![ಉಡುಪಿಯಲ್ಲಿ ಡಿ.14ರಂದು ಲಯನ್ಸ್ ಜಿಲ್ಲೆ 317ಸಿ ಪ್ರಾಂತ್ಯ 1ರ ಪ್ರಾಂತೀಯ ಸಮ್ಮೇಳನ: ಉಮರ್ ವಿ.ಎಸ್ ಉಡುಪಿಯಲ್ಲಿ ಡಿ.14ರಂದು ಲಯನ್ಸ್ ಜಿಲ್ಲೆ 317ಸಿ ಪ್ರಾಂತ್ಯ 1ರ ಪ್ರಾಂತೀಯ ಸಮ್ಮೇಳನ: ಉಮರ್ ವಿ.ಎಸ್](https://blogger.googleusercontent.com/img/b/R29vZ2xl/AVvXsEhLgECQwVGvIKX23b2WZaELZfsUHM2qt8X0V50mZvJ-dI71jrLNifEkBn_4DnWbVfmZ_0s7YpiQBC-BbUif8o1cY2mBE3GoN4W317FucxKJ3jxkTC3UPCOz7d7IlojsOgW-EHZrDHkkKpM-EwSzP7uudm140TXnAFBlO39EGzdTfnRz0fhDKhScb1PYgFCg/w640-h360/badc7a0c-c232-4519-a348-cafa22cfc3e1.jpg)
ಉಡುಪಿಯಲ್ಲಿ ಡಿ.14ರಂದು ಲಯನ್ಸ್ ಜಿಲ್ಲೆ 317ಸಿ ಪ್ರಾಂತ್ಯ 1ರ ಪ್ರಾಂತೀಯ ಸಮ್ಮೇಳನ: ಉಮರ್ ವಿ.ಎಸ್
ಉಡುಪಿ: ಉಡುಪಿ, ಶಿವಮೊಗ್ಗ, ಚಿತ್ರದುರ್ಗ ಮತ್ತು ದಾವಣಗೆರೆ ಕಂದಾಯ ಜಿಲ್ಲೆಗಳನ್ನೊಳಗೊಂಡ ಲಯನ್ಸ್ ಜಿಲ್ಲೆ 317ಸಿ ಪ್ರಾಂತ್ಯ 1ರ ಪ್ರಾಂತೀಯ ಸಮ್ಮೇಳನ "ಬೆಸುಗೆ" ಡಿ. 14ರ ಶನಿವಾರ ಸಂಜೆ 4ಗಂಟೆಗೆ ಉಡುಪಿ ಅಂಬಾಗಿಲಿನ ಅಮೃತ್ ಗಾರ್ಡನ್ ನಲ್ಲಿ ನಡೆಯಲಿದೆ ಎಂದು ಲಯನ್ಸ್ ಜಿಲ್ಲೆ 317ಸಿ ಪ್ರಾಂತ್ಯ 1ರ ಪ್ರಾಂತ್ಯಾಧ್ಯಕ್ಷ ಉಮರ್ ವಿ. ಎಸ್ ತಿಳಿಸಿದರು.
ಉಡುಪಿ ಪತ್ರಿಕಾಭವನದಲ್ಲಿ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಸಮ್ಮೇಳನದಲ್ಲಿ ಜಿಲ್ಲೆಯಿಂದ 500ಕ್ಕೂ ಅಧಿಕ ಪ್ರತಿನಿಧಿಗಳು ಮತ್ತು ಆಹ್ವಾನಿತ ಗಣ್ಯರು ಭಾಗವಹಿಸುವ ನಿರೀಕ್ಷೆಯಿದೆ. ಆಕರ್ಷಕ ಬ್ಯಾನರ್ ಪ್ರದರ್ಶನ, ಹಿರಿಯ ಯೋಗ ತರಬೇತುದಾರರಾದ ಅಮಿತ್ ಕುಮಾರ್ ಶೆಟ್ಟಿ ಮತ್ತು ಅಖಿಲಾ ಶೆಟ್ಟಿ ಅವರಿಗೆ ಸನ್ಮಾನ ಹಾಗೂ ಅರ್ಹ ಫಲಾನುಭವಿಗಳಿಗೆ ಶಿಕ್ಷಣ ಮತ್ತು ವೈದ್ಯಕೀಯ ವೆಚ್ಚಕ್ಕೆ ಸಹಾಯಧನ ನೀಡುವ ಸೇವಾ ಚಟುವಟಿಕೆಗಳು ನಡೆಯಲಿವೆ ಎಂದರು.
