ರಾಜ್ಯಪಾಲರು ಬಿಜೆಪಿ ಏಜೆಂಟ್ ರೀತಿ ವರ್ತನೆ ಮಾಡುತ್ತಿದ್ದಾರೆ: ಪ್ರದೀಪ್ ಈಶ್ವರ್ ಆಕ್ರೋಶ
ಬೆಂಗಳೂರು: ರಾಜ್ಯಪಾಲರು ಬಿಜೆಪಿ ಏಜೆಂಟ್ ರೀತಿ ವರ್ತನೆ ಮಾಡುತ್ತಿದ್ದಾರೆ ಎಂದು ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಆರೋಪಿಸಿದ್ದಾರೆ.
ವಿಧಾನಸೌಧದಲ್ಲಿ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಈ ವೇಳೆ, ಅವರು ಬಿಜೆಪಿಯಿಂದಲೇ ರಾಜ್ಯಪಾಲರು ಆಗಿರಬಹುದು. ಆದರೆ ಸಾಂವಿಧಾನಿಕ ಹುದ್ದೆ ಮೇಲೆ ಗೌರವ ಇಲ್ಲವಾ? ಸಂವಿಧಾನದ ಪ್ರಕಾರ ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ. ಹಾಗಾದ್ರೆ ಅವರು ಎಲ್ಲಿ ಸಂವಿಧಾನಕ್ಕೆ ಗೌರವ ಕೊಡ್ತಿದ್ದಾರೆ? ನನ್ನಂತ ಹೊಸ ತಲೆಮಾರಿನ ರಾಜಕಾರಣಿಗಳಿಗೆ ಇದು ಯಕ್ಷಪ್ರಶ್ನೆಯಾಗಿದೆ ಎಂದು ಕಿಡಿಕಾರಿದ್ದಾರೆ.
ಕುಮಾರಸ್ವಾಮಿ, ಜೊಲ್ಲೆ, ನಿರಾಣಿ, ರೆಡ್ಡಿ ಅವರ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ಕೊಡಿ ಎಂದು ಕೇಳಿದ್ವಿ. ಆದರೆ ಅವರು ಕೊಡಲಿಲ್ಲ. ಮೈಸೂರಿನ ಮುಡಾದ 14 ಸೈಟ್ (MUDA Case) ಬಗ್ಗೆ ರಾಜ್ಯಪಾಲರಿಗೆ ಕಾಳಜಿ ಜಾಸ್ತಿ. ಆದರೆ ಕೋವಿಡ್‌ನಿಂದ ಸಾವಿರಾರು ಜನ ಸತ್ತರು. ಮೈಕಲ್ ಕುನ್ನಾ ಅವರ ವರದಿಯಲ್ಲಿ ಅಕ್ರಮ ಆಗಿದೆ ಎಂದು ಹೇಳಲಾಗಿದೆ. ಯಾಕೆ ಸಾವಿರಾರು ಜೀವಕ್ಕೆ ಬೆಲೆ ಇಲ್ಲವಾ? ಇದರ ಬಗ್ಗೆ ರಾಜ್ಯಪಾಲರು ಕ್ರಮ ತೆಗೆದುಕೊಳ್ಳಬಾರದಾ? ಎಂದು ಅವರು ಪ್ರಶ್ನಿಸಿದ್ದಾರೆ.
ಬಿಜೆಪಿಯವರಿಗೆ ಸಾವಿರಾರು ಜನ ಸತ್ತರು ಪರವಾಗಿಲ್ಲ. ಇದರ ಬಗ್ಗೆ ಯಾಕೆ ಅವರು ಮಾತಾಡ್ತಿಲ್ಲ. ಇದು ಬಿಜೆಪಿ ಅವರ ದ್ವೇಷದ ರಾಜಕೀಯ. ಇದು ಪ್ರಜಾಪ್ರಭುತ್ವ, ಸಂವಿಧಾನಕ್ಕೆ ಒಳ್ಳೆಯದಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.
ಪೂರ್ಣ ಬಹುಮತ ಸರ್ಕಾರ ಇದ್ದರೂ ಕೂಡಾ ಇಷ್ಟು ಡಿಸ್ಟರ್ಬ್ ಮಾಡ್ತಿದ್ದಾರೆ ಎಂದರೆ ರಾಜಕೀಯ ಬೇರೆ ಹಂತಕ್ಕೆ ಹೋಗಿದೆ. 136 ಸೀಟು ಇದ್ದರೂ ಸರ್ಕಾರ ಅಗೋ ಬೀಳಿಸ್ತೀನಿ, ಇಗೋ ಬೀಳಿಸ್ತೀನಿ ಅಂತಿದ್ದಾರೆ. 20 ಸೀಟು ಕಡಿಮೆ ಇದ್ದರೆ ನಮ್ಮನ್ನ ಇವರು ನೆಮ್ಮದಿಯಿಂದ ಇರೋಕೆ ಬಿಡುತ್ತಿದ್ರಾ? ಎಂದು ಪ್ರಶ್ನಿಸಿದ್ದಾರೆ.