ಮಾಜಿ ಶಾಸಕ ಮೊಯಿದ್ದೀನ್ ಬಾವ ಸಹೋದರ ಮುಮ್ತಾಝ್ ಅಲಿ ನಾಪತ್ತೆ; ಕೂಳೂರು ಸೇತುವೆ ಬಳಿ ಕಾರು ಪತ್ತೆ; ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ಹೇಳಿದ್ದೇನು...?
ಮಂಗಳೂರು: ಮಾಜಿ ಶಾಸಕ ಮೊಯಿದ್ದೀನ್ ಬಾವ ಸಹೋದರ ಉದ್ಯಮಿ, ಸಾಮಾಜಿಕ ಧಾರ್ಮಿಕ ಮುಂದಾಳು ಮುಮ್ತಾಜ್ ಅಲಿ (52) ನಾಪತ್ತೆಯಾಗಿದ್ದಾರೆ. ಮಂಗಳೂರಿನ ಕುಳೂರಿನ ಸೇತುವೆ ಮೇಲೆ ಮುಮ್ತಾಜ್ ಕಾರು ಪತ್ತೆ ಪತ್ತೆಯಾಗಿದ್ದು, ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ಅವರ ಕಾರು ಉಡುಪಿ - ಮಂಗಳೂರಿನ ಕೂಳೂರು ಸೇತುವೆಯ ಮೇಲೆ ಪತ್ತೆಯಾಗಿದೆ. ಅಲ್ಲದೆ, ಕಾರಿನ ಮುಂಭಾಗದ ಬಲಬದಿ ಅಪಘಾತ ನಡೆದಿರುವ ಕುರುಹುಗಳು ಪತ್ತೆಯಾಗಿದೆ. ಸದ್ಯ ಎನ್ ಡಿ ಆರ್ ಎಫ್, ಎಸ್‌ಡಿ ಆರ್ ಎಫ್ ತಂಡಗಳು ಕೂಳೂರು ನದಿಯಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದಾರೆ.
ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ಹೇಳಿಕೆ:
"ಮಾಜಿ ಶಾಸಕ ಮೊಯ್ದೀನ್ ಬಾವಾ ಅವರ ಸಹೋದರ ಉದ್ಯಮಿ ಮಮ್ತಾಝ್ ಅಲಿ ಅವರ ಕಾರು ಕೂಳೂರು ಸೇತುವೆ ಮೇಲೆ ಪತ್ತೆಯಾಗಿದೆ ಮತ್ತು ಅವರು ನಾಪತ್ತೆಯಾಗಿದ್ದಾರೆ ಎಂದು ಬೆಳಗ್ಗೆ ನಮಗೆ ಸಂದೇಶ ಬಂದಿದೆ. ತಕ್ಷಣವೇ ನಮ್ಮ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ತನಿಖೆ ಮಾಡುತ್ತಿದ್ದೇವೆ. ನಮಗೆ ಬಂದಿರುವ ಮಾಹಿತಿ ಪ್ರಕಾರ ಅವರು ಮಧ್ಯರಾತ್ರಿ 3 ಗಂಟೆಗೆ ಕೆಲವು ಕಾರಣಗಳಿಂದ ಮನೆಯಿಂದ ತಮ್ಮ ಬಿಎಂಡಬ್ಲ್ಯೂ ಕಾರಿನಿಂದ ಹೊರಟು ಬಂದಿದ್ದಾರೆ. ನಗರದ ಹಲವೆಡೆ ಸುತ್ತಿದ್ದಾರೆ. ನಂತರ ಕೂಳೂರು ಸೇತುವೆ ಬಳಿ ಕಾರಿಗೆ ಆಕ್ಸಿಡೆಂಟ್ ಮಾಡಿಕೊಂಡು ಮಾಡಿ ಆಮೇಲೆ ಅಲ್ಲಿಂದ ಕಾಣೆಯಾಗಿದ್ದಾರೆ. ನಂತರ ಮಗಳಿಗೆ ಇದರ ಬಗ್ಗೆ ತಿಳಿದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈಗ ನಾವು ಸೇತುವೆ ಮತ್ತು ನದಿಯಲ್ಲಿ ಪರಿಶೀಲನೆ ಮಾಡುತ್ತಿದ್ದೇವೆ. ಅವರು ಸೇತುವೆಯಿಂದ ಹಾರಿರುವ ಶಂಕೆಯಿದೆ. ಆದ್ದರಿಂದ ನಾವು ಈಗ ಎನ್ ಡಿ ಆರ್ ಎಫ್, ಎಸ್‌ಡಿ ಆರ್ ಎಫ್ ಹಾಗೂ ಕೋಸ್ಟ್ ಗಾರ್ಡ್ ತಂಡದ ಸಹಾಯದಿಂದ ಶೋಧಕಾರ್ಯ ನಡೆಸುತ್ತಿದ್ದೇವೆ. ಎಫ್‌ಎಸ್‌ಎಲ್ ತಂಡ ಕಾರು ಮತ್ತು ಘಟನೆಯ ಸ್ಥಳದ ಪರಿಶೀಲನೆ ನಡೆಸುತ್ತಿದ್ದಾರೆ. ಘಟನೆಗೆ ಕಾರಣ ಈಗಲೇ ಖಚಿತವಾಗಿ ಹೇಳಲು ಸಾಧ್ಯವಿಲ್ಲ. ನಾವು ತನಿಖೆ ನಡೆಸುತ್ತೇವೆ" ಎಂದು ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ಹೇಳಿದ್ದಾರೆ.
ಮಂಗಳೂರು ಉತ್ತರ ವಿಭಾಗದ ಪೊಲೀಸ್ ಉಪಾಯುಕ್ತ ಮನೋಜ್ ಕುಮಾರ್, ಡಿಸಿಪಿ ಪಣಂಬೂರು, ಸುರತ್ಕಲ್, ಕಾವೂರು ಪೊಲೀಸ್ ಠಾಣೆಯ ನಿರೀಕ್ಷರು ಸ್ಥಳದಲ್ಲಿದ್ದಾರೆ.