ಹೂಡೆ ಸಾಲಿಹಾತ್ ಸಮೂಹ ಶಿಕ್ಷಣ ಸಂಸ್ಥೆಯ ಪ್ರಥಮ ದರ್ಜೆ ಕಾಲೇಜಿನ ನೂತನ ಕಟ್ಟಡ ಉದ್ಘಾಟಿಸಿದ ಸೈಯದ್ ಸಾದತುಲ್ಲಾ ಹುಸೈನಿ; ಯಶಸ್ವಿಯಾಗಿ ನಡೆದ “ಉಜ್ವಲ ಭವಿಷ್ಯಕ್ಕಾಗಿ” ಸಾಮುದಾಯಿಕ ಸಮಾವೇಶ
Sunday, December 1, 2024
ಉಡುಪಿ: ಹೂಡೆ ಸಾಲಿಹಾತ್ ಸಮೂಹ ಶಿಕ್ಷಣ ಸಂಸ್ಥೆಗಳ ಅಧೀನ ಸಂಸ್ಥೆಯಾಗಿರುವ ಸಾಲಿಹಾತ್ ಪ್ರಥಮ ದರ್ಜೆ ಕಾಲೇಜಿನ ನೂತನ ಕಟ್ಟಡವನ್ನು ಶನಿವಾರ ಜಮಾಅತೆ ಇಸ್ಲಾಮಿ ಹಿಂದ್ ಇದರ ಅಖಿಲ ಭಾರತ ಅಧ್ಯಕ್ಷ ಸೈಯದ್ ಸಾದತುಲ್ಲಾ ಹುಸೈನಿ ಉದ್ಘಾಟಿಸಿದರು.
ಬಳಿಕ ಸಾಲಿಹಾತ್ ಮೈದಾನದಲ್ಲಿ ನಡೆದ “ಉಜ್ವಲ ಭವಿಷ್ಯಕ್ಕಾಗಿ” ಶೀರ್ಷಿಕೆಯಡಿ ನಡೆದ ಸಾಮುದಾಯಿಕ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಸೈಯದ್ ಸಾದತುಲ್ಲಾ ಹುಸೈನಿ, ಪ್ರಸ್ತುತ ಸಮಾಜದಲ್ಲಿ ಮುಸ್ಲಿಂ ಸಮುದಾಯವು ಬಹಳಷ್ಟು ಸವಾಲುಗಳ ನಡುವೆ ಜೀವಿಸುತ್ತಿದೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲೂ ಇಸ್ಲಾಮಿ ಅಂದೋಲನವು ವಿದ್ಯಾರ್ಥಿ-ಯುವಕರ ಮನಸ್ಸಿನಲ್ಲಿ ಮಹೋನ್ನತ ಕನಸುಗಳನ್ನು ಸೃಷ್ಟಿಸುತ್ತಿದೆ. ಪ್ರಗತಿಯ, ಮಹೋನ್ನತಿಯ ಪಯಣವು ಉನ್ನತ ಕನಸುಗಳಿಂದ ಆರಂಭವಾಗುತ್ತದೆ. ನಮ್ಮ ಕನಸುಗಳು ನಿಷ್ಕೃಷ್ಟವಾಗಿದ್ದರೆ ನಮ್ಮ ಸಮುದಾಯದ ಮಕ್ಕಳ ಭವಿಷ್ಯ ಹಾಳಾಗುವುದನ್ನು ತಪ್ಪಿಸಲು ಯಾವ ಶಕ್ತಿಯಿಂದಲೂ ಸಾಧ್ಯವಾಗುವುದಿಲ್ಲ ಎಂದರು.
