ಸಿರಿಯಾದ ಹಂಗಾಮಿ ಪ್ರಧಾನಿಯಾಗಿ ಇಂಜಿನಿಯರಿಂಗ್ ಪದವೀಧರ ಮುಹಮ್ಮದ್ ಅಲ್ ಬಶೀರ್ ನೇಮಕ

ಸಿರಿಯಾದ ಹಂಗಾಮಿ ಪ್ರಧಾನಿಯಾಗಿ ಇಂಜಿನಿಯರಿಂಗ್ ಪದವೀಧರ ಮುಹಮ್ಮದ್ ಅಲ್ ಬಶೀರ್ ನೇಮಕ

 

ಸಿರಿಯಾ: ಸಿರಿಯಾ ಅಧ್ಯಕ್ಷ ಬಶರ್ ಅಲ್ ಅಸ್ಸಾದ್‌ರನ್ನು ಅಧಿಕಾರದಿಂದ ಪದಚ್ಯುತಗೊಳಿಸಿ, ಸಿರಿಯಾದ ನಿಯಂತ್ರಣವನ್ನು ಕೈಗೆತ್ತಿಕೊಂಡ ಬಂಡುಕೋರರು ಮಾರ್ಚ್ 1ರ ತನಕ ದೇಶವನ್ನು ಮುನ್ನಡೆಸಲು ಒಂದು ಮಧ್ಯಂತರ ಸರ್ಕಾರ ಮತ್ತು ಅದರ ಮುಖ್ಯಸ್ಥರನ್ನು ನೇಮಿಸಿದ್ದಾರೆ. ಮುಹಮ್ಮದ್ ಅಲ್ ಬಶೀರ್ ಅವರು ಈ ಸ್ಥಾನಕ್ಕೆ ನೇಮಕಗೊಂಡಿದ್ದಾರೆ.

ಸಿರಿಯಾದ ಸರ್ಕಾರಿ ದೂರದರ್ಶನದ ಟೆಲಿಗ್ರಾಂ ಖಾತೆಯಲ್ಲಿ ಮೊಹಮ್ಮದ್ ಅಲ್ ಬಶೀರ್ ಅವರ ಹೇಳಿಕೆ ಪ್ರಕಟವಾಗಿದ್ದು, ಅವರ ನೇಮಕಾತಿಯನ್ನು ಖಚಿತಪಡಿಸಿದೆ. "ಜನರಲ್ ಕಮಾಂಡ್ ನಮಗೆ ಮಾರ್ಚ್ 1ರ ತನಕ ದೇಶದ ಪರಿವರ್ತನಾ ಸರ್ಕಾರದ ನೇತೃತ್ವ ವಹಿಸುವ ಜವಾಬ್ದಾರಿ ನೀಡಿದೆ ಎಂದು ಬಶೀರ್ ಹೇಳಿದ್ದಾರೆ. ಸರ್ಕಾರಿ ಮಾಧ್ಯಮ ಬಶೀರ್ ಅವರನ್ನು ನೂತನ ಸಿರಿಯನ್ ಪ್ರಧಾನಿ ಎಂದೇ ಪರಿಚಯಿಸಿದೆ. ಈ ತಾತ್ಕಾಲಿಕ ಸರ್ಕಾರ ಈ ಬದಲಾವಣೆಯ ಅವಧಿಯಲ್ಲಿ ದೇಶವನ್ನು ನಿರ್ವಹಿಸುವಲ್ಲಿ ನೆರವಾಗಲಿದೆ.

