ಭಾರತವನ್ನು ದುರ್ಬಲಗೊಳಿಸಲು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಂಚು; ಕಾಂಗ್ರೆಸ್ ಭಾಗಿ: ಪ್ರಧಾನಿ ಮೋದಿ ಗಂಭೀರ ಆರೋಪ
ನವದೆಹಲಿ: ಆರ್ಥಿಕವಾಗಿ ಸ್ವಾಯತ್ತ ಸಾಧಿಸುತ್ತಿರುವ ಭಾರತವನ್ನು ದುರ್ಬಲಗೊಳಿಸಲು ಅಂತಾರಾಷ್ಟ್ರೀಯ ಮಟ್ಟದ ಸಂಚು ನಡೆಸಲಾಗುತ್ತಿದ್ದು, ಈ ಸಂಚಿನಲ್ಲಿ ಕಾಂಗ್ರೆಸ್ ಭಾಗಿಯಾಗಿದೆ ಎಂದು ಪ್ರಧಾನಿ ಮೋದಿ ಗಂಭೀರ ಆರೋಪ ಮಾಡಿದ್ದಾರೆ.
ಹರ್ಯಾಣ ಮತ್ತು ಜಮ್ಮು ಮತ್ತು ಕಾಶ್ಮೀರ ಚುನಾವಣಾ ಫಲಿತಾಂಶ ಘೋಷಣೆ ಬೆನ್ನಲ್ಲೇ ಇಂದು ದೆಹಲಿಯ ಬಿಜೆಪಿ ಪ್ರಧಾನ ಕಚೇರಿಯಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
'ಕಾಂಗ್ರೆಸ್ ಜಾತಿ ಆಧಾರಿತ ರಾಜಕಾರಣವನ್ನು ಉತ್ತೇಜಿಸುತ್ತಿದೆ ಮತ್ತು ದೇಶದಲ್ಲಿ ಜಾತಿಯ ವಿಷವನ್ನು ಹರಡುತ್ತಿದೆ. ಜಾತಿಯ ಹೆಸರಿನಲ್ಲಿ ಜನರನ್ನು ಜಗಳ ಮಾಡಲು ಕಾಂಗ್ರೆಸ್ ಪ್ರಚೋದಿಸುತ್ತಿದೆ ಎಂದು ಹೇಳಿದರು.
ಹರ್ಯಾಣದಲ್ಲಿ ಕಾಂಗ್ರೆಸ್ ದಲಿತರನ್ನು ಅವಮಾನಿಸುತ್ತಿದೆ ಎಂದು ಪ್ರಧಾನಿ ಮೋದಿ ಆರೋಪಿಸಿದ್ದು, ಕಾಂಗ್ರೆಸ್ ನಾಯಕಿ ಕುಮಾರಿ ಶೈಲಜಾ ಅವರನ್ನು ಉಲ್ಲೇಖಿಸಿದ ಅವರು, ಕಾಂಗ್ರೆಸ್ ದಲಿತರನ್ನು ಅವಮಾನಿಸಿದೆ ಮತ್ತು ಮೀಸಲಾತಿಯನ್ನು ಕೊನೆಗೊಳಿಸುವ ಬಗ್ಗೆ ಮಾತನಾಡಿದೆ. ಇದರೊಂದಿಗೆ ರೈತರು, ದಲಿತರು, ಒಬಿಸಿ ಮತ್ತು ಬುಡಕಟ್ಟು ವರ್ಗಗಳನ್ನು ಪ್ರಚೋದಿಸಲು ಕಾಂಗ್ರೆಸ್ ಪ್ರಯತ್ನಿಸುತ್ತಿದೆ ಎಂದು ಹೇಳಿದರು.
ಇದೇ ವೇಳೆ ಭಾರತವನ್ನು ದುರ್ಬಲಗೊಳಿಸಲು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಂಚು ನಡೆಯುತ್ತಿದ್ದು, ಈ ಸಂಚಿನಲ್ಲಿ ಕಾಂಗ್ರೆಸ್ ಕೂಡ ಭಾಗಿಯಾಗಿದೆ. ಭಾರತದ ವಿರುದ್ಧ ಅಂತಾರಾಷ್ಟ್ರೀಯ ಷಡ್ಯಂತ್ರಗಳು ನಡೆಯುತ್ತಿದ್ದು, ಇದರಲ್ಲಿ ಕಾಂಗ್ರೆಸ್ ಕೂಡ ಭಾಗಿಯಾಗಿದೆ. ವಿದೇಶಿ ಷಡ್ಯಂತ್ರಗಳಿಗೆ ಕಾಂಗ್ರೆಸ್ ಸಹಕಾರ ನೀಡಿ ದೇಶವನ್ನು ದುರ್ಬಲಗೊಳಿಸಲು ಯತ್ನಿಸುತ್ತಿದೆ. ಕಾಂಗ್ರೆಸ್ ತನ್ನ ಮಿತ್ರಪಕ್ಷಗಳನ್ನೇ ನುಂಗುತ್ತದೆ ಮತ್ತು ಜನರು ತಮ್ಮ ಸ್ವಂತ ಪರಂಪರೆಯನ್ನು ದ್ವೇಷಿಸುವ ದೇಶವನ್ನು ಮಾಡಲು ಬಯಸುತ್ತಿದೆ ಎಂದು ಹೇಳಿದರು.