್ಯಮಿ ಮತ್ತವರ ಕುಟುಂಬ ಸದಸ್ಯರನ್ನು ವಿಚಾರಣೆ ನೆಪದಲ್ಲಿ ಬೆದರಿಸಿ, ಹಣ ಸುಲಿಗೆ ಮಾಡಿದ್ದ ಆರೋಪದಡಿ ಕೇಂದ್ರೀಯ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಇಲಾಖೆಯ ನಾಲ್ವರು ಅಧಿಕಾರಿಗಳನ್ನು ಬಂಧಿಸಿದ್ದ ಸಿಸಿಬಿ ಪೊಲೀಸರು, ಪ್ರಕರಣದಲ್ಲಿ ಹವಾಲ ಹಣ ವರ್ಗಾವಣೆಯಾಗಿರುವುದನ್ನು ಪತ್ತೆ ಹಚ್ಚಿದ್ದಾರೆ. ಮುಂದುವರೆದ ತನಿಖೆಯಲ್ಲಿ, ಮುಕೇಶ್ ಜೈನ್ ಹಾಗೂ ಪ್ರಕಾಶ್ ಜೈನ್ ಎಂಬ ಇಬ್ಬರು ಚಿನ್ನದ ವ್ಯಾಪಾರಿಗಳನ್ನು ಬಂಧಿಸಲಾಗಿದೆ.
ಬಂಧಿತ ನಾಲ್ವರು ಅಧಿಕಾರಿಗಳು ಹಾಗೂ ಇಬ್ಬರು ಚಿನ್ನದ ವ್ಯಾಪಾರಿಗಳಿಂದ ನಗದು ಹಾಗೂ ಚಿನ್ನದ ಗಟ್ಟಿ ವಶಪಡಿಸಿಕೊಳ್ಳಲಾಗಿದೆ. ಕೇಶವ್ ತಕ್ ಅವರ ವಹಿವಾಟಿನ ಕುರಿತು ಅಧಿಕಾರಿಗಳಿಗೆ ಮಾಹಿತಿ ನೀಡಿ, ಸುಲಿಗೆ ಸಂಚಿನಲ್ಲಿ ಭಾಗಿಯಾಗಿ, ಹಣದಲ್ಲಿ ಪಾಲು ಪಡೆದಿದ್ದ ಆರೋಪದಡಿ ಮುಕೇಶ್ ಜೈನ್ ಹಾಗೂ ಪ್ರಕಾಶ್ ಜೈನ್ ಎಂಬ ಚಿನ್ನದ ವ್ಯಾಪಾರಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಜಿಎಸ್‌ಟಿ ಅಧಿಕಾರಿಗಳಿಂದ 57 ಲಕ್ಷ ನಗದು ವಶಪಡಿಸಿಕೊಳ್ಳಲಾಗಿದೆ. ಸುಲಿಗೆ ಮಾಡಿದ್ದ ಹಣದಲ್ಲಿ ಚಿನ್ನದ ವ್ಯಾಪಾರಿ ಖರೀದಿಸಿದ್ದ 307 ಗ್ರಾಂ ಚಿನ್ನದ ಗಟ್ಟಿ ವಶ ಪಡಿಸಿಕೊಳ್ಳಲಾಗಿದೆ. ಪ್ರಕರಣದಲ್ಲಿ ಒಟ್ಟು 93 ಲಕ್ಷ ವಶಕ್ಕೆ ಪಡೆಯಲಾಗಿದೆ. ಆದರೆ, ಅಧಿಕಾರಿಗಳು 1.50 ಕೋಟಿ ಸುಲಿಗೆ ಮಾಡಿದ್ದರು ಎಂದು ಉದ್ಯಮಿ ದೂರು ನೀಡಿದ್ದರು. ಈ ಬಗ್ಗೆ ತನಿಖೆ ನಡೆಯುತ್ತಿದೆ. ಹವಾಲಾ ಮಾದರಿಯಲ್ಲಿ ಹಣ ವರ್ಗಾವಣೆ ಆಗಿರುವುದರ ಕುರಿತು ಆದಾಯ ತೆರಿಗೆ ಇಲಾಖೆಗೆ ಮಾಹಿತಿ ನೀಡಲಾಗಿತ್ತು.
