ಸಚಿವ ಸ್ಥಾನ ಸಿಗದ್ದಕ್ಕೆ ಆಕ್ರೋಶ; ಪಕ್ಷಕ್ಕೆ ರಾಜೀನಾಮೆ ನೀಡಿದ ಶಿವಸೇನಾ ಶಾಸಕ
ಮುಂಬೈ: ಮಹಾರಾಷ್ಟ್ರ ಸರಕಾರದಲ್ಲಿ ಮಂತ್ರಿ ಸ್ಥಾನ ನೀಡದ್ದಕ್ಕೆ ಶಿವಸೇನೆಯ ಏಕನಾಥ್ ಶಿಂಧೆ ಬಣದ ಶಾಸಕರು ಪಕ್ಷಕ್ಕೆ ರಾಜೀನಾಮೆ ನೀಡಿ ಆಕ್ರೋಶ ಹೊರಹಾಕಿದ್ದಾರೆ.
ಶಿವಸೇನೆಯ ಮೂರು ಬಾರಿ ಶಾಸಕರಾಗಿದ್ದ ನರೇಂದ್ರ ಭೋಂಡೇಕರ್ ಅವರಿಗೆ ಸಚಿವ ಸ್ಥಾನದ ಭರವಸೆ ನೀಡಲಾಗಿತ್ತು. ಆದರೆ ಅವರಿಗೆ ಸಂಪುಟದಲ್ಲಿ ಸ್ಥಾನ ಸಿಗಲಿಲ್ಲ. ಇದರಿಂದ ಸಿಟ್ಟಾದ ಭೋಂಡೇಕರ್ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ.
ಭಂಡಾರ-ಪಾವನಿ ವಿಧಾನಸಭಾ ಕ್ಷೇತ್ರದ ಶಾಸಕರಾಗಿರುವ ಇವರು ಭೋಂಡೇಕರ್ ಪಕ್ಷಕ್ಕೆ ಮಾತ್ರ ರಾಜೀನಾಮೆ ನೀಡಿದ್ದು ವಿಧಾನಸಭಾ ಕ್ಷೇತ್ರಕ್ಕೆ ರಾಜೀನಾಮೆ ನೀಡಿಲ್ಲ.
ನರೇಂದ್ರ ಭೋಂಡೇಕರ್ ಅವರು ಶಿವಸೇನೆಯ ಉಪನಾಯಕ ಮತ್ತು ವಿದರ್ಭದ ಪಕ್ಷದ ಸಂಯೋಜಕರಾಗಿದ್ದರು. ಅಲ್ಲಿ ಬಿಜೆಪಿ ನೇತೃತ್ವದ ಆಡಳಿತಾರೂಢ ಮಹಾಯುತಿ ಮೈತ್ರಿಕೂಟ 62 ಸ್ಥಾನಗಳಲ್ಲಿ 47 ಸ್ಥಾನಗಳನ್ನು ಗೆದ್ದುಕೊಂಡಿತ್ತು.
ಭಾನುವಾರ 39 ಮಂದಿ ಶಾಸಕರು ಮಹಾರಾಷ್ಟ್ರದ ಮಹಾಯುತಿ ಸರ್ಕಾರದ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದರು. ನಾಗ್ಪುರದ ರಾಜಭವನದಲ್ಲಿ ನಡೆದ ಈ ಸಮಾರಂಭದಲ್ಲಿ 33 ಮಂದಿ ಕ್ಯಾಬಿನೆಟ್ ಸಚಿವರಾಗಿ 6 ಮಂದಿ ರಾಜ್ಯ ಸಚಿವರಾಗಿ ಸಿಎಂ ದೇವೇಂದ್ರ ಫಡ್ನವೀಸ್ ಸಂಪುಟಕ್ಕೆ ಸೇರ್ಪಡೆಯಾದರು.
ಮಹಾಯುತಿಯಲ್ಲಿ ಅತಿ ದೊಡ್ಡ ಪಕ್ಷವಾದ ಬಿಜೆಪಿ 16 ಕ್ಯಾಬಿನೆಟ್ ಸ್ಥಾನ ಪಡೆದುಕೊಂಡರೆ, ಶಿವಸೇನೆ 9, ಎನ್‌ಸಿಪಿ 8 ಸ್ಥಾನ ಪಡೆದುಕೊಂಡಿದೆ. ಬಿಜೆಪಿಯ ಮೂವರು, ಶಿವಸೇನೆಯ ಇಬ್ಬರು ಮತ್ತು ಎನ್‌ಸಿಪಿಯ ಒಬ್ಬರು ರಾಜ್ಯ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು.
ಮಹಾರಾಷ್ಟ್ರ ವಿಧಾನಸಭೆಯ 288 ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ ಮಹಾಯುತಿ ಒಕ್ಕೂಟ ಜಯಭೇರಿ ಭಾರಿಸಿತ್ತು. ಬಿಜೆಪಿ 132, ಏಕನಾಥ್ ಶಿಂದೆ ನೇತೃತ್ವದ ಶಿವಸೇನೆ 57, ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ 41 ಸ್ಥಾನಗಳನ್ನು ಗೆದ್ದುಕೊಂಡಿತ್ತು.