ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ ಮುಂದುವರಿದ ಬಾಣಂತಿಯರ ಸಾವಿನ ಸರಣಿ; ಸಿಸೇರಿಯನ್ ಮಾಡಿಸಿಕೊಂಡ ಬಳಿಕ ಮತ್ತೊಬ್ಬ ಬಾಣಂತಿ ಸಾವು!
ಬಳ್ಳಾರಿ: ಜಿಲ್ಲಾಸ್ಪತ್ರೆಯಲ್ಲಿ ಬಾಣಂತಿಯರ ಸಾವಿನ ಸರಣಿ ಮುಂದುವರಿದಿದೆ. ಬಿಮ್ಸ್ ಆಸ್ಪತ್ರೆಯಲ್ಲಿ ಸಿಸೇರಿಯನ್ ಮಾಡಿಸಿಕೊಂಡ ಬಳಿಕ ಮತ್ತೋರ್ವ ಬಾಣಂತಿ ಶುಕ್ರವಾರ ಸಾವನ್ನಪ್ಪಿದ್ದಾರೆ.
ಸುಮಯಾ (25) ಮೃತ ಬಾಣಂತಿ. ಈಕೆ ಕಳೆದ 23 ದಿನಗಳಿಂದ ಬಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇಂದು (ಡಿ.5) ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ. ಈ ಪೈಕಿ ಮೃತ ಬಾಣಂತಿಯರ ಸಂಖ್ಯೆ 5ಕ್ಕೇರಿದೆ.
ಸಿಸೇರಿಯನ್ ಮಾಡಿಸಿಕೊಂಡ ಬಳಿಕ ಸುಮಯಾ ಆರೋಗ್ಯದಲ್ಲಿ ಏರುಪೇರಾಗಿತ್ತು. ಹೀಗಾಗಿ ನವೆಂಬರ್ 12 ರಂದು ಸುಮಾಯ ಅವರನ್ನ ಬಿಮ್ಸ್‌ಗೆ ರವಾನೆ ಮಾಡಲಾಗಿತ್ತು. ಈ ನಡುವೆ ಕಿಡ್ನಿ ವೈಫಲ್ಯವಾಗಿ ಸತತ ಡಯಾಲಿಸಿಸ್ ಮಾಡಲಾಗ್ತಿತ್ತು. ಆದರೂ ಚಿಕಿತ್ಸೆ ಫಲಕಾರಿಯಾಗದೇ 23 ದಿನಗಳ ಬಳಿಕ ಸುಮಯಾ ಸಾವನ್ನಪ್ಪಿದ್ದಾರೆ.
ಆರೋಗ್ಯವಾಗಿದ್ದ ಹಸುಗೂಸು ಏಕಾಏಕೀ ಸಾವು
ಗುರುವಾರ (ಡಿ.5) ಮಧ್ಯಾಹ್ನ ಬಿಮ್ಸ್ ಆಸ್ಪತ್ರೆಯಲ್ಲೇ ನವಜಾತ ಶಿಶುವೊಂದು ಸಾವನ್ನಪ್ಪಿತ್ತು. ಹೆರಿಗೆ ಬಳಿಕ ಆರೋಗ್ಯವಾಗಿದ್ದ ಮಗು ಏಕಾಏಕೀ ಮೃತಪಟ್ಟಿತ್ತು. ಈ ಬೆನ್ನಲ್ಲೇ ಓರ್ವ ಬಾಣಂತಿ ಸಾವನ್ನಪ್ಪಿರುವ ಘಟನೆ ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದೆ.
ಐವಿ ದ್ರಾವಣ ಪೂರೈಕೆ ಕಂಪನಿ ವಿರುದ್ಧ ಕೇಸ್‌ಗೆ ಸಚಿವ ದಿನೇಶ್ ಗುಂಡೂರಾವ್ ತಾಕೀತು:
ಬಳ್ಳಾರಿಯ ಜಿಲ್ಲಾಸ್ಪತ್ರೆಯಲ್ಲಿ ಬಾಣಂತಿಯರ ಸಾವಿಗೆ ಕಾರಣವಾಗಿದೆ ಎನ್ನಲಾದ ಐವಿ ದ್ರಾವಣ ಪೂರೈಕೆ ಮಾಡಿರುವ ಕಂಪನಿ ವಿರುದ್ಧ ಪ್ರಕರಣ ದಾಖಲಿಸಲು ಒಂದು ದಿನದ ಹಿಂದೆಯಷ್ಟೇ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಔಷಧಿ ನಿಯಂತ್ರಣ ಅಧಿಕಾರಿಗಳಿಗೆ ತಾಕೀತು ಮಾಡಿದ್ದರು. ಐವಿ ದ್ರಾವಣದ 22 ಬ್ಯಾಚ್‌ಗಳು ಸ್ಟಾಂಡರ್ಡ್ ಕ್ವಾಲಿಟಿ ಹೊಂದಿಲ್ಲ ಎಂಬ ವರದಿ ಹಿನ್ನೆಲೆಯಲ್ಲಿ ಕಂಪನಿಯ ವಿರುದ್ಧ ಕೇಸ್ ದಾಖಲಿಸಿ ಎಂದು ಸೂಚಿಸಿದ್ದರು. ಈ ಬೆನ್ನಲ್ಲೇ ದುರಂತ ಸಂಭವಿಸಿದೆ.