ಕನ್ನಡ ಚಿತ್ರರಂಗದಲ್ಲೂ ಲೈಂಗಿಕ ದೌರ್ಜನ್ಯ; ತನಿಖೆಗೆ ಸಮಿತಿ ರಚಿಸುವಂತೆ ಸಿಎಂಗೆ ಸುದೀಪ್, ರಮ್ಯಾ ಸೇರಿದಂತೆ 153 ಮಂದಿ ಮನವಿ!
ಬೆಂಗಳೂರು: ಮಲಯಾಳ ಚಿತ್ರರಂಗದಲ್ಲಿನ ಲೈಂಗಿಕ ದೌರ್ಜನ್ಯ ಕುರಿತು ರಚಿಸಲಾಗಿದ್ದ ನ್ಯಾಯಮೂರ್ತಿ ಹೇಮಾ ಸಮಿತಿಯ ವರದಿ ಕೇರಳದಲ್ಲಿ ಕೋಲಾಹಲ ಸೃಷ್ಟಿಸಿದೆ. ಇದರ ಬೆನ್ನಲ್ಲೇ ಮಲಯಾಳಂ ಚಲನಚಿತ್ರ ಕಲಾವಿದರ ಸಂಘದ (ಅಮ್ಮ) ಅಧ್ಯಕ್ಷ ಸ್ಥಾನಕ್ಕೆ ಮೋಹನ್ ಲಾಲ್ ರಾಜೀನಾಮೆ ನೀಡಿ ನಂತರ ಅಮ್ಮನ ಕಾರ್ಯಕಾರಿ ಸಮಿತಿಯನ್ನೇ ವಿಸರ್ಜಿಸಿದ್ದಾಗಿ ಘೋಷಿಸಿದ್ದರು. ಇದರ ಬೆನ್ನಲ್ಲೆ ಇದೀಗ ಕನ್ನಡ ಚಿತ್ರರಂಗದಲ್ಲೂ ಲೈಂಗಿಕ ದೌರ್ಜನ್ಯಗಳು ನಡೆದಿವೆ. ಈ ಕುರಿತಂತೆ ಸಮಿತಿ ರಚಿಸುವಂತೆ ನಟ ಸುದೀಪ್, ರಮ್ಯಾ ಸೇರಿದಂತೆ 153 ಮಂದಿ ಸಹಿ ಪತ್ರದ ಮೂಲಕ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಸ್ಯಾಂಡಲ್ವುಡ್ ನಲ್ಲೂ ಹಲವು ನಟಿಯರ ಮೇಲೆ ಲೈಂಗಿಕ ದೌರ್ಜನ್ಯಗಳು ನಡೆದಿದ್ದು ಇಲ್ಲೂ ಸಮಿತಿಯೊಂದನ್ನು ರಚಿಸುವಂತೆ ನಟ, ಸಾಮಾಜಿಕ ಹೋರಾಟಗಾರ ಚೇತನ್ ಅಹಿಂಸಾ ನೇತೃತ್ವದಲ್ಲಿ 153 ಮಂದಿ ಈ ಪತ್ರಕ್ಕೆ ಸಹಿ ಹಾಕಿದ್ದು ಸಿಎಂ ಸಿದ್ದರಾಮಯ್ಯಗೆ ಸತಿಮಿ ರಚಿಸುವಂತೆ ಮನವಿ ಮಾಡಿದ್ದಾರೆ.
ಸ್ಯಾಂಡಲ್ವುಡ್ ನಲ್ಲಿ ಕೆಲಸ ಮಾಡುವ ಮಹಿಳೆಯರ ಸಮಸ್ಯೆಗಳ ಕುರಿತಂತೆ ಹೋರಾಡಲು ಈ ಹಿಂದೆ ಫಿಲ್ಮ್ ಇಂಡಸ್ಟ್ರಿ ಫಾರ್ ರೈಟ್ಸ್ ಅಂಡ್ ಇಕ್ವಾಲಿಟಿ (FIRE) ರಚಿಸಲಾಗಿತ್ತು. 2017ರಲ್ಲಿ ರಚಿಸಲಾಗಿದ್ದ ಈ ಸಂಸ್ಥೆಯಲ್ಲಿ ಚೇತನ್ ಅಹಿಂಸಾ, ನಿರ್ದೇಶಕಿ ಕವಿತಾ ಲಂಕೇಶ್ ಸೇರಿದ್ದರು. ಈ ಸಂಸ್ಥೆ ಇದೀಗ ಮತ್ತೆ ಈ ಕಮಿಟಿ ಲೈಂಗಿಕ ಕಿರುಕುಳದ ವಿರುದ್ಧ ಹೋರಾಟಕ್ಕೆ ನಿಂತಿದೆ.
ಮನವಿ ಪತ್ರಕ್ಕೆ FIRE ಅಧ್ಯಕ್ಷೆ ನಿರ್ದೇಶಕಿ ಕವಿತಾ ಲಂಕೇಶ್, ಕಾರ್ಯದರ್ಶಿ ಚೇತನ್ ಅಹಿಂಸಾ, ನಟ ಸುದೀಪ್, ಕಿಶೋರ್, ವಿನಯ್ ರಾಜ್‌ಕುಮಾರ್, ನಿರ್ದೇಶಕ ಪವನ್ ಒಡೆಯರ್, ನಟಿಯರಾದ ರಮ್ಯಾ, ಶ್ರುತಿ ಹರಿಹರನ್, ಆಶಿಕಾ ರಂಗನಾಥ್, ಐಂದ್ರಿತಾ ರೇ, ಅಮೃತಾ ಅಯ್ಯಂಗಾರ್, ಪೂಜಾ ಗಾಂಧಿ, ಚೈತ್ರಾ ಜೆ ಆಚಾರ್, ಧನ್ಯಾ ರಾಮ್‌ಕುಮಾರ್, ಸಂಯುಕ್ತ ಹೆಗಡೆ, ಶ್ರದ್ಧಾ ಶ್ರೀನಾಥ್, ನಿಶ್ವಿಕಾ ನಾಯ್ಡು, ಸಂಗೀತಾ ಭಟ್ , ನೀತು ಶೆಟ್ಟಿ ಸೇರಿದಂತೆ ಕಿರುತೆರೆ ನಟ ನಟಿಯರು ಸೇರಿ ಒಟ್ಟು 153 ಮಂದಿ ಸಹಿ ಹಾಕಿದ್ದಾರೆ.