
ಕೈ ಬೀಸಿ ಕರೆಯುತ್ತಿದೆ ಉಚ್ಚಿಲ ದಸರಾ! ದೇಶ ವಿದೇಶಗಳಿಂದ ಹರಿದುಬರುತ್ತಿರುವ ಜನಸಾಗರ; ಗಮನ ಸೆಳೆಯುತ್ತಿರುವ ವಸ್ತು ಪ್ರದರ್ಶನ
ಉಚ್ಚಿಲ: ದ.ಕ. ಮೊಗವೀರ ಮಹಾಜನ ಸಂಘದ ಅಧೀನದ ಉಚ್ಚಿಲ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ಜರಗುತ್ತಿರುವ ಮೂರನೇ ವರ್ಷದ 'ಉಡುಪಿ ಉಚ್ಚಿಲ ದಸರಾ 2024'ಕ್ಕೆ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲದೆ ಬೇರೆಬೇರೆ ರಾಜ್ಯ ಹಾಗೂ ದೇಶ-ವಿದೇಶಗಳಿಂದ ಲಕ್ಷಾಂತರ ಮಂದಿ ದಿನನಿತ್ಯ ಆಗಮಿಸುವ ಮೂಲಕ ಇತಿಹಾಸವನ್ನೇ ನಿರ್ಮಿಸಿದ್ದಾರೆ.
ಭಾರೀ ಜನಸಾಗರವೇ ಉಚ್ಚಿಲದತ್ತ ಹರಿದು ಬರುತ್ತಿದ್ದು, ಈವರೆಗೆ ಮೂರುವರೆ ಲಕ್ಷಕ್ಕೂ ಮಿಕ್ಕಿದ ಭಕ್ತರು ಶ್ರೀ ಕ್ಷೇತ್ರಕ್ಕೆ ಆಗಮಿಸಿ ತಾಯಿ ಮಹಾಲಕ್ಷ್ಮೀ ಸಹಿತ ಪರಿವಾರ ದೇವರು, ಶಾರದಾ ಮಾತೆ ಮತ್ತು ನವದುರ್ಗೆಯರ ದರ್ಶನ ಪಡೆದರು.
ದೇಗುಲ ಮತ್ತು ಶಾರದಾ ಮಂಟಪಕ್ಕೆ ಪ್ರವೇಶಿಸಲು ಸರತಿ ಸಾಲಿನ ವ್ಯವಸ್ಥೆ ಮಾಡಲಾಗಿದ್ದು ಒಳ ಪ್ರಾಂಗಣದಲ್ಲೂ ಸರತಿ ಸಾಲಿನಲ್ಲಿ ದೇವರ ದರ್ಶನ ಪಡೆಯಲು ಅವಕಾಶ ಕಲ್ಪಿಸಿಕೊಡಲಾಗಿದೆ. ಭಕ್ತರು ವಸ್ತು ಪ್ರದರ್ಶನ, ಅಮ್ಯೂಸ್‌ಮೆಂಟ್, ಆಹಾರ ಮಳಿಗೆಗಳಿಗೂ ಭೇಟಿ ನೀಡಿ ಸಂಭ್ರಮಿಸುತ್ತಿದ್ದಾರೆ.
ಮೊದಲ 7 ದಿನಗಳಲ್ಲಿ ಲಕ್ಷಕ್ಕೂ ಅಧಿಕ ಮಂದಿ ಭೋಜನ ಪ್ರಸಾದ ಸ್ವೀಕರಿಸಿದ್ದು, ಭೋಜನದ ವ್ಯವಸ್ಥೆಯನ್ನು ಸಂಘಟಕರು ಅಚ್ಚುಕಟ್ಟಾಗಿ ಮಾಡುತ್ತಿದ್ದಾರೆ.
ಸರ್ವ ಧರ್ಮೀಯರ ಭೇಟಿ
ಉಚ್ಚಿಲ ದಸರಾವನ್ನು ಕಣ್ತುಂಬಿಸಿಕೊಳ್ಳಲು ಹಿಂದೂಗಳು ಮಾತ್ರವಲ್ಲದೇ ಮುಸ್ಲಿಂ, ಕ್ರಿಶ್ಚಿಯನ್ ಸೇರಿದಂತೆ ಎಲ್ಲ ಧರ್ಮದವರೂ ಉಚ್ಚಿಲಕ್ಕೆ ಆಗಮಿಸುತ್ತಿದ್ದಾರೆ. ಮಧ್ಯಾಹ್ನ ಭೋಜನ, ಸಂಜೆಯ ಉಪಾಹಾರ ಸ್ವೀಕಾರ, ವಸ್ತು ಪ್ರದರ್ಶನ, ಅಮ್ಯೂಸ್‌ಮೆಂಟ್ ಪಾರ್ಕ್ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ ವೀಕ್ಷಿಸಿ ಪರಿಸರದಲ್ಲಿನ ಕೋಮು ಸೌಹಾರ್ದತೆಗೆ ಸಾಕ್ಷಿಯಾಗುತ್ತಿದ್ದಾರೆ.
