ಪ್ರತಿಷ್ಠಿತ ಸೀನಿಯರ್ ರಾಷ್ಟ್ರೀಯ ಕುಸ್ತಿ ಚಾಂಪಿಯನ್‌ಶಿಪ್‌ 2024: ಬೆಂಗಳೂರಿಗೆ ಬಂದಿಳಿದ ದೇಶದ ಅಗ್ರಮಾನ್ಯ ಕುಸ್ತಿಪಟುಗಳು; ಡಿಸೆಂಬರ್ 6ರಿಂದ 8 ರವರೆಗೆ ಬೆಂಗಳೂರಿನ ಕೋರಮಂಗಲ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯಲಿರುವ ದೇಶದ ಪ್ರತಿಷ್ಠಿತ ಕುಸ್ತಿ ಚಾಂಪಿಯನ್‌ಶಿಪ್‌

ಪ್ರತಿಷ್ಠಿತ ಸೀನಿಯರ್ ರಾಷ್ಟ್ರೀಯ ಕುಸ್ತಿ ಚಾಂಪಿಯನ್‌ಶಿಪ್‌ 2024: ಬೆಂಗಳೂರಿಗೆ ಬಂದಿಳಿದ ದೇಶದ ಅಗ್ರಮಾನ್ಯ ಕುಸ್ತಿಪಟುಗಳು; ಡಿಸೆಂಬರ್ 6ರಿಂದ 8 ರವರೆಗೆ ಬೆಂಗಳೂರಿನ ಕೋರಮಂಗಲ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯಲಿರುವ ದೇಶದ ಪ್ರತಿಷ್ಠಿತ ಕುಸ್ತಿ ಚಾಂಪಿಯನ್‌ಶಿಪ್‌

ಬೆಂಗಳೂರು: ದೇಶದ ಐಟಿ ರಾಜಧಾನಿ ಬೆಂಗಳೂರಿನ ಕೋರಮಂಗಲ ಒಳಾಂಗಣ ಕ್ರೀಡಾಂಗಣದಲ್ಲಿ ಡಿಸೆಂಬರ್ 6ರಂದು ಆರಂಭವಾಗಲಿರುವ ಸೀನಿಯರ್ ರಾಷ್ಟ್ರೀಯ ಕುಸ್ತಿ ಚಾಂಪಿಯನ್‌ಶಿಪ್‌ 2024 ಕೂಟದಲ್ಲಿ ಭಾಗವಹಿಸಲು ದೇಶದ ಅಗ್ರಮಾನ್ಯ ಕುಸ್ತಿಪಟುಗಳು ಬೆಂಗಳೂರಿಗೆ ಆಗಮಿಸಿದ್ದಾರೆ.

ಕರ್ನಾಟಕ ಕುಸ್ತಿ ಸಂಸ್ಥೆಯ (ಕೆಡಬ್ಲ್ಯುಎ) ಅಧ್ಯಕ್ಷ ಹಾಗೂ ಭಾರತ ಕುಸ್ತಿ ಒಕ್ಕೂಟದ ಜಂಟಿ ಕಾರ್ಯದರ್ಶಿಗಳಾಗಿರುವ ಬೆಳ್ಳಿಪ್ಪಾಡಿ ಗುಣರಂಜನ್ ಶೆಟ್ಟಿಯವರ ನಾಯಕತ್ವದಲ್ಲಿ ಸೀನಿಯರ್ ರಾಷ್ಟ್ರೀಯ ಕುಸ್ತಿ ಚಾಂಪಿಯನ್‌ಶಿಪ್‌ ಬೆಂಗಳೂರಿನಲ್ಲಿ ಆಯೋಜನೆಗೊಂಡಿದ್ದು, ಮೂರು ದಿನಗಳ ಕಾಲ ನಡೆಯಲಿರುವ ಕ್ರೀಡಾಕೂಟದಲ್ಲಿ ಅಂತರಾಷ್ಟ್ರೀಯ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ ಕುಸ್ತಿಪಟುಗಳು ಅತ್ಯುನ್ನತ ಗೌರವವನ್ನು ಸಂಪಾದಿಸಲು ಸ್ಪರ್ಧೆಗಿಳಿಯಲಿದ್ದಾರೆ.

