ಚಂದ್ರಶೇಖರನಾಥ ಸ್ವಾಮೀಜಿಗಳ ಬಾಯ್ತಪ್ಪಿದ ಮಾತು ಕ್ರಿಮಿನಲ್ ಅಪರಾಧದಂತೆ ಕಂಡಿರುವುದು ವಿಪರ್ಯಾಸ: ವಿಜಯೇಂದ್ರ
ಬೆಂಗಳೂರು: ವಿಶ್ವ ಒಕ್ಕಲಿಗ ಮಹಾ ಸಂಸ್ಥಾನ ಮಠದ ಚಂದ್ರಶೇಖರನಾಥ ಸ್ವಾಮೀಜಿ ವಿರುದ್ಧ ಕಾಂಗ್ರೆಸ್ ನೀಚ ರಾಜಕಾರಣ ಮಾಡಲು ಹೊರಟಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಕಿಡಿಕಾರಿದ್ದಾರೆ.
ಈ ಸಂಬಂಧ ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿರುವ ವಿಜಯೇಂದ್ರ, ತಮ್ಮ ಹೇಳಿಕೆಯ ಕುರಿತಂತೆ ಸೌಹಾರ್ದತೆಯನ್ನು ಪುಷ್ಠೀಕರಿಸಿ ಸೂಕ್ತ ಸ್ಪಷ್ಟನೆ ನೀಡಿ ವಿವಾದಕ್ಕೆ ಇತಿಶ್ರೀ ಹಾಡುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದಾರೆ. ಈ ಪ್ರಕರಣವನ್ನು ಇಷ್ಟಕ್ಕೇ ಕೈ ಬಿಡಬಹುದಾಗಿದ್ದ ಕಾಂಗ್ರೆಸ್ ಸರ್ಕಾರ ಸ್ವಾಮೀಜಿಗಳ ವಿರುದ್ಧ ದೂರು ದಾಖಲಾಗುವಂತೆ ನೋಡಿಕೊಂಡು ಅವರನ್ನು ವಿಚಾರಣೆಗಾಗಿ ಪೊಲೀಸ್ ಠಾಣೆಗೆ ಕರೆಯುವ ಮೂಲಕ ಸಮಾಜದ ಸ್ವಾಸ್ಥ್ಯವನ್ನು ಹಾಳು ಮಾಡುವ ನೀಚ ರಾಜಕಾರಣ ಮಾಡಲು ಹೊರಟಿದೆ ಎಂದು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ದೇಶದ್ರೋಹಿಗಳು, ಸಮಾಜ ಘಾತುಕ ಶಕ್ತಿಗಳ ವಿರುದ್ಧದ ಪ್ರಕರಣಗಳನ್ನು ಹಿಂಪಡೆಯುತ್ತಿರುವ ಕಾಂಗ್ರೆಸ್ ಸರ್ಕಾರಕ್ಕೆ ಒಬ್ಬ ಸಜ್ಜನಿಕೆಯ ಸಂತರೆಂದು ಕರೆಸಿಕೊಂಡಿರುವ ಹಿರಿಯ ಶ್ರೀಗಳ ಬಾಯ್ತಪ್ಪಿದ ಮಾತು ಕ್ರಿಮಿನಲ್ ಅಪರಾಧದಂತೆ ಕಂಡಿರುವುದು ವಿಪರ್ಯಾಸವೆನಿಸುತ್ತದೆ. ಪೂಜ್ಯ ಶ್ರೀಗಳು ತಾವು ಆಡಿದ ಮಾತುಗಳ ಕುರಿತು ಸೂಕ್ತ ಸ್ಪಷ್ಟನೆ ನೀಡಿ ಮುಸ್ಲಿಂ ಸಮುದಾಯದೊಂದಿಗಿನ ತಮ್ಮ ಬಾಂಧವ್ಯದ ಕುರಿತು ವಿವರಣೆ ನೀಡಿರುವಾಗ ಕಾಂಗ್ರೆಸ್ ಸರ್ಕಾರ ತನ್ನ ವೈಫಲ್ಯ ಹಾಗೂ ಹಗರಣಗಳನ್ನು ಮುಚ್ಚಿಕೊಳ್ಳಲು ಸಣ್ಣ ಸಣ್ಣ ಪ್ರಕರಣಗಳನ್ನೂ ದೊಡ್ಡ ವಿವಾದವನ್ನಾಗಿಸಲು ಹೊರಟು ಜನರ ದಿಕ್ಕು ಬೇರೆಡೆಗೆ ಸೆಳೆಯಲು ಪ್ರಯತ್ನಿಸುತ್ತಲೇ ಇದೆ. ಪರಮ ಪೂಜ್ಯ ಚಂದ್ರಶೇಖರನಾಥ ಶ್ರೀಗಳಿಗೆ ನೋಟೀಸ್ ನೀಡಿ ವಿಚಾರಣೆಗೆ ಕರೆದಿರುವ ಈ ಕ್ರಮವನ್ನು ರಾಜ್ಯ ಬಿಜೆಪಿ ಖಂಡಿಸುತ್ತದೆ ಎಂದು ಹೇಳಿದ್ದಾರೆ.