ಪುಸ್ತಕಗಳು ಗೆದ್ದಲಿಗೆ, ಮನುಷ್ಯ ಮೆದುಳು ಮೊಬೈಲಿಗೆ!!

ಪುಸ್ತಕಗಳು ಗೆದ್ದಲಿಗೆ, ಮನುಷ್ಯ ಮೆದುಳು ಮೊಬೈಲಿಗೆ!!

 
  
  ಪುಸ್ತಕಗಳನ್ನು ಓದುವುದರಲ್ಲಿ ನಾವು ಕಾಣುತ್ತಿದ್ದ ಆ ಒಂದು ಅಪ್ಯಾಯಮಾನ ಸುಖ ಇನ್ನು ಕನಸು ಮಾತ್ರ. ಇಂದು ಪುಸ್ತಕವನ್ನು ಓದುವವರಿಲ್ಲ. ಪ್ರಕಟವಾದ ಪುಸ್ತಕಗಳನ್ನು ಗೆದ್ದಲು ತಿನ್ನುತ್ತಿರುವಾಗ ಮನುಷ್ಯನ ಮೆದುಳನ್ನು ಮೊಬೈಲ್ ತಿನ್ನತೊಡಗಿದೆ. ಅಂಬಾನಿಯ ಡೇಟಾ ಫ್ರೀ ಮತ್ತು ಲಾಕ್ ಡೌನಿನ ಪಾತ್ರವೂ ಈ ಅವಸ್ಥೆಯಲ್ಲಿ ಬಹುಪಾಲಿದೆ. 

  ಕನ್ನಡ ಭಾಷೆಯ ಆ ಸೊಗಸಾದ ಸಾಹಿತ್ಯ, ಕವನಗಳು ಇಂದು ಯಾರಿಗೂ ಬೇಡ. ಬೆಳಿಗ್ಗೆ ಶುರುವಾದ ಮೊಬೈಲ್ ಧ್ಯಾನ ರಾತ್ರಿ ಕೊನೆಯಾಗಬೇಕಾದರೆ ಒಂದೋ ಚಾರ್ಜ್ ಮುಗಿದಿರಬೇಕು, ಅಥವಾ ಮೊಬೈಲ್ ಹಿಡಿದುಕೊಂಡ ಸ್ಥಿತಿಯಲ್ಲೇ ನಿದ್ದೆಗೆ ಜಾರಬೇಕು.  

   ಹೆಸರಾಂತ ಸಾಹಿತಿಗಳಿಂದ ಬರೆಸಿ ಪ್ರಕಟಿಸಲಾದ ಸುಮಾರು ಮೂರು ಲಕ್ಷ ರೂ. ಮೌಲ್ಯದ ವಿವಿಧ ಉತ್ತಮ ಪುಸ್ತಕಗಳು ನನ್ನ ಬಳಿ ಸ್ಟಾಕ್ ಇವೆ. ಈ ಬಗ್ಗೆ ಸೋಶಿಯಲ್ ಮೀಡಿಯಾಗಳಲ್ಲಿ ಆಫರ್ ಕೊಟ್ಟರೂ ಫಲ ಸೊನ್ನೆ. ನನ್ನಲ್ಲಿ ಉಳಿದಿರುವ ಪುಸ್ತಕಗಳ ಮೂರು ಲಕ್ಷ ರೂ. ನನಗೆ ನಷ್ಟ ಎಂಬ ನೆಲೆಯಲ್ಲಲ್ಲ ಈ ಬರಹ ಬರೆಯುತ್ತಿರುವುದು. ಮಾರಾಟವಾಗಿದ್ದ ಪುಸ್ತಕಗಳಲ್ಲಿ ನಾನು ಹಾಕಿದ್ದ ಅಸಲು ನನಗೆ ಬಂದಿರಬಹುದು.
 ಆದ್ದರಿಂದ  ನನ್ನಲ್ಲಿ ಉಳಿದ  ಪುಸ್ತಕಗಳ ಹಣ ನನಗೆ ನಷ್ಟ ಅನ್ನುವಂತಿಲ್ಲವಾದ್ದರಿಂದ ಆ ಬೇಸರ ನನಗಿಲ್ಲ. ಪುಸ್ತಕ ಓದುವ ಹವ್ಯಾಸ ಜನರಿಂದ ಈ ಪರಿಯಾಗಿ ಮಾಯವಾದರೆ ಕನ್ನಡ ಭಾಷೆ, ಸಾಹಿತ್ಯದ ಭವಿಷ್ಯವೇನು ಎಂಬುದೇ ನನ್ನ ಚಿಂತೆ. ಮಕ್ಕಳೆಲ್ಲ ಆಂಗ್ಲ ಮಾಧ್ಯಮಗಳಲ್ಲಿ ಓದಿ ಕನ್ನಡದಿಂದ ದೂರವಾದರೆ ಪುಸ್ತಕ ಓದಿ  ಬೆಳೆದ ಹಳೆ ತಲೆಮಾರಿನವರೂ ಕೂಡಾ ಮೊಬೈಲಿಗೆ ಅಡಿಕ್ಟಾಗಿ ಓದಿಗೆ ತಿಲಾಂಜಲಿ ಇಟ್ಟಿದ್ದಾರೆ.  