ಒಟ್ಟು 24 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಕುಸ್ತಿಪಟುಗಳು ಈ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ಪಾಲ್ಗೊಳ್ಳಲಿದ್ದು, ಹರಿಯಾಣ ರಾಜ್ಯದಿಂದ ಅತೀ ಹೆಚ್ಚು 28 ಕುಸ್ತಿಪಟುಗಳು ವಿವಿಧ ವಿಭಾಗಗಳಲ್ಲಿ ಸ್ಪರ್ಧಿಸಲಿದ್ದಾರೆ.

ಮಣಿಪುರ, ಮಿಜೋರಾಂ, ನಾಗಾಲ್ಯಾಂಡ್, ಜಮ್ಮು ಮತ್ತು ಕಾಶ್ಮೀರ, ಆಂಧ್ರಪ್ರದೇಶ, ಚಂಡೀಗಢ, ದೆಹಲಿ, ಛತ್ತೀಸ್’ಗಢ, ಗುಜರಾತ್, ಹಿಮಾಚಲ ಪ್ರದೇಶ, ಕೇರಳ, ಮಧ್ಯಪ್ರದೇಶ, ಮಹಾರಾಷ್ಟ್ರ, ಪುದುಚೇರಿ, ಪಂಜಾಬ್, ರಾಜಸ್ಥಾನ, ತಮಿಳುನಾಡು, ತೆಲಂಗಾಣ, ಉತ್ತರ ಪ್ರದೇಶ, ಉತ್ತರಾಖಂಡ್ ಮತ್ತು ಪಶ್ಚಿಮ ಬಂಗಾಳ ಸೇರಿದಂತೆ ದೇಶಾದ್ಯಂತ ಒಟ್ಟು 700 ಕುಸ್ತಿಪಟುಗಳು ತಮ್ಮ ಹೆಸರು ನೊಂದಾಯಿಸಿಕೊಂಡಿದ್ದಾರೆ.

ಆತಿಥೇಯ ಕರ್ನಾಟಕ ತಂಡ ಗ್ರೀಕೋ ರೋಮನ್, ಫ್ರೀಸ್ಟೈಲ್ ಮತ್ತು ಮಹಿಳಾ ಸ್ಪರ್ಧೆಗಳು ಸೇರಿದಂತೆ ಬಲಿಷ್ಠ 32 ಕುಸ್ತಿಪಟುಗಳೊಂದಿಗೆ ಚಾಂಪಿಯನ್‌ಶಿಪ್‌ಗೆ ಎಂಟ್ರಿ ಕೊಟ್ಟಿದೆ. ಕರ್ನಾಟಕ ತಂಡವನ್ನು ಪದಕ ಗೆಲ್ಲುವ ನೆಚ್ಚಿನ ಸ್ಪರ್ಧಿಗಳಾದ ಗೋಪಾಲ್ ಕೋಲಿ, ಮಹೇಶ್ ಪಿ. ಗೌಡ ಮತ್ತು ಶ್ವೇತಾ ಸಂಜು ಅಣ್ಣಿಕೇರಿ ಮುನ್ನಡೆಸಲಿದ್ದಾರೆ.

