ಕಾಂಗ್ರೆಸ್ ಬೇಜವಾಬ್ದಾರಿಯುತ ಪಕ್ಷ, ದ್ವೇಷ ಹರಡುವ ಕಾರ್ಖಾನೆ: ಮೋದಿ ವಾಗ್ದಾಳಿ
ಮುಂಬೈ: ಹರಿಯಾಣ ಚುನಾವಣೆಯಲ್ಲಿ ಬಿಜೆಪಿ ಹ್ಯಾಟ್ರಿಕ್ ಬಾರಿಸಿದ ಬೆನ್ನಲ್ಲೇ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿರುವ ಪ್ರಧಾನಿ ನರೇಂದ್ರ ಮೋದಿ, ‘ಕಾಂಗ್ರೆಸ್ ಬೇಜವಾಬ್ದಾರಿಯುತ ಪಕ್ಷವಾಗಿದ್ದು, ದ್ವೇಷ ಹರಡುವ ಕಾರ್ಖಾನೆಯಾಗಿದೆ’ ಎಂದು ಹೇಳಿದರು.
ಮಹಾರಾಷ್ಟ್ರದಲ್ಲಿ ಸುಮಾರು ₹7,600 ಕೋಟಿ ಮೊತ್ತದ ವಿವಿಧ ಅಭಿವೃದ್ಧಿ ಯೋಜನೆಗಳನ್ನು ವರ್ಚುವಲ್ ಆಗಿ ಉದ್ಘಾಟಿಸಿ ಮಾತನಾಡಿದ ಅವರು, ‘ಹರಿಯಾಣದಲ್ಲಿ ಬಿಜೆಪಿಯ ಗೆಲುವು ದೇಶದ ಜನರ ಸದ್ಯದ ಮನಸ್ಥಿತಿಯನ್ನು ತಿಳಿಸಿದೆ. ಮಹಾರಾಷ್ಟ್ರದಲ್ಲಿಯೂ ಬಿಜೆಪಿಗೆ ದೊಡ್ಡ ಜಯಸಿಗಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.
‘ಅಧಿಕಾರ ಪಡೆಯಲು ವಿರೋಧ ಪಕ್ಷಗಳ ‘ಮಹಾ ವಿಕಾಸ್ ಅಘಾಡಿ’ ಮಹಾರಾಷ್ಟ್ರವನ್ನು ದುರ್ಬಲಗೊಳಿಸಲು ಬಯಸುತ್ತಿವೆ. ಆದರೆ, ಆಡಳಿತ ಪಕ್ಷ ‘ಮಹಾಯುತಿ’ ಸದೃಡ ರಾಜ್ಯವನ್ನು ಕಟ್ಟುವಲ್ಲಿ ನಿರತವಾಗಿದೆ’ ಎಂದು ತಿಳಿಸಿದರು.
ಕಾಂಗ್ರೆಸ್‌ಗೆ ಅಭಿವೃದ್ಧಿ ಮತ್ತು ಪರಂಪರೆಯ ಬಗ್ಗೆ ಕಾಳಜಿ ಇಲ್ಲ ಎಂದು ಹೇಳಿರುವ ಮೋದಿ, ‘ಮುಸ್ಲಿಮರಲ್ಲಿ ಭಯ ಹುಟ್ಟಿಸುವ ಮೂಲಕ ಮುಸ್ಲಿಂ ಸಮುದಾಯವನ್ನು ತನ್ನ ಮತ ಬ್ಯಾಂಕ್ ಆಗಿ ಮಾಡಿಕೊಂಡಿದೆ’ ಎಂದು ಕಿಡಿಕಾರಿದರು.
‘ಹಿಂದುಗಳನ್ನು ವಿಭಜಿಸಲು ಮತ್ತು ಒಂದು ಸಮುದಾಯದ ವಿರುದ್ಧ ಮತ್ತೊಂದು ಸಮುದಾಯವನ್ನು ಎತ್ತಿಕಟ್ಟುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ. ರೈತರು, ಯುವಕರು ಮತ್ತು ಮಹಿಳೆಯರ ಅಭಿವೃದ್ಧಿಯೊಂದಿಗೆ ವಿಕಸಿತ ಭಾರತ ಕಟ್ಟುವ ಗುರಿಯನ್ನು ಬಿಜೆಪಿ ಹೊಂದಿದೆ’ ಎಂದು ಹೇಳಿದರು.
288 ಸದಸ್ಯ ಬಲದ ಮಹಾರಾಷ್ಟ್ರ ವಿಧಾನಸಭೆಗೆ ಈ ವರ್ಷದ ಕೊನೆಯಲ್ಲಿ ಚುನಾವಣೆ ನಡೆಯುವ ಸಾಧ್ಯತೆಯಿದೆ.