  ಮಂಗಳೂರಿನ ಪ್ರಖ್ಯಾತ  ಬುಕ್ ಸ್ಟಾಲ್ ಗಳಲ್ಲೊಂದಾದ ಮರ್ಸಿನ್ ಬುಕ್ ಸ್ಟಾಲ್ ನ ಮಾಲಕರಾದ ಬಹು: ಮುಹಮ್ಮದ್ ಮದನಿ ಉಸ್ತಾದರು ಮೊನ್ನೆ ಉಳ್ಳಾಲದ ದರ್ಗಾ ಶರೀಫ್ ನಲ್ಲಿ  ಕಾಣ ಸಿಕ್ಕಿದರು.  ಮೂರು ದಶಕಗಳಿಂದ ಸುನ್ನಿ ಸಾಹಿತ್ಯ ರಂಗಕ್ಕೆ ಸಾರಸ್ವತ ಸೇವೆ ಸಲ್ಲಿಸುತ್ತಾ ಬಂದಿರುವ ಅವರು ಕನ್ನಡ ಸುನ್ನಿ ಸಾಹಿತ್ಯ ರಂಗದಲ್ಲಿ ಅಪಾರ ಕೊಡುಗೆಯನ್ನಿತ್ತ ಮಹಾನುಭಾವರು.  ವ್ಯಾಪಾರ ಎಂಬ ದೃಷ್ಟಿಗಿಂತ ಸುನ್ನತ್ ಜಮಾಅತಿನ ಅಕ್ಷರ ಸೇವೆ ಎಂಬ ದೃಷ್ಟಿಯನ್ನಿಟ್ಟುಕೊಂಡು ಕಳೆದ  ಮೂರು ದಶಕಗಳಿಂದ ಸುನ್ನಿ- ಕನ್ನಡ ಸೇವೆಯಲ್ಲಿ ತನ್ನನ್ನು ತೊಡಗಿಸಿಕೊಂಡಿರುವ ನಿಸ್ವಾರ್ಥ, ಧೀಮಂತ ವ್ಯಕ್ತಿ.  ಸರಳ ಸಜ್ಜನಿಕೆಯ ಸಹೃದಯಿ. ಕನ್ನಡ ಸುನ್ನೀ ಸಾಹಿತ್ಯ ರಂಗದಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸಿದ ಜನಾನುರಾಗಿ. ಅವರನ್ನು ಎಲ್ಲಿ  ಕಂಡರೂ ಈ ಒಂದು ಅಭಿಮಾನದಿಂದ ನಾನು ಮಾತಾಡಿಸುತ್ತೇನೆ. ಅವರ ಉದಾತ್ತ ವ್ಯಕ್ತಿತ್ವ ಕೂಡಾ ನನಗೆ ತುಂಬಾ ಅಚ್ಚುಮೆಚ್ಚು. 

ಅವರನ್ನು ಕಂಡ ಕೂಡಲೇ ಪ್ರೀತ್ಯಾದರಗಳಿಂದ ಮಾತಾಡಿಸಿದ ನಾನು ಕೊನೆಗೆ ನನ್ನಲ್ಲಿ ಸ್ಟಾಕ್ ಇರುವ  ಪುಸ್ತಕಗಳ ಬಗ್ಗೆ ಹೇಳಿದೆ. 

