ಉಚ್ಚಿಲ ದಸರಾಗೆ ವೈಭವದ ತೆರೆ; ವಿಜೃಂಭಣೆಯಿಂದ ಸಂಪನ್ನಗೊಂಡ ಶೋಭಾಯಾತ್ರೆ; ಹರಿದುಬಂದ ಜನಸಾಗರ
ಉಚ್ಚಿಲ: ಮಹಾಲಕ್ಷ್ಮಿ ದೇವಸ್ಥಾನದಲ್ಲಿ ನಡೆದ ಉಡುಪಿ ಉಚ್ಚಿಲ ದಸರಾ ಮಹೋತ್ಸವ ಶನಿವಾರ ಸಂಪನ್ನಗೊಂಡಿದ್ದು, ವೈಭವದ ಶೋಭಾಯಾತ್ರೆ ಮೆರವಣಿಗೆ ನಡೆಯಿತು.
ಉಚ್ಚಿಲ ದಸರಾ ಉತ್ಸವ ಪ್ರಯುಕ್ತ ಪ್ರತಿಷ್ಠಾಪಿಸಲಾಗಿದ್ದ ನವದುರ್ಗೆಯರು ಮತ್ತು ಶಾರದಾ ಮಾತೆಯ ವಿಗ್ರಹಗಳ ಜಲಸ್ತಂಭನಾ ಕಾರ್ಯವು ಸಾವಿರಾರು ಜನರ ಸಮ್ಮುಖದಲ್ಲಿ ಕಾಪು ಕಡಲ ತೀರದಲ್ಲಿ ನೆರೆವೇರಿತು.
ಸಂಜೆ ನಡೆದ ಶೋಭಾಯಾತ್ರೆಗೆ ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘ ಉಚ್ಚಿಲ ಸಮಿತಿಯ ಗೌರವ ಸಲಹೆಗಾರ ನಾಡೋಜಾ ಡಾ. ಜಿ ಶಂಕರ್, ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಉಡುಪಿ ಶಾಸಕ ಯಶ್ಪಾಲ್ ಸುವರ್ಣ, ಅಧ್ಯಕ್ಷ ಜಯ ಸಿ ಕೋಟ್ಯಾನ್, ಕ್ಷೇತ್ರಾಡಳಿತ ಸಮಿತಿ ಅಧ್ಯಕ್ಷ ಗಿರಿಧರ ಸುವರ್ಣ, ದಸರಾ ಸಮಿತಿ ಅಧ್ಯಕ್ಷ ವಿನಯ ಕರ್ಕೇರ, ಮಹಾಜನ ಸಂಘದ ಉಪಾಧ್ಯಕ್ಷರಾದ ದಿನೇಶ್ ಎರ್ಮಾಳು, ಮೋಹನ್ ಬೇಂಗ್ರೆ, ಉದ್ಯಮಿ ಆನಂದ ಸಿ ಕುಂದರ್, ಪ್ರಧಾನ ಕಾರ್ಯದರ್ಶಿ ಶರಣ್ ಮಟ್ಟು, ಕೋಶಾಧಿಕಾರಿ ರತ್ನಾಕರ ಸಾಲ್ಯಾನ್ ಸಹಿತ ಗಣ್ಯರು ಶ್ರೀ ಶಾರದಾದೇವಿ ಮತ್ತು ನವದುರ್ಗೆಯರ ವಿಗ್ರಹಗಳಿಗೆ ಪುಷ್ಪಾರ್ಚನೆ ಗೈದರು.
ಬಳಿಕ ಮಹಾಲಕ್ಷಿದೇವಸ್ಥಾನದ ದ್ವಾರದ ಬಳಿಯಿಂದ ಹೋರಾಟ ಶೋಭಾಯಾತ್ರೆ ರಾ.ಹೆ.66ರ ಉಚ್ಚಿಲದಿಂದ ಎರ್ಮಾಳ್-ಉಚ್ಚಿಲ-ಮೂಳೂರು ಕೊಪ್ಪಲಂಗಡಿ ಮಾರ್ಗವಾಗಿ ಕಾಪು ಬೀಚ್(ದೀಪಸ್ತಂಭದ ಬಳಿ)ಗೆ ಸಮಾಪನಗೊಂಡಿತು.
ಬೃಹತ್ ಗಂಗಾರತಿ
ಮೆರವಣಿಗೆಯು ಕಾಪು ಕೊಪ್ಪಲಂಗಡಿ ಬೀಚ್ ತಲುಪಿದ ಬಳಿಕ ಕಾಶಿ ಗಂಗಾರತಿ ಮಾದರಿಯಲ್ಲಿ 10 ಬೃಹತ್ ಆರತಿಗಳೊಂದಿಗೆ ಮಹಾ ಮಂಗಳಾರತಿ ನಡೆಯಿತು. ವಿಗ್ರಹಗಳ ವಿಸರ್ಜನಾ ಪೂರ್ವದಲ್ಲಿ ಹತ್ತು ಸಾವಿರ ಸುಮಂಗಲೆಯರಿಂದ ಸಾಮೂಹಿಕ ಮಹಾ ಮಂಗಳಾರತಿ ನೆರವೇರಿತು. ಬಳಿಕ ಸಮುದ್ರ ಮಧ್ಯೆ ವಿಗ್ರಹಗಳ ಜಲಸ್ತಂಭನ ಕಾರ್ಯ ನಡೆಯಿತು. ಈ ವೇಳೆ ನೂರಾರು ದೋಣಿಗಳಿಂದ ಕೃತಕ ದೀಪ ಸೃಷ್ಟಿಸಿ, ಸುಡುಮದ್ದು ಪ್ರದರ್ಶನ ಆಯೋಜಿಸಲಾಗಿತ್ತು. ಈ ಸಂದರ್ಭ ಬೀಚ್‌ನಲ್ಲಿ ಮ್ಯೂಸಿಕಲ್ ನೈಟ್ ಕಾರ್ಯಕ್ರಮ ನಡೆಯಿತು.