ಮಹಿಳೆಯರ 50 ಕೆ.ಜಿ ವಿಭಾಗದಲ್ಲಿ ಸ್ಪರ್ಧಿಸಲಿರುವ ಮಣಿಪುರದ ಕುಸ್ತಿಪಟು ವೈ.ಮೀನಾಕ್ಷಿ ದೇವಿ ಅವರು ಕುತೂಹಲದ ಕೇಂದ್ರಬಿಂದುವಾಗಿದ್ದಾರೆ. ಈ ವರ್ಷದ ಆರಂಭದಲ್ಲಿ ಜೋರ್ಡನ್‌ನಲ್ಲಿ ನಡೆದ 23ರ ವಯೋಮಿತಿಯ ಏಷ್ಯನ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ ಗೆದ್ದಿರುವ ಮೀನಾಕ್ಷಿ ದೇವಿ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಪದಕ ಗೆದ್ದ ಸಾಧನೆ ಮಾಡಿದ್ದಾರೆ. ಮಹಿಳೆಯರ 53 ಕೆ.ಜಿ ವಿಭಾಗದಲ್ಲಿ ಸ್ಪರ್ಧಿಸಲಿರುವ ಜ್ಯೋತಿ, ಟೂರ್ನಿಯಲ್ಲಿ ಗಮನ ಸೆಳೆದಿರುವ ಮತ್ತೊಬ್ಬ ಕುಸ್ತಿಪಟು. ಸ್ಪೇನ್‌ನಲ್ಲಿ ಈ ವರ್ಷ ನಡೆದ ಕಿರಿಯ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಸ್ಪರ್ಧಿಸಿದ್ದ ಜ್ಯೋತಿ, ಕೆಡೆಟ್ ಏಷ್ಯನ್ ಚಾಂಪಿಯನ್‌ಶಿಪ್‌ನಲ್ಲಿ ಪದಕ ಗೆದ್ದ ಸಾಧನೆ ಮಾಡಿದ್ದರು. ಹರಿಯಾಣದ ಅಂಜಲಿ ಮಹಿಳೆಯರ 59 ಕೆ.ಜಿ ವಿಭಾಗದಲ್ಲಿ ಸ್ಪರ್ಧಿಸಲಿದ್ದಾರೆ. 2022ರ ಏಷ್ಯನ್ ಗೇಮ್ಸ್’ನಲ್ಲಿ ಸ್ಪರ್ಧಿಸಿದ್ದ ಹರಿಯಾಣದ ರಾಧಿಕಾ 68 ಕೆ.ಜಿ ವಿಭಾಗದಲ್ಲಿ ಸ್ಪರ್ಧಿಸಲಿದ್ದಾರೆ. ಸೀನಿಯರ್ ಏಷ್ಯನ್ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ಕಂಚಿನ ಪದಕ ಗೆದ್ದಿದ್ದ ದೆಹಲಿಯ ಸುಷ್ಮಾ ಶೋಕೀನ್ 53 ಕೆ.ಜಿ ವಿಭಾಗದಲ್ಲಿ ಹಾಗೂ ಕಿರಿಯರ ಏಷ್ಯನ್ ಚಾಂಪಿಯನ್, ದೆಹಲಿಯ ಬಿಪಾಶಾ 72 ಕೆ.ಜಿ ವಿಭಾಗದಲ್ಲಿ ಸ್ಪರ್ಧೆಗಿಳಿಯಲಿದ್ದಾರೆ.

ಪುರುಷರ ವಿಭಾಗದಲ್ಲಿ ಅರ್ಜುನ ಪ್ರಶಸ್ತಿ ವಿಜೇತ ಹಾಗೂ ಏಷ್ಯನ್ ಗೇಮ್ಸ್ ಕಂಚಿನ ಪದಕ ವಿಜೇತ, ಹರಿಯಾಣದ ದಬಾರ್ಪುರ್ಯ 87 ಕೆ.ಜಿ ಗ್ರೀಕೋ ರೋಮನ್ ವಿಭಾಗದಲ್ಲಿ ಸ್ಪರ್ಧಿಸಲಿದ್ದಾರೆ. ಕೆನಡಾದಲ್ಲಿ 2023ರಲ್ಲಿ ನಡೆದ ವಿಶ್ವ ಪೊಲೀಸ್ ಗೇಮ್ಸ್‌ನಲ್ಲಿ ಚಿನ್ನದ ಪದಕ ಗೆದ್ದಿದ್ದ ಹರಿಯಾಣದವರೇ ಆದ ಸನ್ನಿ 63 ಕೆ.ಜಿ ವಿಭಾಗದಲ್ಲಿ ಸ್ಪರ್ಧಿಸಲಿದ್ದಾರೆ. ಹಿರಿಯರ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಸ್ಪರ್ಧಿಸಿದ್ದ ಹರಿಯಾಣದ ಅನುಜ್ ಕುಮಾರ್ 70 ಕೆ.ಜಿ ಫ್ರೀಸ್ಟೈಲ್ ವಿಭಾಗದಲ್ಲಿ ಚಿನ್ನದ ಪದಕ ಗೆಲ್ಲುವ ನೆಚ್ಚಿನ ಸ್ಪರ್ಧಿಯಾಗಿದ್ದಾರೆ.