ರಾಮಕೃಷ್ಣ ಪದವಿ ಕಾಲೇಜಿನ ಪ್ರಾಂಶುಪಾಲ ಎಂ. ಬಾಲಕೃಷ್ಣ ಶೆಟ್ಟಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ, ದಿಕ್ಕೂಚಿ ಭಾಷಣ ಮಾಡಲಿದ್ದಾರೆ. ಲಯನ್ಸ್ ಜಿಲ್ಲಾ ಗವರ್ನರ್ ಮಹಮ್ಮದ್ ಹನೀಫ್, ಪ್ರಥಮ ಉಪ ಜಿಲ್ಲಾ ಗವರ್ನರ್ ಸಪ್ನಾ ಸುರೇಶ್, ದ್ವಿತೀಯ ಉಪ ಜಿಲ್ಲಾ ಗವರ್ನರ್ ರಾಜೀವ ಕೋಟ್ಯಾನ್, ನಿಕಟಪೂರ್ವ ಗವರ್ನರ್ ನೇರಿ ಕರ್ನೇಲಿಯೊ, ಮಾಜಿ ಜಿಲ್ಲಾ ಗವರ್ನರ್ ಗಳಾದ ಬಸೂರು ರಾಜೀವ ಶೆಟ್ಟಿ, ಡಿ. ಶ್ರೀಧರ ಶೇಣವ, ಡಾ. ತಲ್ಲೂರು ಶಿವರಾಮ ಶೆಟ್ಟಿ ಹಾಗೂ ವಿ. ಜಿ. ಶೆಟ್ಟಿ ಮೊದಲಾದವರು ಆಗಮಿಸಲಿದ್ದಾರೆ. ಪ್ರಾಂತೀಯ ಕಾರ್ಯದರ್ಶಿ ಕೇಶವ ಅಮೀನ್ ಹಾಗೂ ಲಯನ್ ಸತೀಶ್ ಶೆಟ್ಟಿಯವರ ಅಧ್ಯಕ್ಷತೆಯ ಸಮ್ಮೇಳನ ಸಮಿತಿ ಯಶಸ್ವೀ ಸಮ್ಮೇಳನಕ್ಕಾಗಿ ಅಚ್ಚುಕಟ್ಟಿನಿಂದ ತಯಾರಿ ನಡೆಸುತ್ತಿದೆ.
ಪ್ರಾಂತ್ಯ 1ರ ವ್ಯಾಪ್ತಿಯಲ್ಲಿ ಒಟ್ಟು 14 ಕ್ಲಬ್ಬುಗಳಿದ್ದು, ರಕ್ತದಾನ ಶಿಬಿರಗಳು, ಕಣ್ಣಿನ ತಪಾಸಣಾ ಶಿಬಿರಗಳು, ಆರೋಗ್ಯ ತಪಾಸಣಾ ಶಿಬಿರಗಳು, ಅನಾಥಾಶ್ರಮ, ವೃದ್ಧಾಶ್ರಮಗಳಿಗೆ ಸಹಾಯಹಸ್ತ, ಶಾಲೆ-ಕಾಲೇಜುಗಳಿಗೆ ಉಚಿತ ಪುಸ್ತಕ, ವಾಚನಾಲಯಗಳಿಗೆ ಪುಸ್ತಕ, ಪತ್ರಿಕೆಗಳ ಕೊಡುಗೆ ಹೀಗೆ ಸುಮಾರು 50 ಲಕ್ಷ ರೂಪಾಯಿಗಳಿಗೂ ಮಿಕ್ಕಿ ಸೇವಾ ಕಾರ್ಯಗಳನ್ನು ನಡೆಸಿವೆ.
ಸುದ್ದಿಗೋಷ್ಠಿಯಲ್ಲಿ ಪ್ರಾಂತ್ಯ 1ರ ಸಮ್ಮೇಳನ ಸಮಿತಿಯ ಅಧ್ಯಕ್ಷ ಸತೀಶ್ ಶೆಟ್ಟಿ, ಕಾರ್ಯದರ್ಶಿ ಹರಿಪ್ರಸಾದ್ ರೈ, ಪ್ರಾಂತೀಯ ಕಾರ್ಯದರ್ಶಿ ಕೇಶವ ಅಮೀನ್ ಉಪಸ್ಥಿತರಿದ್ದರು.