ಮುಂದುವರಿದು ಮಾತನಾಡಿದ ಅವರು “ಮುಸ್ಲಿಂ ಸಮುದಾಯ ಇವತ್ತು ಬಿಕ್ಕಟ್ಟಿಗೆ ಸಿಲುಕಲು ಅತೀ ಮುಖ್ಯ ಕಾರಣ ನಮ್ಮ ಕನಸಿನ ನಿಷ್ಕೃಷ್ಟತೆಯಾಗಿದೆ. ನಾವು ಪ್ರತಿಯೊಂದು ವಿಭಾಗದಲ್ಲೂ ದೇಶಕ್ಕೆ ಕೊಡುಗೆ ನೀಡುವವರಾಗಬೇಕು. ಮುಸ್ಲಿಂ ಸಮುದಾಯ ಇತಿಹಾಸದಲ್ಲಿ, ವರ್ತಮಾನದಲ್ಲಿ ಹಾಗೂ ಭವಿಷ್ಯದ ಲ್ಲೂ ಈ ದೇಶದ ಪಾಲಿಗೆ ಕರುಣೆಯಾಗಿದೆ ಎಂದರು.
ಇವತ್ತು ಮುಸ್ಲಿಮರು ದೇಶದ ಜಗತ್ತಿನ ಪರಿಸ್ಥಿತಿಯ ಕುರಿತು ಚಿಂತಿತರಾಗಿದ್ದಾರೆ ಅದು ಸಹಜ ಕೂಡ. ಆದರೆ ಯಾರೂ ಕೂಡ ಹತಾಶರಾಗುವ ಅಗತ್ಯವಿಲ್ಲ. ಯಾಕೆಂದರೆ ಈ ಸಮುದಾಯವು ಯಾವಾಗಲೂ ಸಂಕಷ್ಟಗಳನ್ನು ಎದುರಿಸುತ್ತಲೇ ಶಕ್ತಿಯುತವಾಗಿ ಬೆಳೆದಿದೆ. ಸವಾಲುಗಳನ್ನು ಎದುರಿಸುತ್ತಲೇ ಜೀವಂತಿಕೆಯನ್ನು ಪಡೆದುಕೊಂಡಿದೆ. ಇದಕ್ಕೆ ಇತಿಹಾಸದ ಪುಟಗಳೇ ಸಾಕ್ಷಿಯಾಗಿದೆ ಎಂದರು.
ಸಮಾಜದ ವಿಷಮ ಸ್ಥಿತಿಯನ್ನು ಅವಕಾಶವಾಗಿ ಬದಲಾಯಿಸಿ ನಮ್ಮ ನೈಜ್ಯ ಪಾತ್ರವನ್ನು ನಿಭಾಯಿಸ ಬೇಕಾಗಿದೆ. ಸಂಕಷ್ಟಗಳೊಂದಿಗೆ ದೊಡ್ಡ ಅವಕಾಶಗಳು ಕೂಡ ಪ್ರಾಪ್ತವಾಗುತ್ತದೆ. ಆದ್ದರಿಂದ ಆ ಅವಕಾಶಗಳನ್ನು ಸೂಕ್ತವಾಗಿ ಬಳಸಿಕೊಳ್ಳಬೇಕಾದ ಅಗತ್ಯವಿದೆ. ದೇಶದ ವಿಷಮ ಪರಿಸ್ಥಿತಿಯನ್ನು ಕೇವಲ ಸವಾಲಾಗಿ ನೋಡದೆ ಸಮುದಾಯದ ಮಹೋನ್ನತ ಭವಿಷ್ಯದ ದಾರಿ ಹುಡುಕುವ ಅವಕಾಶವಾಗಿ ಬದಲಾಯಿಸುವ ಕುರಿತು ಚಿಂತಿಸಬೇಕಾಗಿದೆ. ಆದರೆ ಈ ಅವಕಾಶವು ಕೈ ಕಟ್ಡಿ ಕುಳಿತುಕೊಳ್ಳುವುದರಿಂದ ದಕ್ಕುವುದಿಲ್ಲ. ಮನೆಯಲ್ಲಿ ಕಾಯುತ್ತ ಕುಳಿತರೆ ಸಿಗುವುದಿಲ್ಲ ಬದಲಾಗಿ ಸವಾಲನ್ನು ಅವಕಾಶಗಳಾಗಿ ಬದಲಾಯಿಸಿ ಪರಿಹಾರ ಕಂಡುಕೊಳ್ಳಲು ತಾವು ಮುನ್ನಡೆಯ ಬೇಕಾದ ಅಗತ್ಯವಿದೆಯೆಂದು ಕರೆ ನೀಡಿದರು.
