ಡಾ.ತುಂಬೆ ಮೊಯ್ದಿನ್ ಅವರಿಗೆ ನಾಳೆ ಪ್ರತಿಷ್ಠಿತ 'ರಾಜ್ಯೋತ್ಸವ' ಪ್ರಶಸ್ತಿ ಪ್ರದಾನ; ಎಲ್ಲೆಡೆಯಿಂದ ಹರಿದುಬರುತ್ತಿರುವ ಅಭಿನಂದನೆ; ಯುಎಇಯಲ್ಲಿ ಪ್ರತಿಷ್ಠಿತ ಉದ್ಯಮ ಕಟ್ಟಿ ಬೆಳೆಸಿದ ಅವರ ಸಾಧನೆಯನ್ನೊಮ್ಮೆ ಓದಿ...
ಮಂಗಳೂರು: ಕನಸಿನ ನಗರಿ ಯುಎಇಯಲ್ಲಿ ಪ್ರತಿಷ್ಠಿತ ಉದ್ಯಮ, ಶಿಕ್ಷಣ ಸಮೂಹ ಕಟ್ಟಿ ಬೆಳೆಸುವ ಮೂಲಕ ಭಾರತದ ಕೀರ್ತಿ ಪತಾಕೆ ಹಾರಿಸಿ ಸಾಧನೆಗೈದಿರುವ ಡಾ.ತುಂಬೆ ಮೊಯ್ದಿನ್ ಅವರಿಗೆ ಈ ಬಾರಿ ಕರ್ನಾಟಕ ರಾಜ್ಯ ಸರಕಾರವು 'ಹೊರದೇಶ' ಕ್ಷೇತ್ರದ 2024ನೇ ಸಾಲಿನ ಪ್ರತಿಷ್ಠಿತ 'ರಾಜ್ಯೋತ್ಸವ' ಪ್ರಶಸ್ತಿ ಘೋಷಿಸಿದೆ.
ಡಾ.ತುಂಬೆ ಮೊಯ್ದಿನ್ ಅವರಿಗೆ 'ರಾಜ್ಯೋತ್ಸವ' ಪ್ರಶಸ್ತಿ ಘೋಷಣೆ ಆಗಿರುವುದಕ್ಕೆ ಎಲ್ಲೆಡೆಯಿಂದ ಅಭಿನಂದನೆಯ ಮಹಾಪೂರವೇ ಹರಿದು ಬರುತ್ತಿದೆ.
ಡಾ.ತುಂಬೆ ಮೊಯ್ದಿನ್ ಅವರ ಕಾರ್ಯ ಸಾಧನೆ
21ನೇ ವಯಸ್ಸಿಗೇ ಉದ್ಯಮ ಜಗತ್ತಿಗೆ ಪ್ರವೇಶಿಸಿದ ಡಾ.ತುಂಬೆ ಮೊಯ್ದಿನ್ ಅವರದ್ದು ಗಲ್ಫ್ ದೇಶಗಳ ಉದ್ಯಮ ವಲಯದಲ್ಲಿ ಇಂದು ಬಹು ದೊಡ್ಡ ಹೆಸರು. ಮಂಗಳೂರಿನ ತುಂಬೆ ಮೂಲದ ಮೊಯ್ದಿನ್ ತಮ್ಮ ತಂದೆ ದಿವಂಗತ ಡಾ.ಬಿ.ಅಹ್ಮದ್ ಹಾಜಿ ಮುಹಿಯುದ್ದೀನ್ ಸ್ಥಾಪಿಸಿದ ದೊಡ್ಡ ಉದ್ಯಮದ ವ್ಯಾಪ್ತಿಯನ್ನು ವಿದೇಶಗಳಲ್ಲೂ ವಿಸ್ತರಿಸಿ ಯಶಸ್ವಿಯಾಗಿ ಮುನ್ನಡೆಸಿದವರು.
