ರಾಹುಲ್ ಗಾಂಧಿಯನ್ನು ಭೇಟಿಯಾದ ಖ್ಯಾತ ಕುಸ್ತಿಪಟುಗಳಾದ ಭಜರಂಗ್ ಪುನಿಯಾ, ವಿನೇಶ್ ಫೋಗಟ್: ಹರಿಯಾಣ ಚುನಾವಣೆಯಲ್ಲಿ ಕಾಂಗ್ರೆಸ್ ನಿಂದ ಸ್ಪರ್ಧೆ ಸಾಧ್ಯತೆ
ನವದೆಹಲಿ: ಖ್ಯಾತ ಕುಸ್ತಿಪಟುಗಳಾದ ಭಜರಂಗ್ ಪುನಿಯಾ ಹಾಗೂ ವಿನೇಶ್ ಫೋಗಟ್ ಅವರಿಂದು ರಾಷ್ಟ್ರ ರಾಜಧಾನಿಯಲ್ಲಿ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರನ್ನು ಭೇಟಿಯಾಗಿದ್ದಾರೆ.
ಹರಿಯಾಣ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮುಂಚಿತವಾಗಿ ಭಜರಂಗ್ ಪುನಿಯಾ ಹಾಗೂ ವಿನೇಶ್ ಫೋಗಟ್ ರಾಹುಲ್ ಗಾಂಧಿ ಅವರನ್ನು ಭೇಟಿಯಾಗಿರುವುದು ಅವರು ಕಾಂಗ್ರೆಸ್ ಟಿಕೆಟ್ ಮೇಲೆ ಚುನಾವಣೆಗೆ ಸ್ಪರ್ಧಿಸುತ್ತಾರಾ ಎಂಬ ಕುತೂಹಲಕ್ಕೆ ಕಾರಣವಾಗಿದೆ.
ರಾಹುಲ್ ಗಾಂಧಿ ಭೇಟಿ ನಂತರ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ. ಸಿ. ವೇಣುಗೋಪಾಲ್ ಅವರ ನಿವಾಸಕ್ಕೆ ತೆರಳಿ, ಅವರೊಂದಿಗೂ ಮಾತುಕತೆ ನಡೆಸಿದ್ದಾರೆ. ಆದರೆ, ಯಾವ ವಿಚಾರ ಕುರಿತು ಮಾತನಾಡಿದ್ದಾರೆ ಎಂಬುದರ ವಿವರ ತಿಳಿದುಬಂದಿಲ್ಲ.
ಹರಿಯಾಣ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಪ್ರಕಟಣೆಗೂ ಮುನ್ನಾ ಕಾಂಗ್ರೆಸ್ ವರಿಷ್ಠರನ್ನು ಭಜರಂಗ್ ಪುನಿಯಾ ಹಾಗೂ ವಿನೇಶ್ ಫೋಗಟ್ ಭೇಟಿ ಮಾಡಿರುವುದು ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದ್ದು, ಅವರು ಕಾಂಗ್ರೆಸ್ ನಿಂದ ಚುನಾವಣೆಗೆ ಸ್ಪರ್ಧಿಸುವ ಮಾತುಗಳು ಕೇಳಿಬರುತ್ತಿವೆ.
ಭಾರತೀಯ ಕುಸ್ತಿ ಒಕ್ಕೂಟದ ಮಾಜಿ ಅಧ್ಯಕ್ಷ ಬ್ರಿಜೇಶ್ ಶರಣ್ ಸಿಂಗ್ ವಿರುದ್ದ ಲೈಂಗಿಕ ದೌರ್ಜನ್ಯ ಆರೋಪದಲ್ಲಿ ಕುಸ್ತಿಪಟುಗಳಾದ ವಿನೇಶ್ ಫೋಗಟ್, ಭಜರಂಗ್ ಪುನಿಯಾ ಹಾಗೂ ಸಾಕ್ಷಿ ಮಲ್ಲಿಕ್ ದೆಹಲಿ ಜಂತರ್ ಮಂಥರ್ ನಲ್ಲಿ ಪ್ರತಿಭಟನೆ ನಡೆಸಿದ್ದರು. ಪ್ರತಿಭಟನೆ ವೇಳೆಯಲ್ಲಿ ಬಿಜೆಪಿಯಿಂದ ಕುಸ್ತಿಪಟುಗಳಿಗೆ ಸೂಕ್ತ ಬೆಂಬಲ ವ್ಯಕ್ತವಾಗಲಿಲ್ಲ.ಇದರಿಂದಾಗಿ ವಿನೇಶ್, ಭಜರಂಗ್ ಅವರ ಬಗ್ಗೆ ಪಕ್ಷದಲ್ಲಿ ಅಸಮಾಧಾನ ಹೆಚ್ಚಾಗಲು ಕಾರಣವಾಗಿತ್ತು.
ಇತ್ತೀಚಿಗೆ ಮುಕ್ತಾಯವಾದ ಪ್ಯಾರೀಸ್ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ವಿನೇಶ್ ಫೋಗಟ್ 50 ಕೆಜಿ ವಿಭಾಗದ ಕುಸ್ತಿಪಂದ್ಯದಲ್ಲಿ ಒಂದೇ ದಿನ ಸತತ ಮೂರು ಪಂದ್ಯಗಳನ್ನು ಗೆದ್ದು ಫೈನಲ್ ಗೆ ಎಂಟ್ರಿ ಕೊಟ್ಟಿದ್ದರೂ, 100 ಗ್ರಾಂ ತೂಕ ಹೆಚ್ಚಳದಿಂದ ಫೈನಲ್ ಪಂದ್ಯದಿಂದ ಅನರ್ಹಗೊಂಡಿದ್ದರು.