ಅತ್ಯಾಚಾರ ಆರೋಪ: ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ವಿರುದ್ಧ ಸಂಜಯ್‌ ನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್

ಅತ್ಯಾಚಾರ ಆರೋಪ: ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ವಿರುದ್ಧ ಸಂಜಯ್‌ ನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್

ಬೆಂಗಳೂರು: ತನ್ನ ಮೇಲೆ ಅತ್ಯಾಚಾರ ಎಸಗಿ, ಕಿರುಕುಳ ನೀಡಿದ್ದಾರೆಂದು ಮಹಿಳೆಯೊಬ್ಬರು ನೀಡಿದ ದೂರಿನ ಮೇರೆಗೆ ಧಾರವಾಡದ ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ವಿರುದ್ಧ ಸಂಜಯ್‌ ನಗರ ಪೊಲೀಸ್ ಠಾಣೆಯಲ್ಲಿ ಮಂಗಳವಾರ ಎಫ್‌ಐಆರ್ ದಾಖಲಾಗಿದೆ.

ಮಹಿಳೆಯ ದೂರಿನ ಆಧಾರದ ಮೇಲೆ ಪೊಲೀಸರು ವಿನಯ್ ಕುಲಕರ್ಣಿ ಅವರನ್ನು ಆರೋಪಿ 1 (A1) ಮತ್ತು ಅವರ ಆಪ್ತ ಸಹಾಯಕ ಅರ್ಜುನ್ ಅನ್ನು ಆರೋಪಿ 2 (A2) ಎಂದು ಹೆಸರಿಸಿ ಎಫ್‌ಐಆರ್ ದಾಖಲಿಸಿದ್ದಾರೆ.

2022ರಲ್ಲಿ ಶಾಸಕರನ್ನು ಭೇಟಿ ಮಾಡಿದ್ದೆ. ಬಳಿಕ ರೈತರೊಬ್ಬರಿಂದ ನನ್ನ ಫೋನ್ ಪಡೆದಿದ್ದ ಶಾಸಕರು, ರಾತ್ರಿ ವೇಳೆಯೂ ನನಗೆ ಕರೆ ಮಾಡಲು ಪ್ರಾರಂಭಿಸಿದ್ದರು. ಕೆಲವು ತಿಂಗಳ ನಂತರ, ಬೆತ್ತಲೆಯಾಗಿದ್ದಾಗ ವೀಡಿಯೊ ಕರೆ ಮಾಡುವಂತೆ, ಹೆಬ್ಬಾಳದಲ್ಲಿರುವ ತಮ್ಮ ಮನೆಗೆ ಬರುವಂತೆ ಒತ್ತಾಯಿಸಿದ್ದರು. ಇದಕ್ಕೆ ನಿರಾಕರಿಸಿದಾಗ ಶಾಸಕರ ಮನೆಗೆ ಹೋಗದಿದ್ದಲ್ಲಿ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ರೌಡಿಗಳ ತಂಡವೊಂದು ಬೆದರಿಕೆ ಹಾಕಿತು.

ಏಪ್ರಿಲ್‌ನಲ್ಲಿ, ಶಾಸಕರು ನನ್ನನ್ನು ಬೆಳಗಾವಿಗೆ ಕರೆದರು, ಅಲ್ಲಿ ನನ್ನನ್ನು ತಬ್ಬಿಕೊಂಡು ಲೈಂಗಿಕ ಕಿರುಕುಳ ನೀಡಲು ಪ್ರಯತ್ನಿಸಿದರು. ಆದರೆ, ಕೆಲವರು ಶಾಸಕರನ್ನು ಭೇಟಿಯಾಗಲು ಬಂದಾಗ ನಾನು ತಪ್ಪಿಸಿಕೊಂಡಿದ್ದೆ.