ಬಂಧಿತ ಅಧಿಕಾರಿಗಳನ್ನು ಸುದೀರ್ಘವಾಗಿ ವಿಚಾರಣೆಗೆ ಒಳಪಡಿಸಿದಾಗ ವ್ಯಾಪಾರಿಗಳಿಬ್ಬರು ಕೇಶವ್ ತಕ್ ಅವರ ಹಣಕಾಸಿನ ವಹಿವಾಟಿನ ಬಗ್ಗೆ ಮಾಹಿತಿ ನೀಡಿದ್ದರು ಎಂಬ ವಿಚಾರ ಗೊತ್ತಾಯಿತು. ಶಾಂತಿನಗರದಲ್ಲಿ ಮುಕೇಶ್ ಜೈನ್ ಅವರನ್ನು ಬಂಧಿಸಲಾಯಿತು. ಸುಲಿಗೆ ಮಾಡಿದ್ದ ಹಣದಲ್ಲಿ 306 ಗ್ರಾಂ ಚಿನ್ನದ ಗಟ್ಟಿ ಖರೀದಿಸಿರುವುದಾಗಿ ವಿಚಾರಣೆ ವೇಳೆ ಒಪ್ಪಿಕೊಂಡ. ಈತ ನೀಡಿದ ಮಾಹಿತಿ ಮೇರೆಗೆ ಮತ್ತೊಬ್ಬ ವ್ಯಾಪಾರಿ ಪ್ರಕಾಶ್ ಜೈನ್‌ರನ್ನು ಬಂಧಿಸಿ, ಅವರ ಬ್ಯಾಂಕ್ ಖಾತೆಯಲ್ಲಿರುವ 12.30 ಲಕ್ಷ ಜಪ್ತಿ ಮಾಡಲಾಗಿದೆ.
ಶೋಧದ ನೆಪದಲ್ಲಿ ಜೀವನ್ ಬಿಮಾನಗರದ ಉದ್ಯಮಿ ಕೇಶವ್ ತಕ್ ಕಂಪನಿ ಮೇಲೆ ದಾಳಿ ನಡೆಸಿ, ₹1.5 ಕೋಟಿ ಸುಲಿಗೆ ಮಾಡಿದ್ದ ಆರೋಪದಡಿ ಸಿಜಿಎಸ್ಟಿ ಇಲಾಖೆಯ ನಾಲ್ವರು ಅಧಿಕಾರಿಗಳನ್ನು ಸಿಸಿಬಿ ಸೆ.10 ರಂದು ಸಿಸಿಬಿ ಬಂಧಿಸಿತ್ತು.
ಬೆಂಗಳೂರು ವಲಯದ ದಕ್ಷಿಣ ಕಮಿಷನರೇಟ್‌ನ ಕೇಂದ್ರ ತೆರಿಗೆಯ ಅಧೀಕ್ಷಕ ಅಭಿಷೇಕ್, ಜಿಎಸ್‌ಟಿ ಇಂಟೆಲಿಜೆನ್ಸ್ ಹಿರಿಯ ಗುಪ್ತಚರ ಅಧಿಕಾರಿಗಳಾದ ಮನೋಜ್ ಸೈನಿ ಮತ್ತು ನಾಗೇಶ್ ಬಾಬು, ಬೆಂಗಳೂರು ವಲಯ ಮತ್ತು ಬೆಂಗಳೂರು ವಲಯದ ಗುಪ್ತಚರ ಅಧಿಕಾರಿ ಸೋನಾಲಿ ಸಹಾಯ್ ಅವರನ್ನು ಬಂಧಿಸಲಾಗಿತ್ತು.