
ಉಡುಪಿ-ಉಚ್ಚಿಲ ದಸರಾ ಪ್ರಯುಕ್ತ ಉಡುಪಿ-ದ.ಕ. ಜಿಲ್ಲಾ ಮಟ್ಟದ ಕುಸ್ತಿ ಸ್ಪರ್ಧೆ; ನಾಡೋಜ ಜಿ. ಶಂಕರ್ ಚಾಲನೆ
ಸರಸ್ವತಿ ಮಂದಿರ ಪ್ರೌಢ ಶಾಲೆಯ ಮೈದಾನದಲ್ಲಿ ರವಿವಾರ ಬೆಳಗ್ಗೆ ಪ್ರಥಮ ಬಾರಿಗೆ ನಡೆದ ಉಡುಪಿ ಮತ್ತು ದ.ಕ. ಜಿಲ್ಲಾ ಮಟ್ಟದ ಕುಸ್ತಿ ಸ್ಪರ್ಧೆಯನ್ನು ದಸರಾ ರೂವಾರಿ, ದ.ಕ. ಮೊಗವೀರ ಮಹಾಜನ ಸಂಘದ ಗೌರವ ಸಲಹೆಗಾರ ನಾಡೋಜ ಜಿ. ಶಂಕರ್ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಜಿ.ಶಂಕರ್, ಕುಸ್ತಿ ಅತ್ಯಂತ ಪುರಾತನ ಕ್ರೀಡೆಯಾಗಿದೆ. ರಾಜ, ಮಹಾರಾಜರುಗಳ ಕಾಲದಲ್ಲಿ ನಡೆಯುತ್ತಿದ್ದ ಕುಸ್ತಿಯನ್ನು ಭವಿಷ್ಯಕ್ಕೂ ಉಳಿಸುವ ನಿಟ್ಟಿನಲ್ಲಿ ಉಡುಪಿಯಲ್ಲಿ ಪ್ರಥಮ ಬಾರಿಗೆ ಸ್ಪರ್ಧೆ ನಡೆಯುತ್ತಿದೆ. ಸರಕಾರದ ನೆರವಿನೊಂದಿಗೆ ಮುಂದಿನ ವರ್ಷಗಳಲ್ಲಿ ಮತ್ತಷ್ಟು ವಿಜೃಂಭಣೆಯಿಂದ ಅಯೋಜಿಸಲಾಗುವುದು ಎಂದರು.
ದ.ಕ. ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ. ಕೋಟ್ಯಾನ್, ಕ್ಷೇತ್ರಾಡಳಿತ ಸಮಿತಿ ಅಧ್ಯಕ್ಷ ಗಿರಿದರ ಸುವರ್ಣ, ದಸರಾ ಸಮಿತಿ ಅಧ್ಯಕ್ಷ ವಿನಯ ಕರ್ಕೇರ, ಕುಸ್ತಿ ಫೆಡರೇಷನ್ ಅಧ್ಯಕ್ಷ ದಿಲ್ ರಾಜ್ ಆಳ್ವ, ಪ್ರಮುಖರಾದ ಸುರೇಶ್ಚಂದ್ರ ಶೆಟ್ಟಿ, ಗೋವರ್ಧನ ಬಂಗೇರ, ಮೋಹನ್ ಬೇಂದ್ರೆ, ವಾಸುದೇವ ಸಾಲ್ಯಾನ್, ಚೇತನ್ ಬೇಂಗ್ರೆ, ಶರಣ್ ಮಟ್ಟು, ದಿನೇಶ್ ಎರ್ಮಾಳು, ಉಷಾ ರಾಣಿ, ಸುಗುಣಾ ಕರ್ಕೇರ, ಪುಂಡಲೀಕ ಕರ್ಕೇರ ಹೊಸಬೆಟ್ಟು ಮೊದಲಾದವರು ಉಪಸ್ಥಿತರಿದ್ದರು.