ಪುಣೆಯಲ್ಲಿ ನಡೆದ ಈ ಹಿಂದಿನ ರಾಷ್ಟ್ರೀಯ ಚಾಂಪಿಯನ್‌ಶಿಪ್‌ನಲ್ಲಿ ಕಂಚಿನ ಪದಕ ಗೆದ್ದಿರುವ ಮಧ್ಯಪ್ರದೇಶದ ಲಲಿತ್ ಕೌಶಲ್ ಪುರುಷರ 61 ಕೆ.ಜಿ ಫ್ರೀಸ್ಟೈಲ್ ವಿಭಾಗದಲ್ಲಿ ಸ್ಪರ್ಧಿಸುತ್ತಿದ್ದು, ಬೆಂಗಳೂರಿನಲ್ಲಿ ಇದೇ ಮೊದಲ ಬಾರಿ ನಡೆಯುತ್ತಿರುವ ಹಿರಿಯರ ರಾಷ್ಟ್ರೀಯ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಲು ಉತ್ಸುಕರಾಗಿರುವುದಾಗಿ ತಿಳಿಸಿದ್ದಾರೆ.

“ರಾಷ್ಟ್ರೀಯ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಲು ನಾವೆಲ್ಲಾ ಮೊದಲ ಬಾರಿ ಬೆಂಗಳೂರಿಗೆ ಆಗಮಿಸಿದ್ದೇವೆ. ದಕ್ಷಿಣ ಭಾರತದಲ್ಲಿ ಹೆಚ್ಚು ಹೆಚ್ಚು ಕುಸ್ತಿ ಪಂದ್ಯಾವಳಿಗಳು ನಡೆಯುತ್ತಿರುವುದನ್ನು ನೋಡಲು ಖುಷಿಯಾಗುತ್ತದೆ.  2023ರಲ್ಲಿ ಕೇರಳದಲ್ಲಿ ಕುಸ್ತಿ ಚಾಂಪಿಯನ್‌ಶಿಪ್‌ ನಡೆದಿತ್ತು. ಬೆಂಗಳೂರಿನಲ್ಲಿ ಇದೇ ಮೊದಲ ಬಾರಿ ರಾಷ್ಟ್ರೀಯ ಕುಸ್ತಿ ಚಾಂಪಿಯನ್‌ಶಿಪ್‌ ನಡೆಯುತ್ತಿರುವುದು ಸಂತಸ ತಂದಿದೆ. ಕೋರಮಂಗಲ ಒಳಾಂಗಣ ಕ್ರೀಡಾಂಗಣ ಸ್ಪರ್ಧೆಗೆ, ವಾಸ್ತವ್ಯಕ್ಕೆ ಅತ್ಯುತ್ತಮ ದರ್ಜೆಯ ವ್ಯವಸ್ಥೆಯನ್ನು ಹೊಂದಿದ್ದು, ಕುಸ್ತಿಪಟುಗಳಿಗೆ ಅತ್ಯುತ್ತಮ ಗುಣಮಟ್ಟದ ಆಹಾರಗಳನ್ನು ನೀಡಲಾಗುತ್ತಿದೆ. ಸ್ಪರ್ಧಾಳುಗಳು ತಮ್ಮ ಅತ್ಯುತ್ತಮ ಪ್ರದರ್ಶನವನ್ನು ನೀಡಲು ಸಹಕಾರಿಯಾಗುವಂತೆ ಉತ್ತಮ ವ್ಯವಸ್ಥೆಗಳ್ನು ಒದಗಿಸುವುದಾಗಿ ಆಯೋಜಕರು ಭರವಸೆ ನೀಡಿದ್ದಾರೆ. ವೈಯಕ್ತಿಕವಾಗಿ ಹೇಳುವುದಾದರೆ, ನಾನು ಈ ಪಂದ್ಯಾವಳಿಗೆ ಒಳ್ಳೆಯ ಸಿದ್ಧತೆಯನ್ನು ನಡೆಸಿದ್ದು, ಪದಕದ ನಿರೀಕ್ಷೆಯಲ್ಲಿದ್ದೇನೆ”ಎಂದು ಲಲಿತ್ ಕೌಶಲ್ ತಿಳಿಸಿದ್ದಾರೆ.