" ಆ  ಪುಸ್ತಕಗಳನ್ನೆಲ್ಲ ನಿಮಗೆ ಕೊಡುತ್ತೇನೆ. ಮುಂಗಡ ದುಡ್ಡು ಬೇಕಿಲ್ಲ, ಮಾರಾಟವಾದ ನಂತರ ನೀವು ಉತ್ತಮ ಲಾಭ ಉಳಿಸಿಕೊಂಡು ನನಗೆ ಕೊಟ್ಟರೆ ಸಾಕು, ನನಗೆ ಹಣದ ವಿಷಯ ಮುಖ್ಯವಲ್ಲ, ಒಟ್ಟಾರೆ ಅಂತಹ ಅಮೂಲ್ಯ ಕನ್ನಡ ಸಾಹಿತ್ಯ ವೇಸ್ಟಾಗುತ್ತಿರುವುದನ್ನು ನನಗೆ ಸಹಿಸಲಾಗುತ್ತಿಲ್ಲ ಎಂದೆ. ಆಗ  ಆ ಬುಕ್ ಸ್ಟಾಲ್ ಮಾಲಕ ಹೇಳಿದ ಮಾತು ನನ್ನನ್ನು ದಿಗ್ಭ್ರಮೆ ಗೊಳಿಸಿತ್ತು. ಪುಸ್ತಕ ಓದುವ ಪರಿಸ್ಥಿತಿ ಇಷ್ಟರ ಮಟ್ಟಿಗೆ ಕುಸಿತ ಕಂಡಿದೆಯೆಂಬುದು ಆಗಲೇ ನನಗೆ ಗೊತ್ತಾದುದು. ಅವರು ಹೇಳಿದ ಮಾತು; 

 " ನೀವು ಮೂರು ಲಕ್ಷದ ಪುಸ್ತಕಗಳು ಉಳಿದಿರುವ ವಿಷಯ ಹೇಳ್ತೀರಲ್ಲ? ನನ್ನಲ್ಲಿ ಇಪ್ಪತ್ತೈದು ಲಕ್ಷದ ಪುಸ್ತಕಗಳು ಸ್ಟಾಕ್  ಉಳಿದಿವೆ. ನನ್ನ ಸ್ಟಾಲ್ ನಲ್ಲಿ ಈಗ ಪುಸ್ತಕಗಳು ಮಾರಾಟವಾಗುವುದಿಲ್ಲ. ಮೂರು ದಶಕಗಳಿಂದ ನಡೆಸುತ್ತಿರುವ ವ್ಯಾಪಾರವನ್ನು ನಿಲ್ಲಿಸಲು ಮನಸ್ಸಾಗದೆ ಸುಮ್ಮನೆ ಸ್ಟಾಲ್ ತೆರೆದು ಕೂರುತ್ತೇನೆ.  ಬೇರೇನಾದರೂ ಅಲ್ಲರೆ ಚಿಲ್ಲರೆ ವಸ್ತುಗಳು ಮಾರಾಟವಾಗುತ್ತವೆ. ಆದರೆ ಪುಸ್ತಕಗಳು ಯಾರಿಗೂ ಬೇಡ. ಹೆಚ್ಚಿನ ಜನ ಬುಕ್ ಸ್ಟಾಲ್ ಎಂಬ ಬೋರ್ಡ್ ಕಂಡು ಅತ್ತ ಕಾಲನ್ನೇ ಇಡದೆ
 ಹೋಗುವುದರಿಂದ ಉಪ ವಸ್ತುಗಳ ಮಾರಾಟ ಕೂಡಾ ನಡೆಯುವುದಿಲ್ಲ. ಮೊನ್ನೆ ಒಂದು ದಿನ ಬೆಳಿಗ್ಗೆ ಸ್ಟಾಲ್ ತೆರೆದು ಕೂತಿದ್ದ ನನಗೆ ಬೋಣಿಯಾದುದು ರಾತ್ರಿ ಎಂಟು ಗಂಟೆಯ ಸಮಯದಲ್ಲಿ ಅಂಗಡಿ ಮುಚ್ಚುವ ಸಂದರ್ಭದಲ್ಲಾಗಿತ್ತು!  ಬುಕ್ ಸ್ಟಾಲ್ ಅಂದರೆ ಮನುಷ್ಯರು ಕಾಲಿಡುವುದೇ ಇಲ್ಲ! ಲಾಕ್ ಡೌನ್ ತನಕ ಕೇರಳದವರು ;  ನಮ್ಮಲ್ಲಿ ಪುಸ್ತಕ ಮಾರಾಟದಲ್ಲಿ  ಕೊರತೆ ಇಲ್ಲ ಅನ್ನುತ್ತಿದ್ದರು, ಆದರೆ ಈಗ ಅವರದ್ದೂ ಇದೇ ಗೋಳು. ಮೊಬೈಲ್ ಹಾವಳಿ ಅಲ್ಲಿನವರ ತಲೆಯನ್ನು  ಇಲ್ಲಿನವರಿಗಿಂತ ತುಸು ಜಾಸ್ತಿಯೇ ತಿಂದು ಬಿಟ್ಟಿದೆ"  

