
ಸಂಜೀವ ಕುಲಾಲ್ ಮಾಡಿದ ಉಪಕಾರ!
-ಡಿ. ಐ. ಅಬೂಬಕರ್ ಕೈರಂಗಳ
ಮೊಂಟೆಪದವು ಸಮೀಪದ ಪೊಟ್ಟೊಳಿಕೆ ಎಂಬಲ್ಲಿರುವ ಎಸ್. ಕೆ. ಜನರಲ್ ಸ್ಟೋರ್ ಮಾಲಕರಾದ ಶ್ರೀ ಸಂಜೀವ ಕುಲಾಲ್ ಇಂದು ನನಗೊಂದು ಉಪಕಾರ ಮಾಡಿದರು. ಕಾಯಾರ್ ಫ್ಯಾಮಿಲಿ ಸಂಗಮದ ಒಂದು ಕಮಿಟಿ ಮೀಟಿಂಗ್ ಗೆ ವಿದ್ಯಾನಗರಕ್ಕೆ ಹೋಗಿದ್ದೆ. ಕಾರು ಚಾಲಕ ರಜೆಯಲ್ಲಿದ್ದುದರಿಂದ ಅಟೋ ಹಿಡಿದುಕೊಂಡು ಹೋಗಿದ್ದೆ.
ಮೀಟಿಂಗ್ ಮುಗಿದಾಗ ಮೀಟಿಂಗ್ ಗೆ ಬಂದಿದ್ದ ಸಿದ್ದೀಕ್ ಅರ್ಕಾನ ಅವರು ಅವರ ಬೈಕಲ್ಲಿ ನನ್ನನ್ನು ನನ್ನ ಮನೆಗೆ ಬಿಡುತ್ತೇನೆ ಎಂದರು. ಹಾಗೆ ನಾನು ಅವರ ಜೊತೆಗೆ ಬೈಕಲ್ಲಿ ಬರುತ್ತಿದ್ದಾಗ ಪೊಟ್ಟೊಳಿಕೆಗೆ ತಲುಪಿದ ಸಂದರ್ಭದಲ್ಲಿ ಬೈಕಿನ ಪೆಟ್ರೋಲ್ ಖಾಲಿಯಾಗಿತ್ತು. ಹಾಗೆ ನಾವು ಪೆಟ್ರೋಲ್ ಇದೆಯಾ ಅಂತ ಕೇಳಲು ಎಸ್.ಕೆ. ಜನರಲ್ ಸ್ಟೋರ್ ಗೆ ಹೋದುದು. ಅವರ ಪರಿಚಯ ನನಗೆ ಇದ್ದಿರಲಿಲ್ಲ. ನನ್ನ ಪರಿಚಯವೂ ಅವರಿಗೆ ಇದ್ದಿರಲಿಲ್ಲ.
ಇಲ್ಲಿ ಪೆಟ್ರೋಲ್ ಇಲ್ಲ, ತೌಡುಗೋಳಿಯಲ್ಲಿ ಸಿಗುತ್ತದೆ ಎಂದರು ಅವರು. ಅಲ್ಲಿಂದ ತೌಡುಗೋಳಿಗೆ ಹೇಗೆ ಹೋಗುವುದೆಂದು ನಾವು ಆಲೋಚಿಸುತ್ತಿರುವಾಗ " ನನ್ನ ಸ್ಕೂಟಿಯಲ್ಲಿ ಹೋಗಿ" ಎನ್ನುತ್ತಾ ಸಂಜೀವ್ ಕುಲಾಲ್ ರವರು ಅವರ ಸ್ಕೂಟರನ್ನು ಕೊಟ್ಟರು. ಅದೂ ಅಲ್ಲೇ ಇರಲೂ ಇಲ್ಲ. ತುಸು ದೂರದಲ್ಲಿ ಅವರ ಮನೆಯ ಬಳಿ ನಿಲ್ಲಿಸಲಾಗಿದ್ದ ಸ್ಕೂಟರನ್ನು ಅವರೇ ಹೋಗಿ ತಂದು ಕೊಟ್ಟರು.
ನಾನೊಬ್ಬ ಅಪರಿಚಿತ ಮುಸ್ಲಿಮ್. ಅವರು ಹಿಂದೂ. ಆದರೂ ಅವರ ಆ ಒಂದು ಉಪಕಾರ ನನಗೆ ಬಹಳ ಖುಶಿ ತಂದು ಕೊಟ್ಟಿತು. ಅವರಲ್ಲೇ ಬಾಯಿಬಿಟ್ಟು ಅದನ್ನು ಕೇಳಿಯೂಬಿಟ್ಟೆ: ಹಿಂದೂ ಮುಸ್ಲಿಮ್ ಬೇಧಭಾವಕ್ಕೆ ಕೋಮುವಾದಿಗಳು ಹುಳಿ ಹಿಂಡಿರಯವ ಇಂದಿನ ದಿನಗಳಲ್ಲಿ ನಾನೊಬ್ಬ ಮುಸ್ಲಿಮನಾಗಿದ್ದು ಕೂಡಾ ನೀವು ಸಹಾಯ ಮಾಡಿದ್ದು ದೊಡ್ಡ ಕಾರ್ಯ ಅಂದೆ.
"ನನಗೆ ಬೇಧ ಭಾವ ಇಲ್ಲ. ನಾನು ಎಲ್ಲರನ್ನೂ ಮಾನವೀಯ ದೃಷ್ಟಿಯಿಂದ ಸಮಾನವಾಗಿ ಕಾಣುತ್ತೇನೆ " ಅಂದರು.
ಭಾರತ ಉಳಿದಿರುವುದು ಇಂತಹ ಸಹೃದಯ ಹಿಂದೂಗಳಿಂದಲೇ.