ಉಪಚುನಾವಣೆಯಲ್ಲಿ ಬಿಜೆಪಿ ಸೋಲಿಗೆ 'ಪೂಜ್ಯ ತಂದೆ ಮಗನೇ ನೇರ ಕಾರಣ'! ಯಡಿಯೂರಪ್ಪ ಕುಟುಂಬದ ವಿರುದ್ಧ ಆಕ್ರೋಶ ಹೊರಹಾಕಿದ ಯತ್ನಾಳ್
ಚಿಕ್ಕೋಡಿ: ರಾಜ್ಯದಲ್ಲಿ ನಡೆದ ಮೂರು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ಫಲಿತಾಂಶ ಇಂದು (ನವೆಂಬರ್ 23) ಬಂದಿದ್ದು, ಮೂರಕ್ಕೆ ಮೂರು ಕ್ಷೇತ್ರಗಳನ್ನು ಬಿಜೆಪಿ (BJP) ಸೋಲುವ ಮೂಲಕ ಹೀನಾಯ ಪ್ರದರ್ಶನ ತೋರಿದೆ ಆ ಮೂಲಕ ಬಿಜೆಪಿ ರಾಜ್ಯ ನಾಯಕತ್ವದ ಮೇಲೆ ಪ್ರಶ್ನೆಗಳು ಏಳುವ ಪರಿಸ್ಥತಿ ಎದುರಾಗಿದೆ. ಮಾತ್ರವಲ್ಲ ಮೂರು ಕ್ಷೇತ್ರಗಳಲ್ಲಿ ಗೆದ್ದಿರುವ ಕಾಂಗ್ರೆಸ್ ಗೆಲುವಿನ ಅಲೆಯಲ್ಲಿ ಬೀಗುತ್ತಿದೆ. ಈ ಕುರಿತು ಮಾತನಾಡಿದ ವಿಜಯಪುರ ಶಾಸಕ ಯತ್ನಾಳ್ ಅವರು ಮಾಜಿ ಸಿಎಂ ಯಡಿಯೂರಪ್ಪ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಉಪ ಚುನಾವಣೆಯಲ್ಲಿ ಮೂರು ಕ್ಷೇತ್ರದಲ್ಲಿ ಬಿಜೆಪಿ ಸೋಲು ವಿಚಾರವಾಗಿ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಕಬ್ಬೂರ ಗ್ರಾಮದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಮತ್ತೆ ಯಡಿಯೂರಪ್ಪ ಕುಟುಂಬದ ವಿರುದ್ದ ಆಕ್ರೋಶ ಹೊರಹಾಕಿದರು. ಬಿಜೆಪಿಯ ಹೀನಾಯ ಸೋಲು ನೀರಿಕ್ಷೆ ಮಾಡಿರಲಿಲ್ಲ, ಒಳ ಒಪ್ಪಂದದಿಂದಾಗಿ ಕರ್ನಾಟಕದ ಬಿಜೆಪಿ ಈ ಸ್ಥಿತಿಗೆ ಬಂದಿದೆ. ವಿಜಯೇಂದ್ರ ದಿಲ್ಲಿಯಲ್ಲಿ ಹೇಳಿದ್ದಾರೆ ಎಲ್ಲಾ ಬಾಗಿಲು ಬಂದ್ ಆಗಿ ಒಂದೆ ಬಾಗಿಲು ಇರಲಿದೆ ಅಂತ, ಎಲ್ಲಾ ಬಾಗಿಲು ಬಂದ್ ಆಗಿದ್ದು ನಮಗೂ ದುಃಖ ಆಗಿದೆ. ವಿಜಯೇಂದ್ರ ನೇತೃತ್ವವ ಬಿಜೆಪಿಯನ್ನು ಜನ ಒಪ್ಪಿದ್ದಾರಾ ಎಂಬುದನ್ನು ಅವರನ್ನೆ ಕೇಳಬೇಕು ಎಂದರು.
ಇನ್ನಾದರು ಹೈ ಕಮಾಂಡ್ ರಾಜ್ಯಕ್ಕೆ ಉಸ್ತುವಾರಿ ಹಾಕುವಾಗ ಯೋಚನೆ ಮಾಡಬೇಕು. ಪ್ರಾಮಾಣಿಕ ಸಂಸ್ಕಾರ ಇದ್ದವರನ್ನ ನೇಮಕ ಮಾಡಬೇಕು, ಅರುಣ ಸಿಂಗ್ ಇದ್ದರು ಯಡಿಯೂರಪ್ಪ ಕುಟುಂಬ ಸಂದೇಶ ವಾಹಕ ಆಗಿ ಕೆಲಸ ಮಾಡಿದ್ದಾರೆ. ವಿಜಯೇಂದ್ರರನ್ನ ರಾಜ್ಯಾಧ್ಯಕ್ಷರನ್ನಾಗಿ ಮಾಡಿದ್ದನ್ನು ಜನ ಸ್ಪಷ್ಟವಾಗಿ ತಿರಸ್ಕಾರ ಮಾಡಿದ್ದಾರೆ ಇದು ಸ್ಪಷ್ಟ ಸಂದೇಶ. ಇನ್ನಾದರು ಹೈಕಮಾಂಡ ಪೂಜ್ಯ ತಂದೆ ಮಗನ ಮೇಲಿನ ವ್ಯಾಮೋಹ ಬಿಡಬೇಕು ಎಂದು ಯಡಿಯೂರಪ್ಪ ಹಾಗೂ ವಿಜಯೇಂದ್ರ ವಿರುದ್ಧ ಆಕ್ರೋಶ ಹೊರಹಾಕಿದರು.
ವಕ್ಫ್ ವಿಚಾರ ಈಗ ಪ್ರಾರಂಭ ಆಗಿದೆ, ಇನ್ನೂ ಜರನ್ನ ಜಾಗೃತ ಮಾಡಬೇಕಿದೆ. ಮಹಾರಾಷ್ಟ್ರದಲ್ಲಿ ವಕ್ಫ್ ಆಧಾರದಲ್ಲೆ ಚುನಾವಣಾ ನಡೆದಿದೆ. ಮಹಾರಾಷ್ಟ್ರದಲ್ಲಿ ಬಿಜೆಪಿ ಶಿವಸೇನೆ ಬರಲ್ಲಾ ಅಂತಿದ್ದರು. ಉದ್ದವ ಠಾಕ್ರೆ ಔರಂಗಜೇಬನ ಸಮಾಧಿಗೆ ನಮಸ್ಕರಿಸಿ ಬಂದಿದ್ದಾರೆ. ಅಲ್ಲಿಗೆ ಉದ್ದವ್ ಠಾಕ್ರೆಯನ್ನ ಮಹಾರಾಷ್ಟ್ರದ ಜನರು ಓಡಿಸಿದ್ದಾರೆ. ಮಹಾರಾಷ್ಟ್ರ ಝಾರ್ಖಂಡ್ ನಲ್ಲಿ ಬಿಜೆಪಿ ಉತ್ತಮ ಸಾಧನೆ ತೋರಿದೆ. ಕರ್ನಾಟಕದಲ್ಲಿ ಹೀನಾಯ ಸೋಲಿಗೆ ಪೂಜ್ಯ ತಂದೆ ಮಗನೆ ಕಾರಣ ಎಂದು ಆಕ್ರೋಶ ಹೊರಹಾಕಿದರು.