ಈ ಸಂದರ್ಭ ದೇವಳದ ರುವಾರಿ, ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘ ಉಚ್ಚಿಲ ಸಮಿತಿಯ ಗೌರವ ಸಲಹೆಗಾರ ನಾಡೋಜ ಡಾ. ಜಿ ಶಂಕರ್, ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಉಡುಪಿ ಶಾಸಕ ಯಶ್ಪಾಲ್ ಸುವರ್ಣ, ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ ಕೋಟ್ಯಾನ್, ಕ್ಷೇತ್ರಾಡಳಿತ ಸಮಿತಿ ಅಧ್ಯಕ್ಷ ಗಿರಿಧರ ಸುವರ್ಣ, ದಸರಾ ಸಮಿತಿ ಅಧ್ಯಕ್ಷ ವಿನಯ ಕರ್ಕೇರ, ಮಹಾಜನ ಸಂಘದ ಉಪಾಧ್ಯಕ್ಷರಾದ ದಿನೇಶ್ ಎರ್ಮಾಳು, ಮೋಹನ್ ಬೇಂಗ್ರೆ, ಪ್ರಧಾನ ಕಾರ್ಯದರ್ಶಿ ಶರಣ್ ಮಟ್ಟು, ಕೋಶಾಧಿಕಾರಿ ರತ್ನಾಕರ ಸಾಲ್ಯಾನ್ ಸಹಿತ ಗಣ್ಯರು ಉಪಸ್ಥಿತರಿದ್ದರು.
ಜಲಸ್ತಂಭನ ಸಂದರ್ಭ 250 ಜನ ಸ್ವಯಂ ಸೇವಕರು ಸಹಕರಿಸಿದ್ದರು. ದೇವಳದ ಪ್ರಬಂಧಕ ಸತೀಷ್ ಅಮೀನ್ ಪಡುಕರೆ ನಿರೂಪಿಸಿ, ವಂದಿಸಿದರು.
ಎಲ್ಲರ ಆಕರ್ಷಣಾ ಕೇಂದ್ರವಾದ ಅತ್ಯಾಕರ್ಷಕ ಟ್ಯಾಬ್ಲೋ
ಶಾರದೆ ಮತ್ತು ನವದುರ್ಗೆಯರ ವಿಗ್ರಹಗಳನ್ನೊಳಗೊಂಡ 10 ಟ್ಯಾಬೋಗಳ ಸಹಿತ ಸಾಮಾಜಿಕ ಜಾಗೃತಿ ಸಂದೇಶ ಸಾರುವ ಟ್ಯಾಬ್ಲೊಗಳು, ಭಜನೆ ತಂಡಗಳು, ತೆಯ್ಯಂ ಸಹಿತ ವಿವಿಧ ವೇಷಭೂಷಣಗಳು, ಹುಲಿ ವೇಷ, ಚೆಂಡೆ ಬಳಗ, ನಾಗಸ್ವರ ವಾದ್ಯ ಸಹಿತ ನಾಸಿಕ್ ಬ್ಯಾಂಡ್ ತಂಡಗಳು ಹಾಗೂ 50ಕ್ಕೂ ಅಧಿಕ ಟ್ಯಾಬೋ ಒಳಗೊಂಡ ಶೋಭಾಯಾತ್ರೆ ಅದ್ದೂರಿಯಾಗಿ ಸಂಪನ್ನಗೊಂಡಿತು.
ಉಡುಪಿ ಉಚ್ಚಿಲ ದಸರಾದಲ್ಲಿನ ಅಚ್ಚುಕಟ್ಟುತನಕ್ಕೆ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗಿದ್ದು, ದಸರಾ ರೂವಾರಿ ಡಾ. ಜಿ. ಶಂಕರ್, ಪ್ರಮುಖರಾದ ಜಯ ಸಿ. ಕೋಟ್ಯಾನ್ ಬೆಳ್ಳಂಪಳ್ಳಿ, ಗಿರಿಧರ ಸುವರ್ಣ, ವಿನಯ್ ಕರ್ಕೇರ ಮುಂತಾದವರ ಶ್ರಮದಿಂದ ಈ ಬಾರಿ ದಸರಾ ಯಶಸ್ವಿಯಾಗಿ ನಡೆದಿದೆ.