ಎಲ್ಲಿಯವರೆಗೆ ಸಮುದಾಯವು ತಮ್ಮ ಪರಿಸ್ಥಿತಿಯನ್ನು ಬದಲಾಯಿಸಿಕೊಳ್ಳಲು ಪ್ರಯತ್ನಿಸುವುದಿಲ್ಲವೋ ಅಲ್ಲಿಯವರೆಗೆ ದೇವನ್ನು ಕೂಡ ಅದರ ಪರಿಸ್ಥಿತಿಯನ್ನು ಬದಲಾಯಿಸುವುದಿಲ್ಲ. ನಮ್ಮ ಸಾಮೂಹಿಕ ವರ್ತನೆ, ಸಾಮೂಹಿಕ ಮಾನಸಿಕತೆ, ಸಾಮೂಹಿ ಚಿಂತನೆ, ಜಗತ್ತನ್ನು ನೋಡುವ ನಮ್ಮ ದೃಷ್ಟಿಕೋನ ಇದನ್ನು ಧನಾತ್ಮಕವಾಗಿ ಬದಲಾಯಿಸಿದರೆ ನಮ್ಮ ನಾಳೆಗಳು ಸಂತೋಷದಾಯಕವಾಗಿರಲು ಸಾಧ್ಯ. ಅಂಧಕಾರ ಅಳಿದು ಬೆಳಕು ಹರಿಯಬೇಕೆಂದು ನಾವು ಭಾವಿಸುವುದಾರೆ ನಮ್ಮ ವರ್ತನೆಗಳಲ್ಲಿನ ಬದಲಾವಣೆ ಅತೀ ಅಗತ್ಯ. ಅದಕ್ಕಾಗಿ ಮೊದಲು ನಾವು ಧನಾತ್ಮಕ ಮಹೋನ್ನತ ಕನಸುಗಳನ್ನು ಕಾಣಬೇಕು. ಅದು ಇಸ್ಲಾಮಿನ ಮೌಲ್ಯಗಳೊಂದಿಗೆ ಪೋಣಿಸಿಕೊಂಡಿರ ಬೇಕಾಗಿದೆ. ನಮ್ಮ ಕನಸುಗಳು ಕೇವಲ ಭದ್ರತೆ, ಸರ್ಕಾರದ ಕೆಲವೊಂದು ಯೋಜನೆಗಳಿಗೆ ಸಿಮೀತವಾಗಿರಬಾರದು. ಇದೆಲ್ಲವೂ ಖಂಡಿತ ಅಗತ್ಯವಿದೆ ಆದರೆ ಇದಕ್ಕಿಂತ ದೊಡ್ಡದಾದ ಆಲೋಚನೆಗಳನ್ನು ಸೃಷ್ಟಿಸುವ ಅಗತ್ಯವಿದೆ. ನಾವು ಸುಮಧ್ಯ ಸಮುದಾಯವಾಗಿದ್ದು ನಮ್ಮ ಜವಾಬ್ದಾರಿ ನಮ್ಮ ಮಟ್ಟಿಗೆ ಮಾತ್ರ ಸಿಮೀತವಾಗಿಲ್ಲ. ನಾವು ಇಡೀ ಮಾನವಕುಲಕ್ಕಾಗಿ ಕಳುಹಿಸಲ್ಪಟ್ಟವರು. ಎಲ್ಲರ ಜವಾಬ್ದಾರಿ ನಮ್ಮ ಮೇಲಿದೆ. ಎಲ್ಲರಿಗೂ ನ್ಯಾಯಯುತ ಸಮಾಜ, ಅತ್ಯುತ್ತಮ ಬದುಕು ಕಲ್ಪಿಸಿಕೊಡಲು ಪ್ರಯತ್ನಿಸಬೇಕಾಗಿದೆ ಎಂದು ಹೇಳಿದರು.
