
ಮಾಜಿ ಸಚಿವ ಬಾಬಾ ಸಿದ್ದಿಕಿ ಹತ್ಯೆ: ಬಿಷ್ಣೋಯ್ ಗ್ಯಾಂಗ್ ಕೈವಾಡ!
ಮುಂಬೈ: ಮಹಾರಾಷ್ಟ್ರದ ಮಾಜಿ ಸಚಿವ ಮತ್ತು ಎನ್‌ಸಿಪಿಯ ಅಜಿತ್ ಪವಾರ್ ಬಣದ ನಾಯಕ ಬಾಬಾ ಸಿದ್ದಿಕಿ (66)ಅವರು ಮುಂಬೈನ ಬಾಂದ್ರಾದಲ್ಲಿ ಗುಂಡಿನ ದಾಳಿಯಿಂದ ಸಾವನ್ನಪ್ಪಿದ್ದಾರೆ. ಇವರ ಹತ್ಯೆ ಹಿಂದೆ ಬಿಷ್ಣೋಯ್ ಗ್ಯಾಂಗ್ ಕೈವಾಡ ಇದೆ ಎನ್ನಲಾಗಿದೆ.
ತೀವ್ರ ಗಾಯಗೊಂಡಿದ್ದ ಅವರನ್ನ ಕೂಡಲೇ ಆಸ್ಪತ್ರೆಗೆ ದಾಖಲಿಸತಾಗಿತ್ತಾದರೂ, ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಘಟನೆ ಬಳಿಕ ಹರಿಯಾಣದ ಕರ್ನೈಲ್ ಸಿಂಗ್ ಮತ್ತು ಉತ್ತರ ಪ್ರದೇಶದ ಧರ್ಮರಾಜ್ ಕಶ್ಯಪ್ ಎಂದು ಗುರುತಿಸಲಾದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ವಿಚಾರಣೆ ವೇಳೆ ಅವರಿಬ್ಬರೂ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ಗೆ ಸೇರಿದವರು ಎಂದು ಹೇಳಿಕೊಂಡಿದ್ದಾರೆಂದು ಪೊಲೀಸ್ ಮೂಲಗಳು ತಿಳಿಸಿವೆ. ಕಳೆದ ಒಂದು ತಿಂಗಳಿನಿಂದ ಸಿದ್ದಿಕ್‌ನ ಚಲನವಲನಗಳ ಮೇಲೆ ನಿಗಾ ಇರಿಸಿದ್ದಾಗಿಯೂ ಒಪ್ಪಿಕೊಂಡಿದ್ದಾರೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.
ಪ್ರಕರಣದ ತನಿಖೆ ಕೈಗೊಂಡಿರುವ ಮುಂಬೈ ಪೊಲೀಸರು 4 ವಿಶೇಷ ತಂಡಗಳನ್ನ ರಚಿಸಿ ತನಿಖೆ ನಡೆಸುತ್ತಿದ್ದಾರೆ. ಹರಿಯಾಣ ಹಾಗೂ ಉತ್ತರ ಪ್ರದೇಶದ ಇಬ್ಬರು ಆರೋಪಿಗಳನ್ನು ಬಂಧಿಸಿದ್ದು, 3ನೇ ಆರೋಪಿಗಾಗಿ ಶೋಧ ನಡೆಸಲಾಗುತ್ತಿದೆ. ಸಿದ್ದಿಕ್ ಅವರ ಬಗ್ಗೆ ಬೇರೊಬ್ಬರು ಮಾಹಿತಿ ನೀಡಿರುವ ಬಗ್ಗೆ ಶಂಕೆ ವ್ಯಕ್ತಪಡಿಸಿದ್ದಾರೆ. ಮುಂಬೈ ಪೊಲೀಸ್ ಕ್ರೈಂ ಬ್ರಾಂಚ್ ವಿಚಾರಣೆಯಲ್ಲಿ, ಬಂಧಿತರಿಬ್ಬರು ಕಳೆದ ಒಂದು ತಿಂಗಳಿನಿಂದ ಸಿದ್ದಿಕ್‌ನ ಚಲನವಲನಗಳ ಮೇಲೆ ನಿಗಾ ಇರಿಸಿದ್ದಾಗಿಯೂ ಒಪ್ಪಿಕೊಂಡಿದ್ದಾರೆ. ಶನಿವಾರ ರಾತ್ರಿ ಮೂವರು ಘಟನಾ ಸ್ಥಳಕ್ಕೆ ಆಟೋದಲ್ಲಿ ಬಂದು ಸಿದ್ದಿಕ್‌ಗಾಗಿ ಕಾಯುತ್ತಿದ್ದರು ಅನ್ನೋದು ಸಿಸಿಟಿವಿ ದೃಶ್ಯಾವಳಿಗಳಿಂದ ತಿಳಿದುಬಂದಿದೆ.
