ಚಾಮರಾಜನಗರದಲ್ಲಿ ಬಿಜೆಪಿಗೆ ಶಾಕ್ ಕೊಟ್ಟ ಕಾಂಗ್ರೆಸ್; 'ಆಪರೇಷನ್ ಹಸ್ತ'ದ ಮೂಲಕ ಕಾಂಗ್ರೆಸ್ ಸೇರಿದ 6 ಸದಸ್ಯರು
ಚಾಮರಾಜನಗರ: ಚಾಮರಾಜನಗರದಲ್ಲಿ ಬಿಜೆಪಿಗೆ ಕಾಂಗ್ರೆಸ್ ಆಪರೇಷನ್ ಹಸ್ತದ ಮೂಲಕ ಶಾಕ್ ನೀಡಿದ್ದು 6 ಮಂದಿ ಬಿಜೆಪಿ ಸದಸ್ಯರು ಕಾಂಗ್ರೆಸ್ ಗೆ ಸೇರ್ಪಡೆಯಾಗಿದ್ದಾರೆ. ಗುಂಡ್ಲುಪೇಟೆ ಪುರಸಭೆ ಅಧ್ಯಕ್ಷ ಹಾಗೂ ಉಪಾದ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಲಿರುವ ಸಂದರ್ಭದಲ್ಲಿ ಈ ದೊಡ್ಡ ಬೆಳವಣಿಗೆ ನಡೆದಿದೆ.
ಬಿಜೆಪಿಯ 6 ಸದಸ್ಯರು ಕಾಂಗ್ರೆಸ್ ಸೇರ್ಪಡೆಯಿಂದ ಚಾಮರಾಜನಗರ ಜಿಲ್ಲಾ ಬಿಜೆಪಿ ಅಧ್ಯಕ್ಷರೂ ಆಗಿರುವ ನಿರಂಜನ್ ಕುಮಾರ್ಗೆ ಸ್ವ ಕ್ಷೇತ್ರದಲ್ಲೇ ಭಾರಿ ಮುಖಭಂಗವಾಗಿದೆ. 13 ಮಂದಿ ಬಿಜೆಪಿ ಸದಸ್ಯರ ಪೈಕಿ 6 ಸದಸ್ಯರಿಗೆ ಕಾಂಗ್ರೆಸ್ ಗಾಳ ಹಾಕಿತ್ತು. ಅದರಲ್ಲಿ ಕಾಂಗ್ರೆಸ್ ಯಶಸ್ವಿಯಾಗಿದೆ. ಇನ್ನು ಕಾಂಗ್ರೆಸ್ಗೆ ಬೆಂಬಲ ನೀಡಿದ ಬಿಜೆಪಿ ಸದಸ್ಯರಿಗೆ ಪುರಸಭೆ ಅಧ್ಯಕ್ಷ ಹಾಗೂ ಉಪಾದ್ಯಕ್ಷ ಸ್ಥಾನವನ್ನೇ ಕಾಂಗ್ರೆಸ್ ಬಿಟ್ಟು ಕೊಟ್ಟಿದೆ.
ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿಯಿಂದ ಬಂದ ಕಿರಣ್ ಗೌಡ ನಾಮ ನಿರ್ದೇಶನ ಮಾಡಲಾಗಿದ್ದು, ಉಪಾಧ್ಯಕ್ಷೆ ಸ್ಥಾನಕ್ಕೆ ಬಿಜೆಪಿಯಿಂದ ಕಾಂಗ್ರೆಸ್ಗೆ ಬೆಂಬಲಿಸಿದ ಹೀನಾ ಕೌಸರ್ ನಾಮನಿರ್ದೇಶನ ಮಾಡಲಾಗಿದೆ. ಇನ್ನು ಬಿಜೆಪಿಯಿಂದ ನಾಮಿನೇಷನ್ ಮಾಡುವವರೇ ಇಲ್ಲದ ಕಾರಣ ಅಧ್ಯಕ್ಷ ಸ್ಥಾನ ಬಹುತೇಕ ಅವಿರೋಧ ಆಯ್ಕೆಯಾಗುವ ಸಾಧ್ಯತೆ ಇದೆ.