ಇಂದೋರ್’ನ 21 ವರ್ಷದ ಲಲಿತ್, ದೆಹಲಿಯ ನೀರಜ್ ಅವರಿಂದ ತಮಗೆ ಕಠಿಣ ಸ್ಪರ್ಧೆ ಎದುರಾಗುವ ಸಾಧ್ಯತೆಯಿದೆ ಎಂದಿದ್ದಾರೆ. “ಅವರು ತಮ್ಮ ದೇಹ ತೂಕ ಇಳಿಸಿಕೊಂಡಿದ್ದಾರೆ ಮತ್ತು ಮೊದಲ ಬಾರಿ 61 ಕೆ.ಜಿ ವಿಭಾಗದಲ್ಲಿ ಸ್ಪರ್ಧಿಸುತ್ತಿದ್ದಾರೆ. ನಮ್ಮ ವಿಭಾಗದಲ್ಲಿ ಅವರು ನಮಗೆ ಅತ್ಯಂತ ಕಠಿಣ ಸ್ಪರ್ಧೆಯೊಡ್ಡುವ ನಿರೀಕ್ಷೆಯಿದೆ’’ ಎಂದು ಲಲಿತ್ ಕೌಶಲ್ ಹೇಳಿದ್ದಾರೆ.

ಚಾಂಪಿಯನ್‌ಶಿಪ್‌ನಲ್ಲಿ ಪಂಜಾಬ್‌ನ ಸ್ಪರ್ಧಿಗಳು ಉತ್ತಮ ಪ್ರದರ್ಶನ ತೋರುವ ಬಗ್ಗೆ 125 ಕೆ.ಜಿ ವಿಭಾಗದಲ್ಲಿ ಸ್ಪರ್ಧಿಸಲಿರುವ ಪಂಜಾಬ್‌ನ ಕರಣ್‌ದೀಪ್ ಸಿಂಗ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. 

“ರೈಲ್ವೆ ಸ್ಪೋರ್ಟ್ಸ್ ಪ್ರಮೋಷನ್ ಬೋರ್ಡ್‌ನಿಂದ ಬಂದಿರುವ 4-5 ಕುಸ್ತಿಪಟುಗಳು ಪಂಜಾಬ್ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. ನಾನು ಕೂಡ ರೈಲ್ವೇಸ್‌ನವನಾಗಿದ್ದು ಈ ಬಾರಿ ಪಂಜಾಬ್ ತಂಡವನ್ನು ಪ್ರತಿನಿಧಿಸುತ್ತಿದ್ದೇನೆ. ಈ ವರ್ಷದ ಆರಂಭದಲ್ಲಿ ಜೈಪುರದಲ್ಲಿ ನಡೆದ ನ್ಯಾಷನಲ್ಸ್’ನಲ್ಲಿ ನಾನು ಬೆಳ್ಳಿ ಪದಕ ಗೆದ್ದಿದ್ದೆ. ಆಗ ನಾನು 97 ಕೆ.ಜಿ ವಿಭಾಗದಲ್ಲಿ ಸ್ಪರ್ಧಿಸಿದ್ದೆ. ಆ ಪಂದ್ಯಾವಳಿಯ ನಂತರ ನಾನು ಗಾಯದ ಸಮಸ್ಯೆಗೆ ಒಳಗಾಗಿದ್ದೆ ಮತ್ತು ನನ್ನ ದೇಹತೂಕವೂ ಹೆಚ್ಚಿತ್ತು. ಹೀಗಾಗಿ 125 ಕೆ.ಜಿ ವಿಭಾಗದಲ್ಲಿ ತರಬೇತಿ ಮುಂದುವರಿಸಿದ್ದೆ. ಪಂಜಾಬ್ ಈ ಬಾರಿ ಬಲಿಷ್ಠ ತಂಡದೊಂದಿಗೆ ಸ್ಪರ್ಧಿಸುತ್ತಿದೆ. ಬೆಂಗಳೂರಿನಲ್ಲಿ ಈ ಪಂದ್ಯಾವಳಿ ನಡೆಯುತ್ತಿರುವುದು ಸಂತಸ ತಂದಿದ್ದು, ಇಲ್ಲಿನ ವಾತಾವರಣ ಉತ್ತಮವಾಗಿ ಕಾಣುತ್ತಿದೆ” ಎಂದು ಕರಣ್‌ದೀಪ್ ಸಿಂಗ್ ಹೇಳಿದ್ದಾರೆ.

ಸಂಗೀತ ಮಾಂತ್ರಿಕ ಡಾ.ಗುರುಕಿರಣ್ ರಾಷ್ಟ್ರೀಯ ಚಾಂಪಿಯನ್‌ಶಿಪ್‌ಗಾಗಿ ವಿಶೇಷ ಗೀತೆಯೊಂದನ್ನು ಸಿದ್ಧಪಡಿಸಿದ್ದಾರೆ.

