ಉದ್ಯಮಿ ಮುಮ್ತಾಜ್ ಅಲಿ ಸಾವಿನ ಪ್ರಕರಣ: ಮೂವರ ಬಂಧನ

ಉದ್ಯಮಿ ಮುಮ್ತಾಜ್ ಅಲಿ ಸಾವಿನ ಪ್ರಕರಣ: ಮೂವರ ಬಂಧನ

ಮಂಗಳೂರು: ಮಾಜಿ ಶಾಸಕ ಮೊಯಿದ್ದೀನ್ ಬಾವಾ ಸೋದರ, ಉದ್ಯಮಿ ಮುಮ್ತಾಜ್ ಅಲಿ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ಬಂಧಿಸಲಾಗಿದೆ.

ಕೇರಳಕ್ಕೆ ಪರಾರಿಯಾಗಿದ್ದ ಎ1 ಆರೋಪಿ ಆಯಿಷಾ ಅಲಿಯಾಸ್ ರೆಹಮತ್, A5 ಆರೋಪಿ ಶೊಹೇಬ್ ಮತ್ತು ಸಿರಾಜ್ ಎಂಬುವವರನ್ನು ಇಂದು ಕಲ್ಲಡ್ಕ ಬಳಿ ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಇದೀಗ ಪ್ರಕರಣದ ಮಾಸ್ಟರ್​ಮೈಂಡ್ ಆಗಿರುವ ಎ2 ಆರೋಪಿ ಅಬ್ದುಲ್ ಸತ್ತಾರ್​ಗಾಗಿ ಶೋಧ ನಡೆದಿದೆ.

ಮೊನ್ನೆ(ಅ.06) ಮಂಗಳೂರು ಉತ್ತರ ಕ್ಷೇತ್ರದ ಮಾಜಿ ಶಾಸಕ ಮೊಯಿದ್ದೀನ್ ಬಾವಾ ಸೋದರ ಮುಮ್ತಾಜ್ ಅಲಿ ನಾಪತ್ತೆ ಆಗಿದ್ದು, ನಗರದ ಕೂಳೂರು ಬ್ರಿಡ್ಜ್​​ ಮೇಲೆ ಡ್ಯಾಮೇಜ್ ಆದ ಸ್ಥಿತಿಯಲ್ಲಿ ಅವರ ಕೆಎ19 ಎಂಜಿ0004 ಸಂಖ್ಯೆಯ BMW X5 ಕಾರು ಪತ್ತೆ ಆಗಿತ್ತು. ಅದರಂತೆ ಮಂಗಳೂರಿನ ಕುಳೂರಿನ ಫಲ್ಗುಣಿ ನದಿಯಲ್ಲಿ ಸತತ ಮೂವತ್ತು ಗಂಟೆಗಳ ಕಾರ್ಯಾಚರಣೆಯ ಬಳಿಕ ಮುಮ್ತಾಜ್ ಮೃತದೇಹ, ಹುಡುಕಾಟದಲ್ಲಿದ್ದ ಸ್ಥಳೀಯ ಮೀನುಗಾರರಿಗೆ ಸಿಕ್ಕಿತ್ತು.

ಮುಮ್ತಾಜ್ ಮೃತದೇಹ ಪತ್ತೆಯಾಗುತ್ತಿದ್ದಂತೆ ಮೊಯಿದ್ದೀನ್ ಬಾವ ಮತ್ತು ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು. ತಮ್ಮನ ಮೃತದೇಹ ಕಂಡು ಬಾವಾ ಗೋಳಾಡಿದರೆ, ಸಂಬಂಧಿಕರು ಕಣ್ಣೀರಿಟ್ಟರು. ಶವವನ್ನು ಮೇಲಕ್ಕೆತ್ತಿದ ಬಳಿಕ ಮಂಗಳೂರು ನಗರದ ಖಾಸಗಿ ಆಸ್ಪತ್ರೆಯಲ್ಲಿ ಪೋಸ್ಟ್ ಮಾರ್ಟಂ ಮಾಡಿ, ನಂತರ ಕೃಷ್ಣಾಪುರ ಮಸೀದಿಯಲ್ಲಿ ಅವರನ್ನು ದಫನ್ ಮಾಡಲಾಯಿತು.

ಇನ್ನು ಮುಮ್ತಾಜ್ ಆಲಿಗೆ ಆತ್ಮಹತ್ಯೆ ಮಾಡಿಕೊಳ್ಳಲು ಮಹಿಳೆಯನ್ನು ಉಪಯೋಗಿಸಿ ಮಾಡಿದ ಬ್ಲ್ಯಾಕ್ ಮೇಲ್ ಕಾರಣ ಎಂದು ಅಲಿ ಕುಟುಂಬಸ್ಥರು ಆರೋಪಿಸಿದ್ದರು. ಈ ಬಗ್ಗೆ ಮುಮ್ತಾಜ್ ಅಲಿ ತಮ್ಮ ಹೈದರ್ ಅಲಿ ಕಾವೂರು ಪೊಲೀಸ್ ಠಾಣೆಯಲ್ಲಿ ಓರ್ವ ಮಹಿಳೆ ಸೇರಿದಂತೆ ಆರು ಮಂದಿಯ ಮೇಲೆ ದೂರು ನೀಡಿದ್ದರು. ರೆಹಮತ್ ಅಲಿಯಾಸ್ ಆಯಿಷಾ ಎಂಬ ಮಹಿಳೆಯನ್ನು ಬಳಸಿಕೊಂಡು ಆತ್ಮಹತ್ಯೆಗೆ ಪ್ರಚೋದನೆ ನೀಡಲಾಗಿದೆ. ಆರು ಮಂದಿಯ ತಂಡ ಬ್ಲ್ಯಾಕ್ ಮೇಲ್ ಮಾಡಿದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದರು. ಈ ಸಂಬಂಧ ಕಾವೂರು ಠಾಣೆಯಲ್ಲಿ ರೆಹಮತ್, ಅಬ್ದುಲ್ ಸತ್ತಾರ್, ಶಾಫಿ, ಮುಸ್ತಫಾ,ಶೋಯೆಬ್ ಮತ್ತು ಮುಮ್ತಾಜ್ ಅಲಿ ಕಾರು ಚಾಲಕ ಸಿರಾಜ್ ವಿರುದ್ಧ ಪ್ರಕರಣ ದಾಖಲಾಗಿತ್ತು.

ಈ ಕುರಿತು ತನಿಖೆ ಕೈಗೊಂಡಿದ್ದ ಮಂಗಳೂರು ಸಿಸಿಬಿ ಪೊಲೀಸರು ಇಂದು ಮೂವರನ್ನು ಬಂಧಿಸಿದ್ದಾರೆ. 

Ads on article

Advertise in articles 1

advertising articles 2

Advertise under the article