  ಅವರ ಆ ಮಾತಿನಲ್ಲಿ ಕನ್ನಡ ಭಾಷೆ ಹಾಗೂ ಕರ್ನಾಟಕದ ಸುನ್ನೀ ಸಾಹಿತ್ಯ ರಂಗದ ಬಗ್ಗೆ ಜನರ ಅನಾಸ್ಥೆಯ ಬಗ್ಗೆ ಖೇದವಿತ್ತು. ಅವರ ವ್ಯಾಪಾರದ ಚಿಂತೆಗಿಂತ ಹೀಗೆ ಮುಂದುವರಿದರೆ ಸುನ್ನೀ ಕನ್ನಡ ಸಾಹಿತ್ಯದ ಭವಿಷ್ಯತ್ತಿನ ಚಿಂತೆ ಜಾಸ್ತಿಯಿತ್ತು.

   ಪುಸ್ತಕ ಎಂಬ ಒಂದು ಕಾನ್ಸೆಫ್ಟೇ ಇತಿಹಾಸ ಸೇರಲಿರುವ ಅವಸ್ಥೆಯಾಗಿದೆ ಇಂದಿನದ್ದು. ಮಕ್ಕಳ ಕೈಗೆ ಮೊಬೈಲ್  ಕೊಟ್ಟು ಅದರ ಧ್ಯಾನಕ್ಕೆ ತಳ್ಳಿ ಬಿಡುವ ಹೆತ್ತವರು ಮಕ್ಕಳ ಕಣ್ಣು , ಮೆದುಳುಗಳನ್ನು ಆಪತ್ತಿಗೆ ತಳ್ಳಿಬಿಡುವುದರ ಜೊತೆಗೆ ಭಾಷೆ, ನಾಡು ನುಡಿ ಸಂಸ್ಕೃತಿ, ಪರಂಪರೆಯನ್ನೂ ನಾಶ ಮಾಡುತ್ತಿದ್ದಾರೆ. ಸೋಶಿಯಲ್ ಮೀಡೀಯಾಗಳಲ್ಲಿ ಕಿಡಿಗೇಡಿಗಳು ಹರಡುವ ಸುಳ್ಳುಗಳು, ಥರ್ಡ್ ಕ್ಲಾಸ್ ಕಾಮಿಡಿಗಳು, ಅಗ್ಗದ ರೀಲ್ಸ್ ಗಳು, ಸೆಕ್ಸ್ ವಿಚಾರಗಳು, ಕೋಮು  ಪ್ರಚೋದನೆಗಳು ಮುಂತಾದ ಅನಿಷ್ಟಗಳೇ ಇಂದು ಆಬಾಲ ವೃದ್ಧ ಮಕ್ಕಳ ಮೆದುಳಿನ ಆಹಾರಗಳಾಗಿವೆ. ಕನ್ನಡ ಭಾಷೆಯ ಕಂಪು ಇಲ್ಲ, ಕಾವ್ಯದ ಇಂಪು ಇಲ್ಲ. ಓದುವ ತಾಜಾ  ಸಾಹಿತ್ಯದ ಸೊಗಡು ಇಲ್ಲ. ಆ ಅಪ್ಯಾಯಮಾನ ಅನುಭೂತಿ ಇಲ್ಲ. ಮಕ್ಕಳಿಗೆ ನೆನಪಿನ ಶಕ್ತಿ ಇಲ್ಲ. ಸ್ವಂತಿಕೆ ನಷ್ಟವಾಗಿ ಭ್ರಮಾ ಲೋಕದಲ್ಲಿ ತೇಲಾಡುವಂತಹ ಪರಿಸ್ಥಿತಿ. ಅಶ್ಲೀಲ, ಮಾದಕ ವ್ಯಸನಗಳ ಹೆಚ್ಚಳಕ್ಕೂ ಇದು ಕಾರಣವಾಗುತ್ತಿವೆ.  ಇದಕ್ಕೊಂದು ಪರಿಹಾರ ಮಾರ್ಗ ಮಾಡದೆ ಇದ್ದಲ್ಲಿ ಕನ್ನಡವೆಂಬ ನಮ್ಮ ತಾಯಿಭಾಷೆ ಪರಾಧೀನ ಹೊಂದುವುದರಲ್ಲಿ ಅನುಮಾನವೇ ಇಲ್ಲ.
ಡಿ.ಐ. ಅಬೂಬಕರ್ ಕೈರಂಗಳ

Ads on article

Advertise in articles 1

advertising articles 2

Advertise under the article