ಆಗಸ್ಟ್ 24 ರಂದು ಕೆಲಸದ ನಿಮಿತ್ತ ಹಿಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಭೇಟಿಗೆ ಬೆಂಗಳೂರಿಗೆ ಬಂದಿದ್ದೆ. ಆಗ ಕರೆ ಮಾಡಿ ಹೆಬ್ಬಾಳದ ಮನೆಗೆ ಬರುವಂತೆ ಸೂಚಿಸಿದ್ದರು. ಕಾರಿನಲ್ಲಿ ಒಬ್ಬರೇ ಬಂದು ವಿಮಾನ ನಿಲ್ದಾಣ ಬಳಿಯ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಕಾರಿನಲ್ಲಿ ಅತ್ಯಾಚಾರ ನಡೆಸಿ ರಾಜಕೀಯದಲ್ಲಿ ದೊಡ್ಡಮಟ್ಟದಲ್ಲಿ ಬೆಳೆಸುತ್ತೇನೆ ಎಂದು ಆಮಿಷವೊಡ್ಡಿದ್ದರು.

4 ವರ್ಷಗಳ ಬಳಿಕ ಧಾರವಾಡಕ್ಕೆ ಕಾಲಿಟ್ಟ ಶಾಸಕ ವಿನಯ್ ಕುಲಕರ್ಣಿ!

ಬಳಿಕ 2022ರ ಸೆಪ್ಟೆಂಬರ್ ತಿಂಗಳಿನಲ್ಲಿ ಮತ್ತೆ ಭೇಟಿ ಮಾಡಿದ್ದರು. ಬಳಿಕ ನನ್ನ ಫೋನ್ ತೆಗೆದುಕೊಂಡು ಅವರ ಪಕ್ಷದ ಸದಸ್ಯನೊಬ್ಬನ ಕೈಗೆ ಇರಿಸಿ ಫೋಟೋ ಹಾಗೂ ವಿಡಿಯೋ ತೆಗೆದುಕೊಳ್ಳುವಂತೆ ತಿಳಿಸಿದ್ದರು. ಬಳಿಕ ಫೋನ್ ನನಗೆ ನೀಡಿದರು.

ಇದಾದ ಬಳಿಕ ನಾನು ಮತ್ತು ಶಾಸಕರು ಫೋನ್ ನಲ್ಲಿ ನಡೆಸಿದ್ದ ಸಂಭಾಷಣೆಯ ಆಡಿಯೋ ವೈರಲ್ ಆಗಿತ್ತು. ಶಾಸಕರು ನಾನೇ ಆಡಿಯೋ ಲೀಕ್ ಮಾಡಿದ್ದೇನೆಂದು ಶಂಕಿಸಿದ್ದರು. ಬಳಿಕ ಅರ್ಜುನ್ ಅವರಿಗೆ ಕರೆ ಮಾಡಿ ಆಡಿಯೋ ಲೀಕ್ ಮಾಡಿದ್ದ ನಾನಲ್ಲ ಎಂದು ಹೇಳಿದ್ದೆ. ಆದರೆ, ಅವರು ನಂಬಲಿಲ್ಲ. ಶಾಸಕರು ನಿರ್ಜನ ಪ್ರದೇಶಕ್ಕೆ ನನ್ನನ್ನು ಕರೆದುಕೊಂಡು ಹೋಗಿ ಹಲ್ಲೆ ನಡೆಸಿದರು.

ಅಕ್ಟೋಬರ್ 2 ರಂದು ಧರ್ಮಸ್ಥಳಕ್ಕೆ ಕರೆದುಕೊಂಡು ಹೋಗಿ ಶಾಸಕರು ನನ್ನ ಮೇಲೆ ಅತ್ಯಾಚಾರ ಎಸಗಿದರು. ಮರುದಿನ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಬಳಿಕ ಯಾರಿಗೂ ವಿಚಾರ ತಿಳಿಸದಂತೆ ಬೆದರಿಕೆ ಹಾಕಿದರು. ನಂತರ ನನ್ನನ್ನು ಬೆಂಗಳೂರಿಗೆ ಕರೆದುಕೊಂಡು ಹೋಗುವಂತೆ ಅರ್ಜುನ್ ಅವರಿಗೆ ಸೂಚಿಸಿದ್ದರು ಎಂದು ಎಫ್‌ಐಆರ್‌ನಲ್ಲಿ ವಿವರಿಸಲಾಗಿದೆ.

ದೂರು ಬೆನ್ನಲ್ಲೇ ಪೊಲೀಸರು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 506, 504, 201, 366, 376, 323, 354 ಮತ್ತು ಐಟಿ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.

Ads on article

Advertise in articles 1

advertising articles 2

Advertise under the article