ಮಾಧ್ಯಮ ವರದಿಗಳ ಪ್ರಕಾರ, ಮುಹಮ್ಮದ್ ಅಲ್ ಬಶೀರ್ ಅವರು ಸಿರಿಯಾದ ಪ್ರಮುಖ ಬಂಡಾಯ ಗುಂಪಾದ ಹಯಾತ್ ತಹ್ರಿರ್ ಅಲ್ ಶಾಮ್ (ಎಚ್‌ಟಿಎಸ್) ಜೊತೆ ನಿಕಟ ಸಂಬಂಧ ಹೊಂದಿದ್ದಾರೆ. ಎಚ್‌ಟಿಎಸ್ ಎನ್ನುವುದು ಸಿರಿಯಾದ ಒಂದು ಮಿಲಿಟರಿ ಮೈತ್ರಿಕೂಟವಾಗಿದ್ದು, ರಾಜಧಾನಿ ಡಮಾಸ್ಕಸ್ ನಗರದ ವಶಪಡಿಸುವಿಕೆ ಸೇರಿದಂತೆ, ಸಿರಿಯನ್ ಅಂತರ್ಯುದ್ಧದಲ್ಲಿ ಮಹತ್ವದ ಪಾತ್ರ ವಹಿಸಿದೆ. ಅದರೊಡನೆ, ಮುಹಮ್ಮದ್ ಅಲ್ ಬಶೀರ್ ಅವರು ಹಿಂದೆ ಬಂಡುಕೋರ ಪಡೆಗಳು ಇದ್ಲಿಬ್ ಪ್ರಾಂತ್ಯದ ಭಾಗಗಳೂ ಸೇರಿದಂತೆ, ವಾಯುವ್ಯ ಸಿರಿಯಾದ ಭಾಗಗಳನ್ನು ನಿರ್ವಹಿಸಲು ಸ್ಥಾಪಿಸಿದ್ದ ಆಡಳಿತ ವ್ಯವಸ್ಥೆಯ ನೇತೃತ್ವವನ್ನೂ ವಹಿಸಿದ್ದರು. ಈ ಪ್ರಾಂತ್ಯ ಬಂಡುಕೋರ ಗುಂಪುಗಳ ನಿಯಂತ್ರಣದಲ್ಲಿದ್ದ ಕೊನೆಯ ದೊಡ್ಡ ಪ್ರದೇಶವಾಗಿತ್ತು.

ಸಿರಿಯಾದ ವಿರೋಧ ಪಕ್ಷಗಳಲ್ಲಿ ಪ್ರಮುಖ ವ್ಯಕ್ತಿಯಾಗಿರುವ ಮುಹಮ್ಮದ್ ಅಲ್ ಬಶೀರ್ ಅವರು ಈಗ ಅಧಿಕೃತವಾಗಿ ಸಿರಿಯಾದ ಪರಿವರ್ತನಾ ಸರ್ಕಾರದ ಚುಕ್ಕಾಣಿ ಹಿಡಿಯಲು ಆಯ್ಕೆಯಾಗಿದ್ದಾರೆ. ಸಿರಿಯಾದ ಇದ್ಲಿಬ್ ಪ್ರಾಂತ್ಯದ ಜಬಾಲ್ ಅಲ್ ಜವಿಯಾ ಪ್ರದೇಶದಲ್ಲಿ 1983ರಲ್ಲಿ ಜನಿಸಿದ ಅಲ್ ಬಶೀರ್, ತಾಂತ್ರಿಕ ಮತ್ತು ಧಾರ್ಮಿಕ ಎರಡೂ ಶಿಕ್ಷಣಗಳನ್ನು ಪಡೆದಿದ್ದು, ನಾಯಕತ್ವ ಮತ್ತು ಆಡಳಿತದ ಅನುಭವವನ್ನೂ ಹೊಂದಿದ್ದಾರೆ.

ಶೈಕ್ಷಣಿಕ ಹಿನ್ನೆಲೆ....

ಮುಹಮ್ಮದ್ ಅಲ್ ಬಶೀರ್ ಅವರು ಎರಡು ಅತ್ಯಂತ ವಿಭಿನ್ನ ಕ್ಷೇತ್ರಗಳಲ್ಲಿ ಉನ್ನತ ಶಿಕ್ಷಣ ಪಡೆದಿದ್ದಾರೆ.

• 2007ರಲ್ಲಿ ಬಶೀರ್ ಅಲೆಪ್ಪೊ ವಿಶ್ವವಿದ್ಯಾಲಯದ ಫ್ಯಾಕಲ್ಟಿ ಆಫ್ ಕಮ್ಯುನಿಕೇಶನ್ಸ್ ವಿಭಾಗದಿಂದ ಇಲೆಕ್ಟ್ರಿಕಲ್ ಇಂಜಿನಿಯರಿಂಗ್ ಪದವಿ ಪಡೆದರು.

• ಬಳಿಕ, ಬಶೀರ್ ಇದ್ಲಿಬ್ ವಿಶ್ವವಿದ್ಯಾಲಯದಿಂದ ಶರಿಯಾ ಮತ್ತು ಕಾನೂನು ಪದವಿ ಪಡೆದರು. ಇದು ಅವರು ಇಸ್ಲಾಮಿಕ್ ಅಧ್ಯಯನ ಮತ್ತು ಕಾನೂನು ವಿಚಾರಗಳಲ್ಲಿ ಹೊಂದಿದ್ದ ಆಸಕ್ತಿಯನ್ನು ಪ್ರತಿನಿಧಿಸಿತ್ತು. ತನ್ನ ಪದವಿಗಳ ಜೊತೆಗೆ, ಅಲ್ ಬಶೀರ್ ವೃತ್ತಿಪರ ತರಬೇತಿಗಳನ್ನೂ ಪಡೆದಿದ್ದಾರೆ.

• 2021ರಲ್ಲಿ ಬಶೀರ್ ಇಂಟರ್ನ್ಯಾಷನಲ್ ಅಕಾಡೆಮಿ ಆಫ್ ಟ್ರೈನಿಂಗ್, ಲ್ಯಾಂಗ್ವೇಜಸ್ ಆ್ಯಂಡ್ ಕನ್ಸಲ್ಟಿಂಗ್ ಸಂಸ್ಥೆಯಿಂದ ಯೋಜನಾ ನಿರ್ವಹಣಾ ಪ್ರಮಾಣಪತ್ರ ಪಡೆದಿದ್ದಾರೆ.

• ಅದೇ ವರ್ಷ ಬಶೀರ್ ಪ್ಲಾನಿಂಗ್ ಸ್ಕಿಲ್ಸ್ ಆ್ಯಂಡ್ ಅಡ್ಮಿನಿಸಿಟ್ರೇಟಿವ್ ಆರ್ಗನೈಸೇಷನ್ ಪ್ರಮಾಣಪತ್ರ ಪಡೆದಿದ್ದು, ಅವರ ನಿರ್ವಹಣಾ ಸಾಮರ್ಥ್ಯವನ್ನು ಪ್ರದರ್ಶಿಸಿದೆ.

ವೃತ್ತಿಜೀವನದ ಹಾದಿ: ಅಲ್ ಬಶೀರ್ ಕಳೆದ ವರ್ಷಗಳಲ್ಲಿ ತಾಂತ್ರಿಕ ಮತ್ತು ಆಡಳಿತ ವಿಭಾಗಗಳಲ್ಲಿ ವಿವಿಧ ಪಾತ್ರಗಳನ್ನು ನಿರ್ವಹಿಸಿದ್ದಾರೆ.

• ಸಿರಿಯನ್ ಗ್ಯಾಸ್ ಕಂಪನಿ: 2011ರಲ್ಲಿ, ಬಶೀರ್ ಸಿರಿಯನ್ ಗ್ಯಾಸ್ ಕಂಪನಿಯಲ್ಲಿ ಪ್ರಿಸಿಷನ್ ಇನ್ಸ್ಟ್ರುಮೆಂಟೇಶನ್ ವಿಭಾಗದ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸಿ, ತನ್ನ ಇಂಜಿನಿಯರಿಂಗ್ ಪ್ರಾವೀಣ್ಯತೆಯನ್ನು ಪ್ರದರ್ಶಿಸಿದ್ದರು.

• ಅಲ್ ಅಮಲ್ ಶೈಕ್ಷಣಿಕ ಸಂಸ್ಥೆ: ಅಲ್ ಅಮಲ್ ಶೈಕ್ಷಣಿಕ ಸಂಸ್ಥೆಯ ನಿರ್ದೇಶಕರಾಗಿಯೂ ಕಾರ್ಯಾಚರಿಸಿರುವ ಬಶೀರ್, ಶೈಕ್ಷಣಿಕ ವಲಯಕ್ಕೂ ಕೊಡುಗೆ ನೀಡಿದ್ದಾರೆ.

• ದತ್ತಿ ಸಚಿವಾಲಯ: ಅಲ್ ಬಶೀರ್ ಶರಿಯಾ ಶಿಕ್ಷಣ ನಿರ್ದೇಶಕರಾಗಿ, ಧಾರ್ಮಿಕ ಮತ್ತು ಶೈಕ್ಷಣಿಕ ಕಾರ್ಯಕ್ರಮಗಳತ್ತ ಗಮನ ಹರಿಸಿದ್ದರು.

ಇದ್ಲಿಬ್‌ನಲ್ಲಿ ಜಾರಿಯಲ್ಲಿದ್ದ ವಿರೋಧ ಪಕ್ಷ, ಸಂಘಟನೆಗಳ ಸಾಲ್ವೇಶನ್ ಗವರ್ನಮೆಂಟ್‌ನಲ್ಲಿ ತೊಡಗಿಸಿಕೊಂಡಿದ್ದು ಬಶೀರ್ ಅವರಿಗೆ ಆಡಳಿತದಲ್ಲಿ ಹೆಚ್ಚಿನ ಅನುಭವ ನೀಡಿದೆ.

• ಸಾಲ್ವೇಶನ್ ಗವರ್ನಮೆಂಟ್‌ನಲ್ಲಿ ಅವರು ಮಾನವೀಯ ವ್ಯವಹಾರಗಳ ಅಭಿವೃದ್ಧಿ ಸಚಿವರಾಗಿ ಕಾರ್ಯ ನಿರ್ವಹಿಸಿದ್ದು, ಸಹಾಯ ಧನ ಮತ್ತು ಅಭಿವೃದ್ಧಿ ಯೋಜನೆಗಳ ನಿರ್ವಹಣೆಯ ಜವಾಬ್ದಾರಿ ಹೊಂದಿದ್ದರು.

ಬಳಿಕ ಬಶೀರ್ ಅದೇ ಸಚಿವಾಲಯದಲ್ಲಿ ಡೈರೆಕ್ಟರ್ ಆಫ್ ಅಸೋಸಿಯೇಷನ್ ಅಫೇರ್ಸ್ ಜವಾಬ್ದಾರಿ ಹೊಂದಿ, ವಿವಿಧ ಸಂಸ್ಥೆಗಳ ಜೊತೆಗಿನ ಸಹಯೋಗದ ಮೇಲ್ವಿಚಾರಣೆ ನಡೆಸಿದ್ದರು.

ಇತ್ತೀಚಿನ ನಾಯಕತ್ವದ ಜವಾಬ್ದಾರಿ: ಜನವರಿ 2024ರಲ್ಲಿ, ಇದ್ಲಿಬ್ ಪ್ರಾಂತ್ಯದ ಸಾಲ್ವೇಶನ್ ಗವರ್ನಮೆಂಟಿನ ಶುರಾ ಸಮಿತಿ ಅಲ್ ಬಶೀರ್ ಅವರನ್ನು ತನ್ನ ಪ್ರಧಾನ ಮಂತ್ರಿಯಾಗಿ ಆಯ್ಕೆ ಮಾಡಿತು. ಈ ಸ್ಥಾನ ಸಿರಿಯಾದ ವಿರೋಧ ಪಕ್ಷದಲ್ಲಿ ಅಲ್ ಬಶೀರ್ ಅವರಿಗಿದ್ದ ಪ್ರಮುಖ ಸ್ಥಾನವನ್ನು ಇನ್ನಷ್ಟು ಬಲಪಡಿಸಿತು. ಈಗ ಬಶೀರ್ ಅವರ ಹೆಗಲಿಗೆ ಸಿರಿಯಾದ ಪರಿವರ್ತನಾ ಸರ್ಕಾರದ ಜವಾಬ್ದಾರಿಯನ್ನೂ ವಹಿಸಲಾಗಿದೆ.