ಪ್ರಶಸ್ತಿ ವಿಜೇತ ಸಂಗೀತ ಸಂಯೋಜಕ ಡಾ.ಗುರುಕಿರಣ್ ಅವರು ಪ್ರತಿಷ್ಠಿತ ಪಂದ್ಯಾವಳಿಗಾಗಿ ವಿಶೇಷ ಗೀತೆಯನ್ನು ರಚಿಸುವ ಮೂಲಕ ಕರ್ನಾಟಕದಲ್ಲಿ ನಡೆಯುತ್ತಿರುವ ಮೊದಲ ಸೀನಿಯರ್ ರಾಷ್ಟ್ರೀಯ ಕುಸ್ತಿ ಚಾಂಪಿಯನ್‌ಶಿಪ್ 2024ಗೆ ತಮ್ಮ ಅಪ್ರತಿಮ ಬೆಂಬಲವನ್ನು ನೀಡಿದ್ದಾರೆ. 

ಕರ್ನಾಟಕ ಕುಸ್ತಿ ಸಂಸ್ಥೆಯ (ಕೆಡಬ್ಲ್ಯುಎ) ಅಧ್ಯಕ್ಷ ಮತ್ತು ಭಾರತ ಕುಸ್ತಿ ಫೆಡರೇಶನ್‌ನ ಜಂಟಿ ಕಾರ್ಯದರ್ಶಿ ಬೆಳ್ಳಿಪ್ಪಾಡಿ ಗುಣರಂಜನ್ ಶೆಟ್ಟಿ ಅವರು ಡಾ.ಗುರುಕಿರಣ್ ಅವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ ಮತ್ತು  ಪಂದ್ಯಾವಳಿಯಲ್ಲಿ ಭಾಗವಹಿಸಲಿರುವ ಎಲ್ಲರಿಗೂ ಆತ್ಮೀಯ ಸ್ವಾಗತವನ್ನು ಕೋರಿದ್ದಾರೆ. “ದೇಶದ ಬೇರೆ ಬೇರೆ ಕಡೆಗಳಿಂದ ಆಗಮಿಸಿರುವ ಕುಸ್ತಿಪಟುಗಳಿಗೆ ನಾವು ಆತ್ಮೀಯ ಸ್ವಾಗತವನ್ನು ಕೋರುತ್ತೇವೆ. ಕುಸ್ತಿಪಟುಗಳು ಸ್ಪರ್ಧಿಸಲು ಮತ್ತು ತಮ್ಮ ಅತ್ಯುತ್ತಮ ಪ್ರದರ್ಶನ ನೀಡಲು ಪೂರಕವಾಗಿ ಕೆಡಬ್ಲ್ಯುಎ ತಂಡ ಕಳೆದ ಕೆಲ ವಾರಗಳಿಂದ ದಣಿವರಿಯದೆ ಕೆಲಸ ಮಾಡಿದೆ. ಅಷ್ಟೇ ಅಲ್ಲದೆ, ನಮ್ಮ ರಾಜ್ಯದ ಸಂಸ್ಕೃತಿ ಮತ್ತು ಪರಂಪರೆಯನ್ನು ಪ್ರದರ್ಶಿಸಲು ನಾವು ವ್ಯವಸ್ಥೆ ಮಾಡಿದ್ದೇವೆ. ಎಲ್ಲಾ ಸ್ಪರ್ಧಿಗಳು ನಮ್ಮ ರಾಜ್ಯದ ಆತಿಥ್ಯವನ್ನು ಆನಂದಿಸಲಿದ್ದಾರೆ ಎಂದು ಭಾವಿಸುತ್ತೇನೆ ಮತ್ತು ಅವರೆಲ್ಲರಿಗೂ ನಾನು ಶುಭ ಹಾರೈಸುತ್ತೇನೆ” ಎಂದು ಬೆಳ್ಳಿಪ್ಪಾಡಿ ಗುಣರಂಜನ್ ಶೆಟ್ಟಿ ಹೇಳಿದ್ದಾರೆ.