ತುಂಬೆ ಮೊಯ್ದಿನ್ ಮಾರ್ಚ್ 23, 1957ರಲ್ಲಿ ಮಂಗಳೂರಿನಲ್ಲಿ ಜನಿಸಿದರು. ತಂದೆ ಮತ್ತು ಅಜ್ಜ, ಖ್ಯಾತ ಉದ್ಯಮಿ ಯೆನೆಪೊಯ ಮೊಯ್ದಿನ್ ಕುಂಞಯವರಿಂದ ಕಲಿತ ಉದ್ಯಮದ ಪಾಠಗಳು, ಮೊಯ್ದಿನ್ ಅವರಿಗೆ ಕೆಲವೇ ವರ್ಷಗಳಲ್ಲಿ ಉದ್ಯಮಕ್ಕೆ ಹೊಸ ಆಯಾಮ ನೀಡಿ ಅಂತರ್ ರಾಷ್ಟ್ರೀಯ ಮಟ್ಟದಲ್ಲಿ ವಿಸ್ತರಿಸಲು ನೆರವಾದವು.
1997ರಲ್ಲಿ ಡಾ.ತುಂದೆ ಮೊಯ್ದಿನ್ ಅವರು ಯುಎಇಯಲ್ಲಿ ತುಂಬೆ ಗ್ರೂಪ್ ಸ್ಥಾಪಿಸಿದರು. 1998ರಲ್ಲಿ ಅಜ್ಜಾನ್‌ನ ಆಡಳಿತಗಾರರ ಆಹ್ವಾನದ ಮೇರೆಗೆ ಅವರು ಅಜ್ಞಾನ್ ನಲ್ಲಿ ಪ್ರಾರಂಭಿಸಿದ ಗಲ್ಫ್ ಮೆಡಿಕಲ್ ಕಾಲೇಜು ಇವತ್ತು ಗಲ್ಫ್ ಮೆಡಿ ಕಲ್ ಯುನಿವರ್ಸಿಟಿ(ಜಿಎಂಯು)ಯಾಗಿ ಇಡೀ ಗಲ್ಫ್ ದೇಶಗಳಲ್ಲೇ ಪ್ರತಿಷ್ಠಿತ ವೈದ್ಯಕೀಯ ವಿಶ್ವ ವಿದ್ಯಾನಿಲಯವಾಗಿ ಭಾರೀ ಪ್ರಸಿದ್ದಿ ಪಡೆದಿದೆ. ಅದು ಇಡೀ ದೇಶಗಳಲ್ಲೇ ಪ್ರಪ್ರಥಮ ವೈದ್ಯಕೀಯ ವಿಶ್ವ ವಿದ್ಯಾನಿಲಯ. 98ಕ್ಕೂ ಹೆಚ್ಚು ದೇಶಗಳ 2,500ಕ್ಕೂ ಹೆಚ್ಚು ವಿದ್ಯಾರ್ಥಿಗಳು ಜಿಎಂಯುನ ಆರು ಕಾಲೇಜುಗಳ 28 ಕೋರ್ಸ್ ಗಳಲ್ಲಿ ಕಲಿಯುತ್ತಿದ್ದಾರೆ. 50ಕ್ಕೂ ಅಧಿಕ ದೇಶಗಳ ಬೋಧಕ, ಬೋಧಕೇತರ ಸಿಬ್ಬಂದಿ ಜಿಎಂಯುನಲ್ಲಿದ್ದಾರೆ.