ನಂತರ ಮಾತನಾಡಿದ ಎಸ್.ಐ.ಓ ರಾಜ್ಯಾಧ್ಯಕ್ಷರಾದ ಝೀಶಾನ್ ಅಖಿಲ್ ಸಿದ್ದೀಕಿ, ಕರ್ನಾಟಕ ಕುವೆಂಪು, ಗುರು ನಾರಾಯಣರ ನಾಡು. ಇದು ಸರ್ವ ಜನಾಂಗದ ಶಾಂತಿಯ ನಾಡು. ಇದನ್ನು ಕಾಪಾಡುವ ಜವಾಬ್ದಾರಿ ವಿದ್ಯಾರ್ಥಿಗಳ ಮೇಲಿದೆ. ಕರ್ನಾಟಕದಲ್ಲಿ ಹಲವು ಸಮಸ್ಯೆಗಳನ್ನು ಸೃಷ್ಟಿಸಿ ದಾರಿ ತಪ್ಪಿಸುವ ಪ್ರಯತ್ನ ನಡೆಸಲಾಗುತ್ತಿದೆ. ಅದಕ್ಕಾಗಿ ಕೆಲವೊಂದು ಹಿತಾಸಕ್ತಿಗಳು ಸಕ್ರಿಯವಾಗಿದೆ ಎಂದರು.
ಸಾಮಾಜಿಕ ಜಾಲತಾಣದಲ್ಲಿ ನಮ್ಮ ಮೇಲೆ ಮಿತಿ ಮೀರಿದ ಮಾಹಿತಿಗಳನ್ನು ಹೇರಲಾಗುತ್ತಿದೆ. ಅದನ್ನು ಪರಿಶೀಲಿಸಿ ಉಪಯೋಗಿಸುವ ಅಗತ್ಯವಿದೆ. ಮಾಧ್ಯಮಗಳ ಮೂಲಕ ಯುವಕರಲ್ಲಿ ದ್ವೇಷ ಪಸರಿಸುವ ಪ್ರಯತ್ನ ನಡೆಸಲಾಗುತ್ತಿದೆ. ಇಂತಹ ಸಂದರ್ಭದಲ್ಲಿ ನಾಡನ್ನು ಕಟ್ಟುವ, ನ್ಯಾಯವನ್ನು ಸ್ಥಾಪಿಸುವ ಜವಾಬ್ದಾರಿ ನಮ್ಮ ಮೇಲಿದೆ ಎಂದು ವಿದ್ಯಾರ್ಥಿ ಸಮುದಾಯವನ್ನುದ್ದೇಶಿಸಿ ಹೇಳಿದರು.
ಈ ದೇಶದಲ್ಲಿ ಶಾಂತಿ ಸ್ಥಾಪನೆಗೆ, ನ್ಯಾಯಯುತ ಸಮಾಜದ ನಿರ್ಮಾಣಕ್ಕಾಗಿ ಯುವಕರು ಮುಂದಡಿ ಇಡಬೇಕು. ಇಂದು ಯುನಿಫಾರ್ಮ್ ಸಿವಿಲ್ ಕೋಡಿ, ವಕ್ಫ್ ಹೆಸರಿನಲ್ಲಿ ಅನಗತ್ಯ ಚರ್ಚೆಗಳನ್ನು ಹುಟ್ಡು ಹಾಕಿ ಅಭದ್ರತೆಯ ವಾತಾವರಣ ಸೃಷ್ಟಿಸಲಾಗುತ್ತಿದೆ ವಿದ್ಯಾರ್ಥಿಗಳು ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಪರಸ್ಪರ ಕೈ ಹಿಡಿದು ಮುಂದೆ ಸಾಗಬೇಕು. ಸಮುದಾಯ ಸಾಮಾಜಿಕವಾಗಿ ಒಳಗೊಳ್ಳುವ, ಸಂಬಂಧಗಳನ್ನು ಗಟ್ಟಿಯಾಗಿ ಬೇರೂರುವಂತೆ ಕಾಪಾಡಿಕೊಳ್ಳಬೇಕಾದ ಅಗತ್ಯದೊಂದಿಗೆ ಅರ್ಥಿಕ, ರಾಜಕೀಯ ಮತ್ತು ಸಾಮಾಜಿಕವಾಗಿ ಕೂಡಿ ಬೆಳೆಯುವ ಅಗತ್ಯವಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಜಮಾಅತೆ ಇಸ್ಲಾಮ್ ಹಿಂದ್ ರಾಷ್ಟ್ರೀಯ ಉಪಾಧ್ಯಕ್ಷರಾದ ಜನಾಬ್ ಮಲಿಕ್ ಮೊಹ್’ತಸೀಮ್ ಖಾನ್, ಜಮಾಅತೆ ಇಸ್ಲಾಮಿ ಹಿಂದ್ ರಾಜ್ಯಾಧ್ಯಕ್ಷರಾದ ಬೆಳಗಾಮಿ ಮುಹಮ್ಮದ್ ಸಾದ್, ಎಸ್‌ಐ.ಓ ರಾಷ್ಟ್ರೀಯ ಅಧ್ಯಕ್ಷರಾದ ರಮೀಸ್ ಇ.ಕೆ, ನೂತನವಾಗಿ ಚುನಾಯಿತರಾದ ಎಸ್.ಐ.ಓ ರಾಷ್ಟ್ರೀಯ ಅಧ್ಯಕ್ಷರಾದ ಅಬ್ದುಲ್ ಹಾಫೀಝ್ ಮಾತನಾಡಿದರು.
ನೂತನ ಕಟ್ಟಡದ ಉದ್ಘಾಟನೆಯ ನಂತರ ಸಾಲಿಹಾತ್ ಸಮೂಹ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷರಾದ ಇದ್ರಿಸ್ ಹೂಡೆ ಸಂಸ್ಥೆಯ ಪರಿಚಯ ಮಾಡಿದರು. ಸಮಾವೇಶದಲ್ಲಿ ಜಮಾಅತೆ ಇಸ್ಲಾಮಿ ಹಿಂದ್ ವಲಯ ಸಂಚಾಲಕ ಸಯ್ಯಿದ್ ಇಸ್ಮಾಯಿಲ್ ಪ್ರಸ್ತಾವಿಕ ಭಾಷಣ ಮಾಡಿದರು. ಜಮಾಅತೆ ಇಸ್ಲಾಮಿ ಹಿಂದ್ ಉಡುಪಿ ಜಿಲ್ಲಾಧ್ಯಕ್ಷರಾದ ಅಬ್ದುಲ್ ಅಝೀಝ್ ಅವರು ಸ್ವಾಗತ ಭಾಷಣ ನೆರವೇರಿಸಿದರು. ಮೌಲನ ಇಮ್ರಾನುಲ್ಲಾ ಖಾನ್ ಮನ್ಸೂರಿ ಕಿರಾತ್ ಪಠಿಸಿದರು. ಎಸ್.ಐ.ಓ ಉಡುಪಿ ಜಿಲ್ಲಾಧ್ಯಕ್ಷರಾದ ಆಯಾನ್ ಮಲ್ಪೆ ಧನ್ಯವಾದವಿತ್ತರು. ಸಿಐಓ ವಿದ್ಯಾರ್ಥಿನಿಯರು ತರಾನ ಹಾಡಿದರು. ಸಮೀರ್ ಪಾಶ ಮತ್ತು ಸಮೀರ್ ತೀರ್ಥಹಳ್ಳಿ ಕಾರ್ಯಕ್ರಮ ನಿರೂಪಿಸಿದರು.
ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಸಾಲಿಹಾತ್ ಸಮೂಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಮುಹಮ್ಮದ್ ಇಸ್ಮಾಯಿಲ್, ಮೌಲನ ಆದಂ ಸಾಹೇಬ್, ಕುಲ್ಸುಮ್ ಅಬುಬಕ್ಕರ್, ನುಝ್ಲಾ ಫಾತಿಮಾ ಸೇರಿದಂತೆ ಹಲವಾರು ಮಂದಿ ಉಪಸ್ಥಿತರಿದ್ದರು.