ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಕ್ಷಮೆಯಾಚಿಸಿದ ಅರವಿಂದ್ ಬೆಲ್ಲದ್! ಪತ್ರದಲ್ಲಿ ಏನು ಹೇಳಿದ್ದಾರೆ ನೋಡಿ...
ಬೆಂಗಳೂರು: ಕೆಲವು ದಿನಗಳ ಹಿಂದೆ ಸಿಎಂ ವಿರುದ್ಧ ವಾಗ್ದಾಳಿ ನಡೆಸಿದ್ದ ವಿರೋಧ ಪಕ್ಷದ ಉಪ ನಾಯಕ ಅರವಿಂದ್ ಬೆಲ್ಲದ್, ಈಗ ಸಿದ್ದರಾಮಯ್ಯರಿಗೆ ಪತ್ರ ಬರೆದು ಕ್ಷಮೆಯಾಚಿಸಿದ್ದಾರೆ.
ಕೆಲವು ದಿನಗಳ ಹಿಂದೆ ಸುದ್ದಿಗೋಷ್ಠಿಯಲ್ಲಿ ಸಿಎಂ ಅವರಿಗೆ ಸಂಬಂಧಿಸಿದಂತೆ ಹೇಳಿಕೆ ನೀಡಿದ ವಿಚಾರವಾಗಿ ವಿರೋಧ ಪಕ್ಷದ ಉಪನಾಯಕ ಅರವಿಂದ್ ಬೆಲ್ಲದ ಕ್ಷಮೆ ಕೇಳಿದ್ದಾರೆ.
ಧಾರವಾಡದಲ್ಲಿ ಮಾತನಾಡಿದ್ದ ಅವರು, ‘ಸಿದ್ದರಾಮಯ್ಯನವರದ್ದು ಏನು ಅಪ್ಪನ ಮನೆಯ ಆಸ್ತಿನಾ’ ಎಂದು ಹೇಳಿಕೆ ನೀಡಿದ್ದರು. ಈ ಹೇಳಿಕೆ ವಿಚಾರವಾಗಿ ಸಿಎಂ ಸಿದ್ದರಾಮಯ್ಯನವರಿಗೆ ಅರವಿಂದ್ ಬೆಲ್ಲದ್ ಅವರು ಪತ್ರ ಬರೆದು ಕ್ಷಮೆ ಕೇಳಿದ್ದಾರೆ.
ತಾವು ಬಳಸಿದ ಪದ ನನಗೆ ಶೋಭೆ ತರುವುದಿಲ್ಲ ಎಂದು ಹೇಳಿದ್ದಕ್ಕೆ, ಈ ಹಿನ್ನಲೆಯಲ್ಲಿ ನಾನು ಕ್ಷಮೆ ಕೇಳುತ್ತೇನೆ ಎಂದು ಕ್ಷಮಾಪಣೆ ಪತ್ರದಲ್ಲಿ ಉಲ್ಲೇಖ ಮಾಡಿದ್ದಾರೆ.
ಜಿಂದಾಲ್‌ಗೆ ಭೂಮಿ ಕೊಟ್ಟಿದ್ದಾರೆ. ಮಾರುಕಟ್ಟೆ ಮೌಲ್ಯದ ಒಂದು ಭಾಗಕ್ಕೆ ಬೆಲೆಬಾಳುವ ಸರ್ಕಾರಿ ಭೂಮಿಯನ್ನು ಮಾರಾಟ ಮಾಡಿದ್ದಾರೆ. ಈ ಮೂಲಕ ಇನ್ನೊಂದು ಹಗರಣವನ್ನು ಮಾಡುತ್ತಿದ್ದಾರೆ ಎಂದು ಸಿಎಂ ವಿರುದ್ಧ ಬೆಲ್ಲದ್ ಹರಿಹಾಯ್ದಿದ್ದರು.
ಸರ್ಕಾರವು ಕಡಿಮೆ ಬೆಲೆಗೆ ಮಾರಾಟ ಮಾಡುವ ಮೂಲಕ ಆಂತರಿಕ ಒಪ್ಪಂದವನ್ನು ಮಾಡಿಕೊಂಡು ಭೂಮಿಯನ್ನು ಲೂಟಿ ಮಾಡುತ್ತಿದೆ ಎಂದು ಹೇಳಿಕೆ ನೀಡುವ ಮೂಲಕ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದರು.