ಮದುವೆಯಾದ ನಾಲ್ಕನೇ ದಿನವೇ ಪ್ರಿಯಕರನ ಜತೆಗೂಡಿ ಪತಿಯನ್ನು ಹತ್ಯೆ ಮಾಡಿದ ಪತ್ನಿ! ಗುಜರಾತಿನಲ್ಲಿ ಪ್ರೀತಿಯ ಹೆಸರಿನಲ್ಲಿ ನಡೆಯಿತು ಅಮಾಯಕನೊಬ್ಬನ ಬಲಿ

ಮದುವೆಯಾದ ನಾಲ್ಕನೇ ದಿನವೇ ಪ್ರಿಯಕರನ ಜತೆಗೂಡಿ ಪತಿಯನ್ನು ಹತ್ಯೆ ಮಾಡಿದ ಪತ್ನಿ! ಗುಜರಾತಿನಲ್ಲಿ ಪ್ರೀತಿಯ ಹೆಸರಿನಲ್ಲಿ ನಡೆಯಿತು ಅಮಾಯಕನೊಬ್ಬನ ಬಲಿ

ಗಾಂಧಿನಗರ: ಮದುವೆಯಾದ ನಾಲ್ಕನೇ ದಿನವೇ ಪ್ರಿಯಕರನ ಜತೆಗೂಡಿ ಪತಿಯನ್ನು ಪರಲೋಕಕ್ಕೆ ಕಳಿಸಿದ ಪತ್ನಿಯನ್ನು ಗುಜರಾತ್‌ನ ಗಾಂಧಿನಗರ ಪೊಲೀಸರು ಭಾನುವಾರ ಬಂಧಿಸಿದ್ದಾರೆ. 

ಮೃತ ಮದುಮಗನನ್ನು ಅಹಮದಾಬಾದ್‌ ನಿವಾಸಿ ಭವಿಕ್‌ ಎಂದು ಗುರುತಿಸಲಾಗಿದೆ. ಕೊಲೆಗಾತಿ ಪತ್ನಿ ಪಾಯಲ್‌ ಮತ್ತು ಅಕೆಯ ಪ್ರಿಯಕರ ಕಲ್ಪೇಶ್‌ ಸೇರಿದಂತೆ ನಾಲ್ವರು ಹಂತಕರನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ವಿವಿಧ ಸೆಕ್ಷನ್‌ ಅಡಿಯಲ್ಲಿ ಅಪಹರಣ, ಕೊಲೆ ಪ್ರಕರಣ ದಾಖಲಿಸಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ನಾಲ್ಕು ದಿನಗಳ ಹಿಂದಷ್ಟೇ ಭವಿಕ್‌ ಹಾಗೂ ಪಾಯಲ್‌ ಅವರ ವಿವಾಹ ನೆರವೇರಿತ್ತು. ತವರು ಮನೆಯಲ್ಲಿದ್ದ ಪತ್ನಿಯನ್ನು ಕರೆದುಕೊಂಡು ಬರಲು ಗಾಂಧಿನಗರದಲ್ಲಿ ಇರುವ ಮಾವನ ನಿವಾಸಕ್ಕೆ ಶನಿವಾರ ಭವಿಕ್‌ ಹೊರಟಿದ್ದರು. ಪತಿ ಆಗಮನದ ಸುದ್ದಿ ತಿಳಿದ ಪತ್ನಿ ಪಾಯಲ್‌, ಆತ ಇರುವ ಸ್ಥಳದ ಮಾಹಿತಿ ಪಡೆದುಕೊಂಡು ಪ್ರಿಯಕರ ಕಲ್ಪೇಶ್‌ಗೆ ರವಾನಿಸಿದ್ದಳು. ಮೂವರು ಸ್ನೇಹಿತರ ಜತೆಗೂಡಿ ಕಾರಿನಲ್ಲಿ ಹಿಂಬಾಲಿಸಿದ ಕಲ್ಪೇಶ್‌, ಭವಿಕ್‌ ಪ್ರಯಾಣಿಸುತ್ತಿದ್ದ ಬೈಕ್‌ಗೆ ಹಿಂಬದಿಯಿಂದ ಡಿಕ್ಕಿ ಹೊಡೆದು ಬೀಳಿಸಿದ್ದಾನೆ. ಬಳಿಕ ಮದುಮಗನನ್ನು ಅಪಹರಿಸಿದ ಹಂತಕರು, ಕೊಲೆಗೈದು ನರ್ಮದಾ ನದಿ ಕಾಲುವೆಗೆ ಮೃತದೇಹ ಎಸೆದು ಪರಾರಿಯಾಗಿದ್ದಾರೆ.

ಪಾಯಲ್‌ ತಂದೆ ದೂರು

ರಾತ್ರಿಯಾದರೂ ಅಳಿಯ ಮನೆಗೆ ಬಾರದಿದ್ದಾಗ ಆತಂಕಗೊಂಡ ಮಾವ, ಭವಿಕ್‌ ತಂದೆಗೆ ಕರೆ ಮಾಡಿ ವಿಚಾರಿಸಿದ್ದಾರೆ. ಬೈಕ್‌ನಲ್ಲಿ ಮಧ್ಯಾಹ್ನವೇ ನಿಮ್ಮ ಮನೆಗೆ ಹೊರಟಿದ್ದರು ಎಂದು ಅವರು ತಿಳಿಸಿದ್ದರು. ಕೂಡಲೇ ಪಾಯಲ್‌ಳ ತಂದೆ ಹಾಗೂ ಕುಟುಂಬದವರು ಭವಿಕ್‌ಗಾಗಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹುಡುಕಾಟ ನಡೆಸಿದ್ದಾರೆ. ಶೋಧದ ವೇಳೆ, ಭವಿಕ್‌ ಪ್ರಯಾಣಿಸಿದ್ದ ಬೈಕ್‌ ರಸ್ತೆ ಬದಿಯಲ್ಲಿ ಪತ್ತೆಯಾಗಿದೆ. ಬೈಕ್ ಓಡಿಸುತ್ತಿದ್ದ ವ್ಯಕ್ತಿಯನ್ನು ಮೂವರು ವ್ಯಕ್ತಿಗಳು, ಬೈಕ್‌ಗೆ ಡಿಕ್ಕಿ ಹೊಡೆದು ಬೀಳಿಸಿ ಅಪಹರಣ ಮಾಡಿದ್ದಾರೆ ಎಂದು ಕೆಲವು ಪ್ರತ್ಯಕ್ಷದರ್ಶಿಗಳು ಮಾಹಿತಿ ನೀಡಿದ್ದರು. ಕೂಡಲೇ ಪೊಲೀಸ್‌ ಠಾಣೆಗೆ ತೆರಳಿದ ಪಾಯಲ್‌ ತಂದೆ ದೂರು ನೀಡಿದ್ದಾರೆ.

ಪ್ರಕರಣ ದಾಖಲಿಸಿಕೊಂಡ ಪೊಲೀಸರಿಗೆ, ಭವಿಕ್ ಮದುವೆಯಾಗಿ ಕೇವಲ ನಾಲ್ಕು ದಿನದಲ್ಲಿ ಅಪಹರಣ ನಡೆಸಿದೆ ಎನ್ನುವುದು ಅನುಮಾನ ಮೂಡಿಸಿದೆ. ಪತ್ನಿ ಪಾಯಲ್‌ ಬಗ್ಗೆ ಸಂಶಯಗೊಂಡ ಪೊಲೀಸರು ತೀವ್ರ ವಿಚಾರಣೆ ನಡೆಸಿದಾಗ ಅಪಹರಣ ಮತ್ತು ಕೊಲೆಯ ರಹಸ್ಯ ಬಯಲಾಗಿದೆ.

''ಸೋದರ ಸಂಬಂಧಿ ಕಲ್ಪೇಶ್‌ನನ್ನು ಪ್ರೀತಿಸುತ್ತಿದ್ದೆ. ಮನೆಯವರ ಒತ್ತಾಯಕ್ಕೆ ಮಣಿದು ಭವಿಕ್‌ನನ್ನು ಮದುವೆಯಾಗಿದ್ದೆ. ಪ್ರಿಯಕರನಿಂದ ದೂರವಾಗಲು ಇಷ್ಟವಿಲ್ಲದ ಕಾರಣ ಪತಿಯನ್ನು ಕೊಲೆ ಮಾಡಿಸಿದ್ದೇನೆ.'' ಎಂದು ಪಾಯಲ್‌ ವಿಚಾರಣೆ ವೇಳೆ ತಪ್ಪೊಪ್ಪಿಕೊಂಡಿದ್ದಾಳೆ. ಆಕೆ ನೀಡಿದ ಮಾಹಿತಿ ಆಧಾರದಲ್ಲಿ ಉಳಿದ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

Ads on article

Advertise in articles 1

advertising articles 2

Advertise under the article