ಗೋ ಸಾಗಾಟಗಾರನೆಂದು ತಪ್ಪಾಗಿ ಭಾವಿಸಿ ವಿದ್ಯಾರ್ಥಿಯನ್ನು ಗುಂಡಿಕ್ಕಿ ಹತ್ಯೆಗೈದ ಗೋರಕ್ಷಕರು; 5 ಮಂದಿಯ ಬಂಧನ
ಚಂಡೀಗಢ: ದನ ಕಳ್ಳಸಾಗಣೆದಾರನೆಂದು ತಪ್ಪಾಗಿ ತಿಳಿದು ಪಿಯುಸಿ ವಿದ್ಯಾರ್ಥಿಯೊಬ್ಬನನ್ನು ಗೋರಕ್ಷಕರು ಕಾರಿನಲ್ಲಿ ಹಿಂಬಾಲಿಸಿ ಗುಂಡಿಕ್ಕಿ ಹತ್ಯೆಗೈದ ಘಟನೆ ಹರ್ಯಾಣದ ಫರಿದಾಬಾದ್‍ನಲ್ಲಿ ನಡೆದಿದೆ.
ಆರ್ಯನ್ ಮಿಶ್ರಾ ದುಷ್ಕರ್ಮಿಗಳ ದಾಳಿಗೆ ಬಲಿಯಾದ ದುರ್ದೈವಿ. ಆಗಸ್ಟ್ 23 ರಂದು ಘಟನೆ ನಡೆದಿದ್ದು ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಪ್ರಕರಣ ಸಂಬಂಧ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಅನಿಲ್ ಕೌಶಿಕ್, ವರುಣ್, ಕೃಷ್ಣ, ಆದೇಶ್ ಮತ್ತು ಸೌರಭ್ ಎಂದು ಗುರುತಿಸಲಾಗಿದೆ.
ರೆನಾಲ್ಟ್ ಡಸ್ಟರ್ ಮತ್ತು ಟೊಯೊಟಾ ಫಾರ್ಚುನರ್ ಕಾರುಗಳಲ್ಲಿ ಕೆಲವರು ಜಾನುವಾರುಗಳನ್ನು ಕಳ್ಳಸಾಗಾಣಿಕೆ ಮಾಡುತ್ತಿದ್ದಾರೆ ಎಂದು ಗೋರಕ್ಷಕರಿಗೆ ಮಾಹಿತಿ ಸಿಕ್ಕಿದೆ. ಆರೋಪಿಗಳು ಈ ವೇಳೆ ಕಾರಿನಲ್ಲಿ ಹೋಗುತ್ತಿದ್ದ ಆರ್ಯನ್ ಮಿಶ್ರಾ, ಆತನ ಸ್ನೇಹಿತರಾದ ಶಾಂಕಿ ಮತ್ತು ಹರ್ಷಿತ್ ಅವರನ್ನು ಜಾನುವಾರು ಕಳ್ಳಸಾಗಣೆದಾರರು ಎಂದು ತಪ್ಪಾಗಿ ಭಾವಿಸಿದ್ದಾರೆ. ಬಳಿಕ ಆರೋಪಿಗಳು ದೆಹಲಿ-ಆಗ್ರಾ ರಾಷ್ಟ್ರೀಯ ಹೆದ್ದಾರಿಯಲ್ಲಿ ಸುಮಾರು 30 ಕಿಲೋಮೀಟರ್ ಅವರ ಕಾರನ್ನು ಹಿಂಬಾಲಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಗಳು ಕಾರನ್ನು ಹಿಂಬಾಲಿಸಿ ಚಾಲಕ ಹರ್ಷಿತ್ ನನ್ನು ನಿಲ್ಲಿಸುವಂತೆ ಹೇಳಿದ್ದಾರೆ. ಆದರೆ ಕಾರಿನಲ್ಲಿದ್ದ ಶಾಂಕಿ ಎಂಬಾತನಿಗೆ ಕೆಲವರ ಜೊತೆ ಗಲಾಟೆಗಳಾಗಿದ್ದು, ಅವರು ಗೂಂಡಾಗಳನ್ನು ಕಳಿಸಿ ಹತ್ಯೆಗೆ ಸ್ಕೆಚ್ ಹಾಕಿದ್ದಾರೆ ಎಂದು ಭಾವಿಸಿದ್ದರು.
ಕಾರು ನಿಲ್ಲಿಸದೇ ಇದ್ದಾಗ ಆರೋಪಿಗಳು ಕಾರಿನತ್ತ ಗುಂಡು ಹಾರಿಸಿದರು. ಈ ವೇಳೆ ಆರ್ಯನ್ ಕುತ್ತಿಗೆಗೆ ತಗುಲಿತು. ಬಳಿಕ ಕಾರು ನಿಲ್ಲಿಸಿದಾಗ ಕಾರಿನಲ್ಲಿ ಮಹಿಳೆಯರು ಇದ್ದಿದ್ದನ್ನು ನೋಡಿ ಆರೋಪಿಗಳು ತಪ್ಪಾದ ಕಾರು ಎಂದು ಅರಿವಾಗಿ ಪರಾರಿಯಾಗಿದ್ದರು.
ಆರೋಪಿಗಳು ಕಾರಿನಲ್ಲಿ ಇಬ್ಬರು ಮಹಿಳೆಯರನ್ನು ನೋಡಿದಾಗ, ಅವರು ತಪ್ಪಾದ ವ್ಯಕ್ತಿಗೆ ಗುಂಡು ಹಾರಿಸಿ ಪರಾರಿಯಾಗಿದ್ದಾರೆ ಎಂದು ಅವರು ಭಾವಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಆರ್ಯನ್‍ನನ್ನು ಕೂಡಲೇ ಆಸ್ಪತ್ರೆಗೆ ಸಾಗಿಸಲಾಯಿತು, ಅಲ್ಲಿ ಆತ ಒಂದು ದಿನದ ನಂತರ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದ ಎಂದು ಹೇಳಲಾಗಿದೆ.