ಪೋಲೀಸರು ಪ್ರಕರಣವನ್ನು 2 ಆಯಾಮಗಳಿಂದ ತನಿಖೆ ನಡೆಸುತ್ತಿದ್ದಾರೆ. ಒಂದು ಬಿಷ್ಣೋಯ್ ಗ್ಯಾಂಗ್, ಮತ್ತೊಂದು ಸ್ಲಂ ಪುನರ್ವಸತಿ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿದ್ದಾರೆ. ಕೆಲ ದಿನಗಳ ಹಿಂದೆಯಷ್ಟೇ ನಟ ಸಲ್ಮಾನ್ ಖಾನ್ ಅವರಿಗೆ ಕೊಲೆ ಬೆದರಿಕೆ ಬಂದಿದ್ದರಿಂದ ಅವರಿಗೆ ವೈ ಕೆಟಗರಿ ಭದ್ರತೆ ನೀಡಲಾಗಿದೆ. ಆದರೆ ಸಿದ್ದಿಕ್ ಅವರಿಗೆ ಯಾವುದೇ ಬೆರಿಕೆಗಳೂ ಬಂದಿರಲಿಲ್ಲ ಎನ್ನಲಾಗಿದೆ. ಪ್ರಕರಣದ ತನಿಖೆ ಕುರಿತು ಕೇಂದ್ರ ಏಜೆನ್ಸಿಗಳು ಮುಂಬೈ ಪೊಲೀಸರೊಂದಿಗೆ ಸಂಪರ್ಕದಲ್ಲಿದ್ದು, ಗುಜರಾತ್ ಮತ್ತು ದೆಹಲಿಯ ಪೊಲೀಸರು ಕೂಡ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.
ಡಜನ್ ಗಟ್ಟಲೇ ಕ್ರಿಮಿನಲ್ ಮೊಕದ್ದಮೆಗಳನ್ನು ಎದುರಿಸುತ್ತಿರುವ ಲಾರೆನ್ಸ್ ಬಿಷ್ಣೋಯ್ ಪ್ರಸ್ತುತ ಗುಜರಾತ್ ಜೈಲಿನಲ್ಲಿದ್ದಾನೆ. ಆದರೆ ಅವನ ಗ್ಯಾಂಗ್‌ನಿಂದ ಉದ್ಯಮಿಗಳು, ಪ್ರಮುಖ ವ್ಯಕ್ತಿಗಳಿಗೆ ಬೆದರಿಕೆ ಕರೆಗಳು ಬರುತ್ತಲೇ ಇವೆ. ಸದ್ಯ ಬಿಷ್ಣೋಯ್ ಗ್ಯಾಂಗ್‌ನಲ್ಲಿ 700ಕ್ಕೂ ಹೆಚ್ಚು ಶೂಟರ್‌ಗಳಿದ್ದಾರೆ. ದೇಶಾದ್ಯಂತ ಅನೇಕ ಸಣ್ಣ ಮತ್ತು ದೊಡ್ಡ ಕ್ರಿಮಿನಲ್‌ಗಳು ಅವನಿಗಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಪೊಲೀಸ್ ಮೂಲಗಳು ಸೂಚಿಸುತ್ತವೆ.
ಬಾಂದ್ರಾ ಪೂರ್ವದ ಶಾಸಕರಾಗಿರುವ ಅವರ ಪುತ್ರ ಜೀಶಾನ್ ಅವರ ಕಚೇರಿಯಲ್ಲಿ ಶನಿವಾರ ರಾತ್ರಿ 9:30ರ ಸುಮಾರಿಗೆ ಸಿದ್ದಿಕಿ ಮೇಲೆ ಮೂರು ಗುಂಡುಗಳನ್ನು ಹಾರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಇಬ್ಬರನ್ನು ವಶಕ್ಕೆ ಪಡೆಯಲಾಗಿದೆ. ಸಿದ್ದಿಕಿ ಮೇಲೆ ದುಷ್ಕರ್ಮಿಗಳು ಮೂರು ಗುಂಡುಗಳನ್ನು ಹಾರಿಸಿದ್ದರು. ಗಂಭೀರವಾಗಿ ಗಾಯಗೊಂಡಿದ್ದ ಮಾಜಿ ಸಚಿವರನ್ನು ಲೀಲಾವತಿ ಆಸ್ಪತ್ರೆಗೆ ಸಾಗಿಸಲಾಯಿತು. ಒಂದು ಗುಂಡು ಎದೆಗೆ ತಗುಲಿದ್ದರಿಂದ ಅವರು ಸಾವಿಗೀಡಾಗಿದ್ದಾರೆ.
ಬಾಂದ್ರಾ ಪಶ್ಚಿಮದಿಂದ ಮೂರು ಬಾರಿ ಶಾಸಕರಾಗಿದ್ದ ಸಿದ್ದಿಕಿ ಅವರು 48 ವರ್ಷಗಳ ಕಾಲ ಕಾಂಗ್ರೆಸ್‌ನೊಂದಿಗೆ ಗುರುತಿಸಿಕೊಂಡಿದ್ದರು. ಫೆಬ್ರವರಿಯಲ್ಲಿ ಪಕ್ಷವನ್ನು ತೊರೆದು ಅಜಿತ್ ಪವಾರ್ ಅವರ ಎನ್‌ಸಿಪಿಗೆ ಸೇರಿದ್ದರು. ಜೀಶನ್ ಸಿದ್ದಿಕಿ ಅವರನ್ನು ಆಗಸ್ಟ್‌ನಲ್ಲಿ ಕಾಂಗ್ರೆಸ್‌ನಿಂದ ಉಚ್ಛಾಟಿಸಲಾಗಿತ್ತು.