ಗಮನ ಸೆಳೆಯುತ್ತಿರುವ ವಸ್ತು ಪ್ರದರ್ಶನ
ದೇವಸ್ಥಾನದ ಆವರಣದಲ್ಲಿ ಮಾಡಿರುವ ವಸ್ತು ಪ್ರದರ್ಶನ ಎಲ್ಲರ ಗಮನ ಸೆಳೆಯುವಂತೆ ಮಾಡಿದೆ. ವಿವಿಧ ಬಗೆಯ ಸಸ್ಯ, ಮೀನುಗಳು, ಪಕ್ಷಿಗಳು ಎಲ್ಲರ ಗಮನ ಸೆಳೆಯುತ್ತಿದೆ. ಕಬ್ಬುವಿನ ಜ್ಯೂಸ್ ಮಾಡುವ ಹಳೆಯ ವಿಧಾನ ಇಲ್ಲಿ ಭಾರೀ ಗಮನ ಸೆಳೆಯುತ್ತದೆ. ಕೋಣಗಳನ್ನು ಬಳಸಿಕೊಂಡು ತೀರ್ಥಹಳ್ಳಿಯ ತಂಡವೊಂದು ಜ್ಯೂಸ್ ಮಾಡುವ ವಿಧಾನವನ್ನೊಮ್ಮೆ ಎಲ್ಲರೂ ನೋಡಲೇಬೇಕು.
ದೇವಸ್ಥಾನದ ಆವರಣದಲ್ಲಿ ಮಾಡಿರುವ ವಸ್ತು ಪ್ರದರ್ಶನ ಎಲ್ಲರ ಗಮನ ಸೆಳೆಯುವಂತೆ ಮಾಡಿದೆ. ವಿವಿಧ ಬಗೆಯ ಸಸ್ಯ, ಮೀನುಗಳು, ಪಕ್ಷಿಗಳು ಎಲ್ಲರ ಗಮನ ಸೆಳೆಯುತ್ತಿದೆ.
ತುಳುನಾಡಿನ ಪ್ರಾಚೀನ ಕಲೆಗಳ ಪ್ರದರ್ಶನ ಮತ್ತು ಪ್ರಾತ್ಯಕ್ಷಿಕೆ ಇಲ್ಲಿದೆ. ನಾವು ವೇಸ್ಟ್ ಎಂದು ಎಸೆಯುವ ಪ್ಲಾಸ್ಟಿಕ್ ಬಾಟ್ಲು, ಡಬ್ಬಗಳಿಗೆ ಕಲಾ ಸ್ಪರ್ಷ ಕೊಟ್ಟು ಅದರಲ್ಲಿ ಹಸಿರು ಚಿಗುರಿಸುವ ಯತೀಶ್ ಕಿದಿಯೂರು ಅವರ ಬಾಟಲ್ ಗಾರ್ಡನ್ ಇಲ್ಲಿದೆ.
ಮೀನಿನ ಮಂಡೆಯಲ್ಲಿರುವ ವಿವಿಧ ಗಾತ್ರ ಮತ್ತು ರೂಪದ ಕಲ್ಲುಗಳನ್ನು ವಿನೂತನ ಸಂಗ್ರಹ ನೋಡಬಹುದಾಗಿದೆ. ಕಾರ್ಕಳ ಬೈಲೂರಿನ ಒಂದು ಕುಟುಂಬದ ಎಲ್ಲಾ ಸದಸ್ಯರು ಪ್ರಾಚೀನ ಕಸುಬಾದ ಕತ್ತಿ ಮಾಡುವ ಕಾಯಕದಲ್ಲಿ ತೊಡಗಿದ್ದು, ಮಾರಾಟ ಕೂಡ ಮಾಡುತ್ತಿದ್ದಾರೆ.