“ಕಾರ್ಯಕ್ರಮದ ಸಂದರ್ಭದಲ್ಲಿ ಕ್ರೀಡಾಂಗಣದಲ್ಲಿ ಲವಲವಿಕೆಯ ವಾತಾವರಣವನ್ನು ಸೃಷ್ಟಿಸಲಿರುವ ಗೀತೆಯನ್ನು ರಚಿಸುವ ಮೂಲಕ ಪಂದ್ಯಾವಳಿಗೆ ತಮ್ಮ ಬೆಂಬಲವನ್ನು ಸೂಚಿಸಿರುವ ದಿಗ್ಗಜ ಸಂಗೀತ ಸಂಯೋಜಕ ಡಾ.ಗುರುಕಿರಣ್ ಅವರಿಗೆ ನಾನು ಆಭಾರಿಯಾಗಿದ್ದೇನೆ. ಎಲ್ಲಾ ಕ್ರೀಡಾ ಉತ್ಸಾಹಿಗಳು, ಕ್ರೀಡಾ ಪ್ರೇಮಿಗಳು ಕೋರಮಂಗಲದ ಒಳಾಂಗಣ ಕ್ರೀಡಾಂಗಣಕ್ಕೆ ಭೇಟಿ ನೀಡುವಂತೆ ವಿನಂತಿಸುತ್ತೇನೆ” ಎಂದು ಬೆಳ್ಳಿಪ್ಪಾಡಿ ಗುಣರಂಜನ್ ಶೆಟ್ಟಿ ಇದೇ ವೇಳೆ ತಿಳಿಸಿದ್ದಾರೆ.

ಚಾಂಪಿಯನ್‌ಶಿಪ್ ಒಟ್ಟು ಮೂರು ವಿಭಾಗಗಲ್ಲಿ ನಡೆಯಲಿವೆ: ಫ್ರೀಸ್ಟೈಲ್, ಗ್ರೀಕೋ ರೋಮನ್ ಸ್ಟೈಲ್ ಮತ್ತು ಮಹಿಳಾ ಕುಸ್ತಿ.

ಡಬ್ಲ್ಯುಎಫ್ಐ ಮತ್ತು ಯುಡಬ್ಯುಡಬ್ಯು ಕುಸ್ತಿ ನಿಯಮಗಳ ಪ್ರಕಾರ 3 ಅನುಮೋದಿತ ಮ್ಯಾಟ್‌ಗಳ ಮೇಲೆ ಈ ಕೆಳಗಿನ ಸ್ಪರ್ಧೆಗಳನ್ನು ನಡೆಸಲಾಗುತ್ತದೆ. 

ಫ್ರೀಸ್ಟೈಲ್ ಕುಸ್ತಿ: 57 ಕೆ.ಜಿ, 61 ಕೆ.ಜಿ,  65 ಕೆ.ಜಿ, 70 ಕೆ.ಜಿ, 74 ಕೆ.ಜಿ, 79 ಕೆ.ಜಿ, 86 ಕೆ.ಜಿ, 92 ಕೆ.ಜಿ, 97 ಕೆ.ಜಿ ಮತ್ತು 125 ಕೆ.ಜಿ.

ಗ್ರೀಕೋ ರೋಮನ್ ಸ್ಟೈಲ್: 55 ಕೆ.ಜಿ, 60 ಕೆ.ಜಿ, 63 ಕೆ.ಜಿ, 67 ಕೆ.ಜಿ, 72 ಕೆ.ಜಿ, 77 ಕೆ.ಜಿ, 82 ಕೆ.ಜಿ, 87 ಕೆ.ಜಿ, 97 ಕೆ.ಜಿ ಮತ್ತು 130 ಕೆ.ಜಿ.

ಮಹಿಳಾ ಕುಸ್ತಿ: 50 ಕೆ.ಜಿ, 53 ಕೆ.ಜಿ, 55 ಕೆ.ಜಿ, 57 ಕೆ.ಜಿ, 59 ಕೆ.ಜಿ, 62 ಕೆ.ಜಿ, 65 ಕೆ.ಜಿ, 68 ಕೆ.ಜಿ, 72 ಕೆ.ಜಿ ಮತ್ತು 76 ಕೆ.ಜಿ.

ಕೋರಮಂಗಲದ ಒಳಾಂಗಣ ಕ್ರೀಡಾಂಗಣದಲ್ಲಿ ಪಂದ್ಯಗಳನ್ನು ವೀಕ್ಷಿಸಲು ಸಾರ್ವಜನಿಕರಿಗೆ ಉಚಿತ ಪ್ರವೇಶವನ್ನು ಕಲ್ಪಿಸಲಾಗಿದೆ.

Ads on article

Advertise in articles 1

advertising articles 2

Advertise under the article