ಬಾಲಕರ, ಬಾಲಕಿಯರ, ಪುರುಷರ, ಮಹಿಳೆಯರ ವಿಭಾಗದಲ್ಲಿ ಕುಸ್ತಿ ಸ್ಪರ್ಧೆ ನಡೆಯಿತು. ಉಡುಪಿ ಉಚ್ಚಿಲ ದಸರಾ ಪ್ರಯುಕ್ತ ಜಿಲ್ಲೆಯಲ್ಲಿ ಪ್ರಥಮ ಬಾರಿಗೆ ನಡೆದ ಕುಸ್ತಿ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಪುರುಷರ ವಿಭಾಗದಲ್ಲಿ ಉಡುಪಿ ಉಚ್ಚಿಲ ದಸರಾ ಕೇಸರಿ 2024, ಉಡುಪಿ ಉಚ್ಚಿಲ ದಸರಾ ಕುಮಾರ್ 2024, ಮಹಿಳೆಯರ ವಿಭಾಗದಲ್ಲಿ ಉಚ್ಚಿಲ ದಸರಾ ಕುವರಿ 2024 ಬಿರುದಿನೊಂದಿಗೆ ಬೆಳ್ಳಿ ಗದೆ ಪ್ರಶಸ್ತಿ ಹಾಗೂ ವಿವಿಧ ತೂಕದ ವಿಭಾಗದ ಸ್ಪರ್ಧೆಯ ವಿಜೇತರಿಗೆ ನಗದು ಸಹಿತ ಬಹುಮಾನ ವಿತರಿಸಲಾಯಿತು. 10 ಕೆಟಗರಿಯಲ್ಲಿ ನಡೆದ ಸ್ಪರ್ಧೆಯಲ್ಲಿ 242 ಮಂದಿ ಸ್ಪರ್ಧಾಳುಗಳು ಭಾಗವಹಿಸಿದ್ದರು.
ವೀರ ಮಾರುತಿ ವ್ಯಾಯಾಮ ಶಾಲೆ ಮಂಗಳೂರು ಬೇಂದ್ರೆ, ಬ್ರದರ್ಸ್ ಯುವಕ ಮಂಡಲ ಉಳ್ಳಾಲ, ಮೋಹನ್ ಬೇಂದ್ರೆ ಮತ್ತು ಕುಟುಂಬದವರು ಕ್ರಮವಾಗಿ ದಸರಾ ಕೇಸರಿ, ದಸರಾ ಕುಮಾರ್ ಮತ್ತು ದಸರಾ ಕುವರಿ ಪರ್ಯಾಯ ಬೆಳ್ಳಿ ಗದೆಯನ್ನು ಪ್ರಾಯೋಜಿಸಿದ್ದಾರೆ.
ಶಂಕರಪ್ಪ, ಸತೀಶ್ ಬೇಂದ್ರೆ, ಸಂದೀಪ್ ರಾವ್ ವಿನೋದ್ ಕುಮಾರ್. ಮೋಹನ್ ಬೇಂದ್ರೆ, ರಾಜು ಪಲ್ಕೆ, ಪ್ರಮೋದ್, ಸ್ವಪ್ನ ತೀರ್ಪುಗಾರರಾಗಿ ಸಹಕರಿಸಿದ್ದರು.
ಕುಸ್ತಿ ಪಂದ್ಯಾಟದ ಸಂಘಟಕರಾದ ವಿಜಯ್ ಸುವರ್ಣ ಕುಳಾಯಿ ಸ್ವಾಗತಿಸಿ, ಪುಂಡಲೀಕ ಹೊಸಬೆಟ್ಟು ವಂದಿಸಿದರು. ವ್ಯವಸ್ಥಾಪಕ ಸತೀಶ್ ಅಮೀನ್ ಪಡುಕೆರೆ ಕಾರ್ಯಕ್ರಮ ನಿರೂಪಿಸಿದರು.