ಸಾಲ್ವೇಶನ್ ಗವರ್ನಮೆಂಟ್: ಸಾಲ್ವೇಶನ್ ಗವರ್ನಮೆಂಟ್ ಎನ್ನುವುದು ಸಿರಿಯಾದ ವಾಯುವ್ಯ ಭಾಗದಲ್ಲಿ, ಮುಖ್ಯವಾಗಿ ಇದ್ಲಿಬ್ ಪ್ರಾಂತ್ಯದಲ್ಲಿ ವಿರೋಧ ಪಕ್ಷಗಳು, ಬಂಡುಕೋರ ಸಂಘಟನೆಗಳ ನಿಯಂತ್ರಣದಲ್ಲಿದ್ದ ಪ್ರದೇಶಗಳ ಆಡಳಿತ ನಿರ್ವಹಿಸುತ್ತಿತ್ತು. ಈ ಸರ್ಕಾರ ಸಾರ್ವಜನಿಕರಿಗೆ ಅವಶ್ಯಕವಾದ ಶಿಕ್ಷಣ, ಆರೋಗ್ಯದಂತಹ ಮೂಲಭೂತ ವ್ಯವಸ್ಥೆಗಳನ್ನು ಒದಗಿಸುತ್ತಿತ್ತಾದರೂ, ಹಯಾತ್ ತಹ್ರಿರ್ ಅಲ್ ಶಮಾಮ್ (ಎಚ್‌ಟಿಎಸ್) ‌ಜೊತೆಗೆ ನಿಕಟ ಸಂಬಂಧವನ್ನು ಹೊಂದಿದ್ದಕ್ಕಾಗಿ ಟೀಕೆಗಳಿಗೂ ಗುರಿಯಾಗಿತ್ತು. ಸವಾಲುಗಳ ನಡುವೆಯೂ, ಸಾಲ್ವೇಶನ್ ಗವರ್ನಮೆಂಟ್ ಅಂತರ್ಯುದ್ಧದ ಸಂದರ್ಭದಲ್ಲಿ ಈ ಪ್ರದೇಶಗಳ ಮುಖ್ಯ ಆಡಳಿತಗಾರನಾಗಿ ಮುಂದುವರಿದಿದೆ.

ಎಚ್‌ಟಿಎಸ್ ಅಧ್ಯಕ್ಷ: ಅಬು ಮೊಹಮ್ಮದ್ ಅಲ್ ಜುಲಾನಿ ಎಚ್‌ಟಿಎಸ್ ಮುಖ್ಯಸ್ಥನಾಗಿದ್ದು, ಗುಂಪಿನ ಕಾರ್ಯಾಚರಣೆ ಮತ್ತು ವಾಯುವ್ಯ ಸಿರಿಯಾದ ಮೇಲಿನ ಅದರ ಪ್ರಭಾವವನ್ನು ನಿರ್ವಹಿಸುತ್ತಾರೆ.

ಮುಹಮ್ಮದ್ ಅಲ್ ಬಶೀರ್ ಆಯ್ಕೆ ಯಾಕೆ ಮುಖ್ಯವಾಗಿದೆ?

ಮುಹಮ್ಮದ್ ಅಲ್ ಬಶೀರ್ ಇಂಜಿನಿಯರಿಂಗ್, ಧಾರ್ಮಿಕ ವಿದ್ಯಾಭ್ಯಾಸ ಹೊಂದಿದ್ದು, ಆಡಳಿತ ಅನುಭವವನ್ನೂ ಗಳಿಸಿದ್ದಾರೆ. ಸಿರಿಯಾದಲ್ಲಿ ಪ್ರಸ್ತುತ ನಡೆಯುತ್ತಿರುವ ಬದಲಾವಣೆಯ ಅವಧಿಯಲ್ಲಿ ಈ ಸಾಮರ್ಥ್ಯಗಳು ಮುಖ್ಯವಾಗಿವೆ. ತಾಂತ್ರಿಕ ಮತ್ತು ಮಾನವೀಯ ಪಾತ್ರಗಳಲ್ಲಿ ಅವರ ಅನುಭವಗಳು ಇಂತಹ ಸಂಕೀರ್ಣ, ಸೂಕ್ಷ್ಮ ಅವಧಿಯಲ್ಲಿ ದೇಶವನ್ನು ಮುನ್ನಡೆಸಲು ಬಶೀರ್ ಅವರನ್ನು ಉತ್ತಮ ಆಯ್ಕೆಯನ್ನಾಗಿಸಿದೆ. ಅವರ ನಾಯಕತ್ವ ಸರ್ಕಾರಿ ಸಂಸ್ಥೆಗಳ ಪುನರ್ ನಿರ್ಮಾಣ, ಮಾನವೀಯ ಅವಶ್ಯಕತೆಗಳ ಪೂರೈಕೆ, ಹಾಗೂ ಸ್ಥಿರತೆಯತ್ತ ಸಿರಿಯಾ ಸಾಗುವ ಹಾದಿಯ ನಿರ್ವಹಣೆಯಂತಹ ಜವಾಬ್ದಾರಿಗಳನ್ನು ಹೊಂದಿರುವ ನಿರೀಕ್ಷೆಗಳಿವೆ.

Ads on article

Advertise in articles 1

advertising articles 2

Advertise under the article