ಅವರ ನಾಯಕತ್ವದಲ್ಲಿ ತುಂಬೆ ಸಮೂಹವು ಯುಎಇಯಲ್ಲಿ ಭಾರೀ ಬೆಳವಣಿಗೆ ಕಂಡಿತು. ತುಂಬೆ ಸಮೂಹವು ಶಿಕ್ಷಣ, ಆರೋಗ್ಯ, ವೈದ್ಯಕೀಯ ಸಂಶೋಧನೆ, ಡಯಾಗೋಸ್ಟಿಕ್ಸ್, ರಿಟೇಲ್ ಫಾರ್ಮಸಿ, ಆರೋಗ್ಯ, ಸಂವಹನ, ಪೌಷ್ಟಿಕಾಂಶ ಮಳಿಗೆಗಳು, ಹಾಸ್ಪಿಟಾಲಿಟಿ, ರಿಯಲ್ ಎಸ್ಟೇಟ್, ಪಬ್ಲಿಕೇಷನ್, ತಂತ್ರಜ್ಞಾನ, ಮಾಧ್ಯಮ, ಇವೆಂಟ್ ಮ್ಯಾನೇಜ್ ಮೆಂಟ್, ವೈದ್ಯಕೀಯ ಪ್ರವಾಸೋದ್ಯಮ, ವ್ಯಾಪಾರ ಮತ್ತು ಮಾರುಕಟ್ಟೆ ಸೇರಿದಂತೆ 20
ವಲಯಗಳಲ್ಲಿ ಕಾರ್ಯಾಚರಣೆ ಇರುವ ವೈವಿಧ್ಯಮಯ ಹಾಗೂ ಬೃಹತ್ ಉದ್ಯಮ ಸಮೂಹವಾಗಿ ವಿಕಸನಗೊಂಡಿದೆ. ಆ ಮೂಲಕ ಐದು ಸಾವಿರಕ್ಕೂ ಹೆಚ್ಚು ಜನರಿಗೆ ಉದ್ಯೋಗ ನೀಡಿದೆ. ತುಂಬೆ ಹಾಸ್ಪಿಟಲ್ ನೆಟ್ವರ್ಕ್ ಇಂದು ಇಡೀ ಗಲ್ಫ್ ಪ್ರದೇಶದಲ್ಲೇ ಅತಿದೊಡ್ಡ ಖಾಸಗಿ ಆರೋಗ್ಯ ಸೇವಾ ಸಮೂಹಗಳಲ್ಲಿ ಒಂದು ಹಾಗೂ ಪ್ರಪ್ರಥಮ ಖಾಸಗಿ ಶೈಕ್ಷಣಿಕ ಆರೋಗ್ಯ ಗಲ್ಸ್ ಖಾಸಗಿ ಸೇವಾ ಸಮೂಹ ತುಂಬೆ ನೆಟ್ವರ್ಕ್ ಗಳಲ್ಲಿಈಗ 8 ಆಸ್ಪತ್ರೆಗಳು, 10 ಕ್ಲಿನಿಕ್ ಗಳು, 56 ಫಾರ್ಮಸಿಗಳು, 5 ಲ್ಯಾಬ್ ಗಳಿದ್ದು 175ಕ್ಕೂ ಹೆಚ್ಚು ದೇಶಗಳ ರೋಗಿಗಳಿಗೆ ಚಿಕಿತ್ಸೆ ಒದಗಿಸುತ್ತಿವೆ. ಡಾ.ಮೊಯ್ದಿನ್ ಅವರು ಅಜ್ಞಾನ್ ಇಂಡಿಯನ್ ಅಸೋಸಿಯೇಶನ್, ಇಂಡಿಯನ್ ಬಿಸಿನೆಸ್ ಕೌನ್ಸಿಲ್ ಅಜ್ಜಾನ್, ಬ್ಯಾರೀಸ್ ಕಲ್ಬರಲ್ ಫೋರಂ, ದುಬೈ ಮತ್ತು ಕರ್ನಾಟಕ ಸಂಘ ಶಾರ್ಜಾದ ಮುಖ್ಯ ಪೋಷಕರಾಗಿದ್ದಾರೆ. ಅವರು ಏಶ್ಯನ್ ಹಾಸ್ಪಿಟಲ್ ಫೆಡರೇಶನ್ ಯುಎಇ ವಿಭಾಗದ ಅಧ್ಯಕ್ಷರಾಗಿ ಯೂ ಸೇವೆ ಸಲ್ಲಿಸಿದ್ದಾರೆ. ಫ್ರಾನ್ಸ್‌ನ ಫರ್ನಿ ವೋಲ್ವೇರ್ ನಲ್ಲಿರುವ ಅಂತರ್ ರಾಷ್ಟ್ರೀಯ ಹಾಸ್ಪಿಟಲ್ ಫೆಡರೇಶನ್ ಸದಸ್ಯರೂ ಆಗಿದ್ದಾರೆ. ಅಲ್ಲದೆ ಅಂತರ್ ರಾಷ್ಟ್ರೀಯ ವಿಶ್ವ ವಿದ್ಯಾನಿಲಯಗಳ ಅಧ್ಯಕ್ಷರ ಸಂಘದ ಸದಸ್ಯರೂ ಹೌದು.
ತುಂಬೆ ಫೌಂಡೇಶನ್ ಆರೋಗ್ಯ ಮತ್ತು ಶಿಕ್ಷಣ ರಂಗದಲ್ಲಿ ಸೇವಾ ಚಟುವಟಿಕೆಗಳಿಗೆ ಸದಾ ಬೆನ್ನೆಲುಬಾಗಿ ಕಾರ್ಯ ನಿರ್ವಹಿಸುತ್ತಿದೆ. ಶೈಕ್ಷಣಿಕ - ತರಬೇತಿ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನಗಳು, ಫೆಲೋಶಿಪ್ ಗಳು, ದೇಣಿಗೆಗಳು ಮತ್ತು ಇತರ ರೀತಿಯ ಹಣಕಾಸಿನ ನೆರವುಗಳ ಮೂಲಕ ಸಹಾಯ ಮಾಡುತ್ತಿದೆ.
ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನ ಹಳೇ ವಿದ್ಯಾರ್ಥಿಯಾಗಿರುವ ಡಾ.ತುಂಬೆ ಮೊಯ್ದಿನ್ ಅವರ ಸಾಧನೆಗೆ ಮಧ್ಯಪ್ರಾಚ್ಯದ ಪೋರ್ಟ್ಸ್ ನಿಯತಕಾಲಿಕವು ಅರಬ್ ಪ್ರಪಂಚದ ಅಗ್ರ ಭಾರತೀಯ ಉದ್ಯಮ ನಾಯಕ ಗೌರವ ನೀಡಿದೆ.
ವೈದ್ಯಕೀಯ ಶಿಕ್ಷಣ, ಉದ್ಯಮ ಮತ್ತು ರಾಷ್ಟ್ರದ ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿಯ ಉತ್ತೇಜನಕ್ಕೆ ಅವರು ನೀಡಿದ ಮಹತ್ವದ ಕೊಡುಗೆಗಳನ್ನು ಗೌರವಿಸಿ ದುಬೈಯ ಆಮಿಟಿ ವಿಶ್ವವಿದ್ಯಾನಿಲಯ ಹಾಗೂ ಮಂಗಳೂರು ವಿಶ್ವವಿದ್ಯಾನಿಲಯ ಅವರಿಗೆ ಗೌರವ ಡಾಕ್ಟರೇಟ್ ಪ್ರಶಸ್ತಿ ನೀಡಿ ಗೌರವಿಸಿವೆ. ಗಲ್ಫ್ ದೇಶದಲ್ಲಿ ಮಾಡಿರುವ ಅಸಾಮಾನ್ಯ ಸಾಧನೆ ಹಾಗೂ ಸೇವಾ ಚಟುವಟಿಕೆಗಳಿಗಾಗಿ ಅವರಿಗೆ ಗಲ್ಫ್ ಕನ್ನಡಿಗ ರತ್ನ ಪ್ರಶಸ್ತಿಯನ್ನೂ ನೀಡಲಾಗಿದೆ.
ಡಾ.ತುಂಬೆ ಮೊಯ್ದಿನ್ ಪತ್ನಿ ಝುಹ್ರಾ ಮೊಯ್ದಿನ್ ಚಿತ್ರ ಕಲಾವಿದರಾಗಿ ಛಾಪು ಮೂಡಿಸಿದವರು. ಮೊಯ್ದಿನ್‌ರಿಗೆ ಇಬ್ಬರು ಪುತ್ರರು. ಅಕ್ಟರ್ ಮೊಯ್ದಿನ್ ಹಾಗೂ ಅಕ್ರಮ್ ಮೊಯ್ದಿನ್. ಇಬ್ಬರೂ ತಂದೆಯ ಜೊತೆ ತುಂಬೆ ಸಮೂಹದಲ್ಲಿ ಸಕ್ರಿಯವಾಗಿದ್ದಾರೆ.