ಅಲ್ಲು ಅರ್ಜುನ್ ಗೆ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ ಕೋರ್ಟ್! ಚಂಚಲಗೂಡ ಜೈಲಿಗೆ ನಟ!
ಹೈದರಾಬಾದ್: ಜನಪ್ರಿಯ ನಟ ಅಲ್ಲು ಅರ್ಜುನ್ ಅವರ 'ಪುಷ್ಪ-2: ದಿ ರೂಲ್' ಚಿತ್ರದ ಪ್ರದರ್ಶನದ ವೇಳೆ ಡಿಸೆಂಬರ್ 4ರಂದು ಸಂಭವಿಸಿದ ಕಾಲ್ತುಳಿತ ಘಟನೆಗೆ ಸಂಬಂಧಿಸಿದಂತೆ ಹೈದರಾಬಾದ್ ಪೊಲೀಸರು ಬಂಧಿಸಿದ್ದಾರೆ. ಹೈದರಾಬಾದ್‌ನ ಸಂಧ್ಯಾ ಥಿಯೇಟರ್‌ನಲ್ಲಿ ನಡೆದ ಈ ಘಟನೆಯಲ್ಲಿ 35 ವರ್ಷದ ಮಹಿಳೆ ಸಾವನ್ನಪ್ಪಿದ್ದಾರೆ. ಇದಾದ ಬಳಿಕ ಅಲ್ಲು ಅರ್ಜುನ್‌ನನ್ನು ನಾಂಪಲ್ಲಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಇದೀಗ ಕೋರ್ಟ್ ಅಲ್ಲು ಅರ್ಜುನ್ ಗೆ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
ವಾಸ್ತವವಾಗಿ, ಅಲ್ಲು ಅರ್ಜುನ್ ರನ್ನು ವಶಕ್ಕೆ ಪಡೆದ ಪೊಲೀಸರು ನಂತರ ನಟನಿಗೆ ವೈದ್ಯಕೀಯ ಪರೀಕ್ಷೆ ಮಾಡಿಸಿ ನಾಂಪಲ್ಲಿ ನ್ಯಾಯಾಲಯಕ್ಕೆ ಹಾಜರುಪಡಿಸಿದರು. ಬಂಧನ ಬೆನ್ನಲ್ಲೇ ಅಲ್ಲು ಅರ್ಜುನ್ ಹೈಕೋರ್ಟ್‌ನಿಂದ ತುರ್ತು ವಿಚಾರಣೆಯನ್ನು ಕೋರಲು ತನ್ನ ವಕೀಲರೊಂದಿಗೆ ಮಾತನಾಡಿದ್ದಾರೆ. ಇನ್ನು ನಟನ ಬಂಧನದ ನಂತರ ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಪ್ರತಿಕ್ರಿಯಿಸಿ, ಪ್ರಕರಣದಲ್ಲಿ ಸರ್ಕಾರದ ಯಾವುದೇ ಪಾತ್ರವಿಲ್ಲ ಮತ್ತು ಕಾನೂನು ತನ್ನ ಹಾದಿಯಲ್ಲಿ ಸಾಗುತ್ತಿದೆ ಎಂದು ಹೇಳಿದರು.
ಡಿಸೆಂಬರ್ 4ರಂದು ತಮ್ಮ ನೆಚ್ಚಿನ ನಟನನ್ನು ನೋಡಲು ಹೈದರಾಬಾದ್ ಥಿಯೇಟರ್ ಬಳಿ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳು ಜಮಾಯಿಸಿದ್ದರು. ಈ ವೇಳೆ ಕಾಲ್ತುಳಿತದಂತಹ ಪರಿಸ್ಥಿತಿ ಉಂಟಾಗಿದ್ದು, ಕಾಲ್ತುಳಿತದಿಂದಾಗಿ 35 ವರ್ಷದ ಮಹಿಳೆಯೊಬ್ಬರು ಪ್ರಾಣ ಕಳೆದುಕೊಂಡಿದ್ದರು. ಅಲ್ಲದೇ ಅವರ ಎಂಟು ವರ್ಷದ ಮಗನಿಗೆ ಉಸಿರುಗಟ್ಟಿದ ಕಾರಣ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಇನ್ನು ಮೃತಳ ಕುಟುಂಬದವರ ದೂರಿನ ಮೇರೆಗೆ ನಟ ಮತ್ತು ಅವರ ಭದ್ರತಾ ತಂಡ ಹಾಗೂ ಥಿಯೇಟರ್ ಆಡಳಿತ ಮಂಡಳಿಯ ವಿರುದ್ಧ ಚಿಕ್ಕಡಪಲ್ಲಿ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆಯ (BNS) ಅಡಿಯಲ್ಲಿ ಸೆಕ್ಷನ್ 105 ಮತ್ತು 118 (1) ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು ಎಂದು ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.